ಬೆಂಗಳೂರು: ನಗರದ ಸ್ವಾತಂತ್ರ್ಯ ಉದ್ಯಾನಕ್ಕೆ ಮಂಗಳವಾರ ಮಧ್ಯಾಹ್ನ 12ರ ವೇಳೆಗೆ ಹಲವು ಕಡೆಯಿಂದ ಪ್ರತಿಭಟನಕಾರರು ಬಂದು ಜಮಾವಣೆಗೊಂಡರು. ರ್‍ಯಾಲಿ ನಡೆಸಲು ಮುಂದಾಗಿದ್ದ ಹೋರಾಟಗಾರರನ್ನು ಅಲ್ಲಲ್ಲಿ ವಶಕ್ಕೆ ಬಸ್‌ನಲ್ಲಿ ಕರೆತಂದು ಸ್ವಾತಂತ್ರ್ಯ ಉದ್ಯಾನಕ್ಕೆ ಬಿಡಲಾಯಿತು. ಬಳಿಕ ನಡೆದ ಸಮಾವೇಶದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಕಾರರು ಆಕ್ರೋಶ ಹೊರಹಾಕಿ, ಧಿಕ್ಕಾರ ಕೂಗಿದರು.
ಆಮ್ ಆದ್ಮಿ ಪಕ್ಷದ ರಾಜ್ಯ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಮಾತನಾಡಿ, ‘ತಕ್ಷಣವೇ ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರನ್ನು ಸ್ಥಗಿತಗೊಳಿಸಬೇಕು. ಸರ್ಕಾರ ಈಗಲೇ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಮತ್ತೆ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.
‘ಇದು ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಾಗಿದ್ದು, ನ್ಯಾಯಾಲಯಕ್ಕೂ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕು. ತಮಿಳುನಾಡಿಗೆ ನೀರು ಬಿಡಬೇಕು ಎನ್ನುವ ಆದೇಶವನ್ನು ಹಿಂಪಡೆಯಬೇಕು’ ಎಂದು ಕೋರಿದರು.
‘ನೀರಿಲ್ಲದಿದ್ದರೂ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ನೀರು ಬಿಡುವುದಿಲ್ಲ ಎಂದು ಸರ್ಕಾರ ಹೇಳುತ್ತದೆ. ರಾತ್ರೋರಾತ್ರಿ 5 ಸಾವಿರ ಕ್ಯೂಸೆಕ್ ನೀರು ಬಿಟ್ಟು 3.5 ಸಾವಿರ ಕ್ಯೂಸೆಕ್ ನೀರು ಹರಿಸುತ್ತಿದ್ದೇವೆ ಎಂದು ಹೇಳುತ್ತಿದೆ. ರಾಜ್ಯ ಸರ್ಕಾರವೇ ತಮಿಳುನಾಡಿಗೆ ಬೆಂಬಲ ಸೂಚಿಸುವುದರ ಜೊತೆಗೆ ಕಾನೂನಿನ ಕುಣಿಕೆಗೆ ಹೆದರುತ್ತಿದೆ‘ ಎಂದು ಹೇಳಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಇದು ರೈತರಿಗಾಗಿ, ಕನ್ನಡಿಗರಿಗಾಗಿ ನಡೆಯುತ್ತಿರುವ ಬಂದ್ ಆಗಿದೆ. ಪೊಲೀಸರ ಮೂಲಕ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಲಾಯಿತು. ನಮ್ಮ ಹೋರಾಟ ಬೆಂಗಳೂರು ಮತ್ತು ಕರ್ನಾಟಕದ ಜೀವನದಿ ಕಾವೇರಿಗಾಗಿ ಎಂದು ಹೇಳಿದರು.
ನಗರದ ಟೌನ್‌ಹಾಲ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲು ಮೊದಲೇ ಘೋಷಣೆ ಮಾಡಲಾಗಿತ್ತು. ಜೊತೆಗೆ ಪ್ರತಿಭಟನೆಗೆ ಪೊಲೀಸರಿಂದ ಅನುಮತಿ ಪಡೆಯಲಾಗಿತ್ತು. ಆದರೂ ಏಕಾಏಕಿ ಮಧ್ಯರಾತ್ರಿಯಿಂದಲೇ ನಿಷೇಧಾಜ್ಞೆ ಜಾರಿ ಮಾಡಿ ರ್‍ಯಾಲಿಗೆ ತಡೆಯೊಡ್ಡಲಾಯಿತು ಎಂದು ದೂರಿದರು. ಮಂಡ್ಯ ರೈತ ಹಿತರಕ್ಷಣಾ ಸಮಿತಿ ಸುನಂದಾ ಜಯರಾಂ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.