ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾರ್ಮೆಂಟ್ಸ್‌ ನೌಕರರ ವೇತನ ಕನಿಷ್ಠ ₹28,200 ನಿಗದಿಗೊಳಿಸಿ

Last Updated 12 ಡಿಸೆಂಬರ್ 2022, 16:12 IST
ಅಕ್ಷರ ಗಾತ್ರ

ಬೆಂಗಳೂರು: ಗಾರ್ಮೆಂಟ್ಸ್‌ ನೌಕರರ ವೇತನ ಪರಿಷ್ಕರಣೆಗೊಳಿಸಿ, ತಿಂಗಳಿಗೆ ಕನಿಷ್ಠ ₹28,200 ನಿಗದಿಗೊಳಿಸಬೇಕು ಎಂದು ಗಾರ್ಮೆಂಟ್‌ ಆ್ಯಂಡ್‌ ಟೆಕ್ಸ್‌ಟೈಲ್‌ ವರ್ಕರ್ಸ್‌ ಯೂನಿಯನ್‌ ಆಗ್ರಹಿಸಿದೆ.

‘ಈ ಉದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ವೇತನವನ್ನು ಪರಿಷ್ಕರಣೆ ಮಾಡಬೇಕು ಎಂದು ಹೈಕೋರ್ಟ್‌ನ ಆದೇಶವಿದ್ದರೂ ಸರ್ಕಾರ ವಿಳಂಬ ನೀತಿ ಅನುಸರಿಸಿ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದೆ. ಕಳೆದ 43 ವರ್ಷಗಳ ಇತಿಹಾಸದಲ್ಲಿ ಸರಾಸರಿ 9 ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ ಮಾಡಿದ್ದು, ತಿಂಗಳಿಗೆ ಕೇವಲ ₹10,441 ನೀಡುತ್ತಿದೆ’ ಎಂದು ಯೂನಿಯನ್‌ ಅಧ್ಯಕ್ಷೆ ಆರ್. ಪ್ರತಿಭಾ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

‘ಗಾರ್ಮೆಂಟ್ಸ್‌ ಉದ್ಯಮದ ಸುಮಾರು 4 ಲಕ್ಷ ಕಾರ್ಮಿಕರಲ್ಲಿ ಶೇ 80ರಷ್ಟು ಮಹಿಳೆಯರೇ ಕಾರ್ಯನಿರ್ವಹಿಸುತ್ತಿದ್ದಾರೆ. 5 ವರ್ಷಗಳಿಗೊಮ್ಮ ಅನುಸೂಚಿತ ಉದ್ಯಮಗಳ ಕನಿಷ್ಠ ವೇತನ ಪರಿಷ್ಕರಣೆ ಮಾಡಬೇಕೆಂಬ ಕಾನೂನು ಇದೆ. ಆದರೆ ಈ ಉದ್ಯಮದಲ್ಲಿ ಕಳೆದ 8 ವರ್ಷಗಳಿಂದ ವೇತನ ಪರಿಷ್ಕರಣೆಯೇ ಆಗಿಲ್ಲ. ಸರ್ಕಾರ ಗಾರ್ಮೆಂಟ್ಸ್‌ ಉದ್ಯಮಿಗಳ ಪ್ರಭಾವಕ್ಕೆ ಮಣಿದು ಅವರ ಪರವಾಗಿ ಕೆಲಸ ಮಾಡುತ್ತಿದೆ’ ಎಂದು ಆರೋಪಿಸಿದರು.

ಯೂನಿಯನ್‌ ಗೌರವ ಅಧ್ಯಕ್ಷೆ ಮೈತ್ರೇಯಿ ಮಾತನಾಡಿ, ‘2018ರ ಫೆಬ್ರುವರಿಯಲ್ಲಿ ಸರ್ಕಾರ ಹೆಲ್ಪರ್‌ ವರ್ಗಕ್ಕೆ ದಿನಕ್ಕೆ ₹445 ವೇತನ ನಿಗದಿಪಡಿಸಿ ಕರಡು ಆದೇಶ ಹೊರಡಿಸಿತ್ತು. ಆದರೆ ಉದ್ಯಮಿಗಳ ಪ್ರಬಲ ಲಾಬಿಗೆ ಮಣಿದ ಸರ್ಕಾರ ಒಂದು ತಿಂಗಳಲ್ಲಿ ಅದನ್ನು ಹಿಂಪಡೆದಿತ್ತು. ಕಾರ್ಮಿಕ ಸಂಘಟನೆಗಳು ಇದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ದಾವೆ ಹೊಡಿದ್ದವು. 2021ರಲ್ಲಿ ಹೈಕೋರ್ಟ್‌ ಕಾರ್ಮಿಕರ ಪರವಾಗಿ ತೀರ್ಪು ನೀಡಿದರೂ ನಿಗದಿಪಡಿಸಿದ ವೇತನ ಜಾರಿ ಮಾಡುವಲ್ಲಿ ಸರ್ಕಾರ ಹಿಂದೇಟು ಹಾಕುತ್ತಿದೆ’ ಎಂದು ತಿಳಿಸಿದರು.

‘ನಮ್ಮೆಲ್ಲ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರಪತ್ರಗಳನ್ನು ಹಂಚುವುದು, ಪೋಸ್ಟ್‌ಕಾರ್ಡ್‌ ಅಭಿಯಾನ, ಕಾರ್ಖಾನೆ ಮಟ್ಟದಲ್ಲಿ ಜಾಗೃತಿ ಸಭೆ ಮತ್ತು ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು. ಜನವರಿಯಲ್ಲಿ ಗಾರ್ಮೆಂಟ್ಸ್‌ ಉದ್ಯಮವನ್ನು ಸ್ಥಗಿತಗೊಳಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT