ಗೌರಿ ಹತ್ಯೆ: ಬಹಿರಂಗ ಸಮರ್ಥನೆಗೆ ವಿರೋಧ

7
ಮಾನವ ಬಂಧುತ್ವ ವೇದಿಕೆಯಿಂದ ಸಮಾವೇಶ: ಪ್ರಮೋದ್ ಮುತಾಲಿಕ್ ವಿರುದ್ಧ ಕ್ರಮಕ್ಕೆ ಆಗ್ರಹ

ಗೌರಿ ಹತ್ಯೆ: ಬಹಿರಂಗ ಸಮರ್ಥನೆಗೆ ವಿರೋಧ

Published:
Updated:

ಬೆಂಗಳೂರು:‘ಪತ್ರಕರ್ತೆ ಗೌರಿ ಹತ್ಯೆಯನ್ನು ಬಹಿರಂಗವಾಗಿ ಸಮರ್ಥಿಸಿಕೊಳ್ಳುತ್ತಿರುವ ಪ್ರಮೋದ್ ಮುತಾಲಿಕ್ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ’ ಎಂದು ಹಿರಿಯ ರಾಜಕಾರಣಿ ಎ.ಕೆ.ಸುಬ್ಬಯ್ಯ ಬೇಸರ ವ್ಯಕ್ತಪಡಿಸಿದರು.

ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಮಾನವ ಬಂಧುತ್ವ ವೇದಿಕೆ ಮಂಗಳವಾರ ಆಯೋಜಿಸಿದ್ದ ‘ಸಾಮಾಜಿಕ ನ್ಯಾಯಕ್ಕಾಗಿ ಜನಾಗ್ರಹ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು.

‘ಗೌರಿ ಹತ್ಯೆಗೆ ಹಿಂದೂಪರ ಸಂಘಟನೆಗಳೇ ಕಾರಣ ಎಂಬುದು ಸಾಬೀತಾಗಿದ್ದರೂ, ಸಂಘಟನೆಗಳ ಮುಖಂಡರು ಬಹಿರಂಗವಾಗಿ ಸಮರ್ಥಿಸಿಕೊಳ್ಳುತ್ತಿರುವುದು ಸರಿಯಲ್ಲ. ಈ ಮೂಲಕ ಹೋರಾಟದ ಧ್ವನಿಗಳನ್ನು, ಸೈದ್ಧಾಂತಿಕ ಚಳವಳಿಗಳನ್ನು ಹತ್ತಿಕ್ಕುವ ಷಡ್ಯಂತ್ರ ನಡೆಯುತ್ತಿದೆ. ಕೂಡಲೇ ಸರ್ಕಾರ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

‌‘ರಾಜಕೀಯದಲ್ಲಿ ವೈಚಾರಿಕ ಬದ್ಧತೆ, ಸಮಾಜಮುಖಿ ಕಾಳಜಿ ಇರುವ ಸತೀಶ್ ಜಾರಕಿಹೊಳಿ, ಎಂ.ಬಿ.ಪಾಟೀಲ, ಎ.ಟಿ.ರಾಮಸ್ವಾಮಿ, ಎಚ್.ವಿಶ್ವನಾಥ್ ಇನ್ನಿತರ ಅವಕಾಶ ವಂಚಿತ ಸಮುದಾಯಗಳ ಪ್ರತಿನಿಧಿಗಳಿಗೆ ಸಚಿವ ಸ್ಥಾನ ನೀಡದಿರುವುದು ಪ್ರಜ್ಞಾವಂತರ ಅಸಮಾಧಾನಕ್ಕೆ ಕಾರಣವಾಗಿದೆ. ಮೈತ್ರಿ ಸರ್ಕಾರದ ಪ್ರಸ್ತುತ ಸಚಿವ ಸಂಪುಟ ಸಾಮಾಜಿಕ ಅಸಮತೋಲನದಿಂದ ಕೂಡಿದ್ದು, ಸರ್ಕಾರ ಯಶಸ್ವಿಯಾಗಿ ಆಡಳಿತ ನಡೆಸಲು ಸಾಧ್ಯವಿಲ್ಲ’ ಎಂದರು.

‘ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವ, ಮೌಢ್ಯದ ವಿರುದ್ಧ ಧ್ವನಿ ಎತ್ತುವವರನ್ನು ವ್ಯವಸ್ಥಿತವಾಗಿ ಮೂಲೆಗುಂಪು ಮಾಡುತ್ತಿರುವುದು ಸರಿಯಲ್ಲ. ಇಂತಹ ಧ್ವನಿಗಳು ಇಲ್ಲದಿದ್ದಾಗ ಸರ್ಕಾರದ ನೀತಿ ನಿರೂಪಣೆಯಲ್ಲಿ ಎಡವಬೇಕಾಗುತ್ತದೆ. ಸಂಪುಟದಲ್ಲಿ ಸಾಮಾಜಿಕ ನ್ಯಾಯದ ಪರಿಪಾಲನೆ ಆಗಬೇಕು. ಹಾಗೆಂದು ಸಮ್ಮಿಶ್ರ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದೇವೆ ಎಂದಲ್ಲ’ ಎಂದು ಹಿರಿಯ ಪತ್ರಕರ್ತ ದಿನೇಶ್‌ ಅಮಿನ್‌ ಮಟ್ಟು ಅಭಿಪ್ರಾಯಪಟ್ಟರು.

‘ಪಕ್ಷದ ಅಭ್ಯರ್ಥಿಗಳಿಗೆ ಮಂತ್ರಿಗಿರಿ ಕೊಡುವಾಗ ಆ ವ್ಯಕ್ತಿಯ ತಾಕತ್ತು, ಹೃದಯವಂತಿಕೆ, ಚಾರಿತ್ರ್ಯ ಮತ್ತು ಮಂತ್ರಿಯಾಗಿ ಆ ಸ್ಥಾನಕ್ಕೆ ನ್ಯಾಯ ಒದಗಿಸಿಕೊಡಬಲ್ಲರೇ ಎನ್ನುವುದನ್ನು ಹೈಕಮಾಂಡ್‌ ಗಮನಿಸಬೇಕು. ಈ ನಿಟ್ಟಿನಲ್ಲಿ ಜಿ.ಟಿ.ದೇವೇಗೌಡ ಅವರಿಗೆ ಉನ್ನತ ಶಿಕ್ಷಣ ಸಚಿವ ಸ್ಥಾನ ಕೊಟ್ಟಿರುವುದರ ಹಿಂದೆ ಹುನ್ನಾರ ಇದೆ. ಆದರೆ, ದೇವೇಗೌಡ ಒಳ್ಳೆಯ ರಾಜಕಾರಣಿ’ ಎಂದು ಪ್ರೊ.ಮಹೇಶ್ಚಂದ್ರ ಗುರು ಹೇಳಿದರು. 

ಬರಹ ಇಷ್ಟವಾಯಿತೆ?

 • 16

  Happy
 • 0

  Amused
 • 0

  Sad
 • 2

  Frustrated
 • 6

  Angry

Comments:

0 comments

Write the first review for this !