ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರದ್ದಾದ ಬಿಪಿಎಲ್‌ ಪಡಿತರ ಚೀಟಿಗಳಿಗೆ ಮರುಜೀವ: ಸಚಿವ ಕೆ.ಎಚ್‌. ಮುನಿಯಪ್ಪ

Published 15 ಫೆಬ್ರುವರಿ 2024, 15:31 IST
Last Updated 15 ಫೆಬ್ರುವರಿ 2024, 15:31 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಜೆಪಿ ನೇತೃತ್ವದ ಹಿಂದಿನ ಸರ್ಕಾರ 2021ರ ಜೂನ್‌ 1ರಂದು ಹೊರಡಿಸಿದ್ದ ಆದೇಶದಂತೆ ರದ್ದುಗೊಂಡಿರುವ ಆದ್ಯತಾ (ಬಿಪಿಎಲ್‌) ಪಡಿತರ ಚೀಟಿಗಳಿಗೆ ಮರುಜೀವ ನೀಡಲಾಗುವುದು’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌. ಮುನಿಯಪ್ಪ ತಿಳಿಸಿದರು.

ಕಾಂಗ್ರೆಸ್‌ನ ನಯನಾ ಮೋಟಮ್ಮ ಪ್ರಶ್ನೆಗೆ ವಿಧಾನಸಭೆಯಲ್ಲಿ ಗುರುವಾರ ಉತ್ತರಿಸಿದ ಅವರು, ‘ನಾಲ್ಕು ಚಕ್ರದ ವೈಯಕ್ತಿಕ ವಾಹನ ಹೊಂದಿದವರ ಬಿಪಿಎಲ್‌ ಪಡಿತರ ಚೀಟಿಗಳನ್ನು ರದ್ದುಗೊಳಿಸಲು ಆಗ ಆದೇಶದಲ್ಲಿ ಸೂಚಿಸಲಾಗಿತ್ತು. 2022ರ ಆಗಸ್ಟ್‌ 28ರಂದು ಆ ಆದೇಶವನ್ನು ತಡೆ ಹಿಡಿಯಲಾಗಿದೆ. ಮೊದಲಿನ ಆದೇಶದಂತೆ ರದ್ದುಗೊಂಡಿರುವ ಪಡಿತರ ಚೀಟಿಗಳನ್ನು ಮತ್ತೊಮ್ಮೆ ಪರಿಶೀಲಿಸಿ, ಮರು ಮಂಜೂರಾತಿ ಮಾಡಲಾಗುವುದು’ ಎಂದರು.

ಮೂಡಿಗೆರೆ ತಾಲ್ಲೂಕಿನಲ್ಲಿ ಆ ರೀತಿ 599 ಬಿಪಿಎಲ್‌ ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗಿದೆ. ಅವುಗಳನ್ನು ಆದ್ಯತೇತರ (ಎಪಿಎಲ್‌) ಪಡಿತರ ಚೀಟಿಗಳನ್ನಾಗಿ ಪರಿವರ್ತಿಸಲಾಗಿದೆ. ಅವುಗಳನ್ನೂ ಪರಿಶೀಲಿಸಿ, ಅರ್ಹ ಕುಟುಂಬಗಳಿಗೆ ಮರು ಮಂಜೂರಾತಿ ನೀಡಲಾಗುವುದು ಎಂದು ತಿಳಿಸಿದರು.

ಹೊಸ ಅರ್ಜಿ ಸ್ವೀಕರಿಸಲು ಆಗ್ರಹ:

ರಾಜ್ಯದಲ್ಲಿ ದೀರ್ಘ ಸಮಯದಿಂದ ಬಿಪಿಎಲ್‌ ಪಡಿತರ ಚೀಟಿಗಳಿಗೆ ಅರ್ಜಿ ಸ್ವೀಕರಿಸಿಲ್ಲ. ಇದರಿಂದ ಅರ್ಹ ಕುಟುಂಬಗಳಿಗೆ ಅನ್ಯಾಯವಾಗುತ್ತಿದೆ. ವೈದ್ಯಕೀಯ ಚಿಕಿತ್ಸೆಗಳಿಗೆ ನೆರವು ಪಡೆಯುವುದಕ್ಕೂ ಸಮಸ್ಯೆಯಾಗಿದೆ. ಆದ್ದರಿಂದ ಹೊಸ ಅರ್ಜಿ ಸ್ವೀಕರಿಸಲು ಕ್ರಮ ಕೈಗೊಳ್ಳಬೇಕು ಎಂದು ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಆಗ್ರಹಿಸಿದರು. ಬಿಜೆಪಿ ಮತ್ತು ಕಾಂಗ್ರೆಸ್‌ನ ಹಲವರು ದನಿಗೂಡಿಸಿದರು.

‘ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ 2.95 ಲಕ್ಷ ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಈ ಪೈಕಿ 57,000 ಪಡಿತರ ಚೀಟಿಗಳನ್ನು ವಿತರಿಸಲಾಗಿದೆ. ಉಳಿದ ಪಡಿತರ ಚೀಟಿಗಳನ್ನು ವಿಲೇವಾರಿ ಮಾಡಿದ ಬಳಿಕ ಹೊಸ ಅರ್ಜಿ ಸ್ವೀಕರಿಸಲಾಗುವುದು. 60 ದಿನಗಳೊಳಗೆ ಪರಿಶೀಲನೆ ಪೂರ್ಣಗೊಳಿಸಿ ಪಡಿತರ ಚೀಟಿ ವಿತರಿಸಲಾಗುವುದು’ ಎಂದು ಸಚಿವರು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT