ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದು ಕೊರತೆ: ಪಾದಚಾರಿ ಮಾರ್ಗದಲ್ಲಿನ ಕಸ ತೆರವುಗೊಳಿಸಿ

Published 13 ಆಗಸ್ಟ್ 2023, 20:38 IST
Last Updated 13 ಆಗಸ್ಟ್ 2023, 20:38 IST
ಅಕ್ಷರ ಗಾತ್ರ

‘ಪಾದಚಾರಿ ಮಾರ್ಗದಲ್ಲಿನ ಕಸ ತೆರವುಗೊಳಿಸಿ’

ನಗರದ ಕಾಟನ್‌ ಪೇಟೆ ವಾರ್ಡ್‌ ಸಂಖ್ಯೆ 120ರ ಬೇಲಿಮಠದ ರಸ್ತೆ ಮತ್ತು ಬಾಲಗಂಗಾಧರ ಸ್ವಾಮೀಜಿ ವಸತಿನಿಲಯದ ಪಕ್ಕದಲ್ಲಿನ ಪಾದಚಾರಿ ಮಾರ್ಗದಲ್ಲಿ ಕಸ ಹಾಕಲಾಗಿದೆ. ಈ ಪ್ರದೇಶ ಗಬ್ಬೆದ್ದು ನಾರುತ್ತಿದೆ. ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿದೆ. ವಸತಿನಿಲಯದಲ್ಲಿರುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ವಾರ್ಡ್‌ ಸಂಖ್ಯೆ 120ರ ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೆ, ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂಬ ಹೇಳಿಕೆ ನೀಡುತ್ತಿದ್ದಾರೆ. ಕೂಡಲೇ ಈ ಪ್ರದೇಶವನ್ನು ಸ್ವಚ್ಛಗೊಳಿಸಲು ಅಧಿಕಾರಿಗಳು ಕ್ರಮಕೈಗೊಳ್ಳಬೇಕು.

–ಎಸ್ ಪ್ರಭಾಕರ್, ಚಾಮರಾಜಪೇಟೆ

––

‘ವಿದ್ಯುತ್‌ ಕಂಬ ತೆರವುಗೊಳಿಸಿ’

ಇಸ್ರೊ ಲೇಔಟ್‌ನ ಎಸ್‌–5 ವಿಭಾಗದ ರಸ್ತೆಯ ಮಧ್ಯದಲ್ಲಿ ಅಳವಡಿಸಿರುವ ವಿದ್ಯುತ್‌ ಕಂಬವನ್ನು ತೆರವುಗೊಳಿಸಬೇಕು. ಈ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುತ್ತಿದ್ದು, ರಸ್ತೆಯ ಮಧ್ಯದಲ್ಲಿ ಕಂಬ ಇರುವುದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ. ಈ ಬಗ್ಗೆ ಬೆಸ್ಕಾಂ ಸಹಾಯವಾಣಿಗೆ ಕರೆ ಮನವಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ.

–ಮುನಿರಾಜು, ಸ್ಥಳೀಯ ನಿವಾಸಿ

––

‘ರಸ್ತೆ ಸರಿ‍‍ಪಡಿಸಿ’

ಹೊಸಕೆರೆ ಕೋಡಿಯಿಂದ ಆರ್‌.ಆರ್‌. ನಗರಕ್ಕೆ ಸಂಪರ್ಕ ಕಲ್ಪಿಸುವ ಕೆರೆ ಏರಿ ರಸ್ತೆಯ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ, ವಾಹನ ಸವಾರರಿಗೆ ಪ್ರತಿನಿತ್ಯ ದೂಳಿನ ಮಜ್ಜನವಾಗುತ್ತಿದೆ. ಮಳೆ ಬಂದರೆ ರಸ್ತೆ ಕೆಸರು ಗದ್ದೆಯಾಗುತ್ತದೆ. ಇತ್ತೀಚೆಗೆ ಸುರಿದ ಮಳೆಯಿಂದ ಈ ರಸ್ತೆಯಲ್ಲಿ ದೊಡ್ಡ–ದೊಡ್ಡ ಹೊಂಡಗಳು ನಿರ್ಮಾಣವಾಗಿದ್ದು, ವಾಹನ ಸವಾರರು ಸಾಹಸ ಪಡುತ್ತಿದ್ದಾರೆ. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕೂಡಲೇ ಕಾಮಗಾರಿಯನ್ನು ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು.

–ಎಚ್.ಸಿ. ಶ್ರೀನಿವಾಸ್, ಸ್ಥಳೀಯ ನಿವಾಸಿ

--

‘ರಸ್ತೆ ಗುಂಡಿ ಮುಚ್ಚಿ’

ನಗರದ ಸಿಬಿಐ ಕಚೇರಿಯ ಬಳಿ ಬಳ್ಳಾರಿ ರಸ್ತೆಯನ್ನು ಎರಡು ತಿಂಗಳಲ್ಲಿ ಮೂರು ಬಾರಿ ದುರಸ್ತಿಗೊಳಿಸಲಾಗಿದೆ. ಆದರೆ, ಕಳಪೆ ಕಾಮಗಾರಿಯಿಂದ ರಸ್ತೆಯಲ್ಲಿ ಮತ್ತೆ ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸವಾರರಿಗೆ ತಲೆ ನೋವಾಗಿ ಪರಿಣಮಿಸಿದೆ. ಪ್ರತಿನಿತ್ಯ ರಸ್ತೆಯಿಂದ ನಗರಕ್ಕೆ ಸಾವಿರಾರು ವಾಹನಗಳು ಪ್ರವೇಶಿಸುತ್ತಿವೆ. ಈ ಗುಂಡಿಗಳ ಕಾರಣದಿಂದ ಸಂಚಾರ ದಟ್ಟಣೆಯಾಗುತ್ತಿದೆ. ಜತೆಗೆ ಅಪಘಾತಗಳು ಸಂಭವಿಸುವ ಸಾಧ್ಯತೆಗಳಿದ್ದು, ಕೂಡಲೇ ಬಿಬಿಎಂಪಿ ಅಧಿಕಾರಿಗಳು ಈ ರಸ್ತೆ ದುರಸ್ತಿಗೊಳಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು.

ಶುಭಾ, ದ್ವಿಚಕ್ರ ವಾಹನ ಸವಾರರು

––

‘ಪಾದಚಾರಿ ಮಾರ್ಗದಲ್ಲಿ ಕಸ’

ಸಂಪಂಗಿ ರಾಮನಗರದ ಮಿಷನ್‌ ರಸ್ತೆಯ ಪಾದಚಾರಿ ಮಾರ್ಗದಲ್ಲಿ ರಾಶಿಗಟ್ಟಲೇ ಕಸ ಹಾಕಲಾಗಿದೆ. ಇದರಲ್ಲಿ ಬಹುತೇಕ ಕಟ್ಟಡ ತ್ಯಾಜ್ಯವನ್ನು ಪಾದಚಾರಿ ಮಾರ್ಗದಲ್ಲಿ ಸುರಿಯಲಾಗಿದೆ. ಇದರಿಂದ, ನಡಿಗೆದಾರರಿಗೆ ಅನನುಕೂಲವಾಗಿದೆ. ಈ ಮುಖ್ಯರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿದ್ದು, ಪಾದಚಾರಿಗಳು ಜೀವ ಭಯದಲ್ಲಿ ಮುಖ್ಯರಸ್ತೆಯಲ್ಲಿ ಸಾಗುವ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಬಿಬಿಎಂಪಿ ಅವರು ಕಸ ತೆರವುಗೊಳಿಸಬೇಕು.

–ಸುರೇಶ್, ಸ್ಥಳೀಯ ನಿವಾಸಿ

––

‘ರಸ್ತೆ ಗುಂಡಿ ಮುಚ್ಚಿ’

ನಗರದ ಹೆಸರಘಟ್ಟ ಮುಖ್ಯರಸ್ತೆಯ ಸಿಡೇದಹಳ್ಳಿ ಎನ್.ಎಂ. ಎಚ್.ರಸ್ತೆ ಗುಂಡಿಗಳಿಂದ ಕೂಡಿದ್ದು, ಸಂಪೂರ್ಣ ಹಾಳಾಗಿದೆ. ಇದರಿಂದ, ವಾಹನ ಸಂಚಾರಕ್ಕೆ ಅನನಕೂಲವಾಗಿದೆ. ಜತೆಗೆ, ಹಲವಾರು ಅಪಘಾತಗಳು ಸಂಭವಿಸುತ್ತಿವೆ. ಬಿಬಿಎಂಪಿ ಅವರು ಕೂಡಲೇ ಈ ರಸ್ತೆಯಲ್ಲಿ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಬೇಕು. ಇಲ್ಲದಿದ್ದರೆ ರಸ್ತೆ ಬಂದ ಮಾಡುವ ಮೂಲಕ ಪ್ರತಿಭಟನೆ ಮಾಡಲಾಗುವುದು.

ಸಂಪತ್‌, ಕಿರಣ್‌, ಸ್ಥಳೀಯ ನಿವಾಸಿಗಳು

ಇಸ್ರೊ ಲೇಔಟ್‌ ರಸ್ತೆ ಮಧ್ಯದಲ್ಲಿರುವ ವಿದ್ಯುತ್‌ ಕಂಬ.
ಇಸ್ರೊ ಲೇಔಟ್‌ ರಸ್ತೆ ಮಧ್ಯದಲ್ಲಿರುವ ವಿದ್ಯುತ್‌ ಕಂಬ.
ಹೊಸಕೆರೆಹಳ್ಳಿಯಿಂದ ಆರ್‌.ಆರ್‌. ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ದುಃಸ್ಥಿತಿ.
ಹೊಸಕೆರೆಹಳ್ಳಿಯಿಂದ ಆರ್‌.ಆರ್‌. ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ದುಃಸ್ಥಿತಿ.
ಸಿಬಿಐ ಕಚೇರಿ ಹತ್ತಿರವಿರುವ ಬಳ್ಳಾರಿ ಮುಖ್ಯರಸ್ತೆಯ ದುಃಸ್ಥಿತಿ.
ಸಿಬಿಐ ಕಚೇರಿ ಹತ್ತಿರವಿರುವ ಬಳ್ಳಾರಿ ಮುಖ್ಯರಸ್ತೆಯ ದುಃಸ್ಥಿತಿ.
ಹೆಸರಘಟ್ಟ ಮುಖ್ಯರಸ್ತೆಯ ಸಿಡೇದಹಳ್ಳಿ ಎನ್.ಎಂ. ಎಚ್.ರಸ್ತೆಯ ದುಃಸ್ಥಿತಿ.
ಹೆಸರಘಟ್ಟ ಮುಖ್ಯರಸ್ತೆಯ ಸಿಡೇದಹಳ್ಳಿ ಎನ್.ಎಂ. ಎಚ್.ರಸ್ತೆಯ ದುಃಸ್ಥಿತಿ.
ಸಂಪಂಗಿ ರಾಮನಗರದ ಮಿಷನ್ ರಸ್ತೆಯ ಪಾದಚಾರಿ ಮಾರ್ಗ ಹಾಕಿರುವ ಕಸ.
ಸಂಪಂಗಿ ರಾಮನಗರದ ಮಿಷನ್ ರಸ್ತೆಯ ಪಾದಚಾರಿ ಮಾರ್ಗ ಹಾಕಿರುವ ಕಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT