ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜ.10ರಿಂದ ಗುಜರಾತ್‌ ಜಾಗತಿಕ ಸಮ್ಮೇಳನ: ಬೆಂಗಳೂರಿನಲ್ಲಿ ಪೂರ್ವಭಾವಿ ರೋಡ್‌ ಶೋ

Published 9 ನವೆಂಬರ್ 2023, 16:19 IST
Last Updated 9 ನವೆಂಬರ್ 2023, 16:19 IST
ಅಕ್ಷರ ಗಾತ್ರ

ಬೆಂಗಳೂರು: ಗುಜರಾತ್‌ನಲ್ಲಿ ಜ.10ರಿಂದ 12ರವರೆಗೆ ಹಮ್ಮಿಕೊಂಡಿರುವ ಜಾಗತಿಕ ಸಮ್ಮೇಳನ–2024 (ವೈಬ್ರಂಟ್‌ ಗುಜರಾತ್) ಪೂರ್ವಭಾವಿಯಾಗಿ ಗುರುವಾರ ಬೆಂಗಳೂರಿನಲ್ಲಿ ರೋಡ್‌ ಶೋ ಹಮ್ಮಿಕೊಳ್ಳಲಾಗಿತ್ತು.

ನಂತರ ಸುದ್ದಿಗಾರರ ಜತೆ ಮಾತನಾಡಿದ ಗುಜರಾತ್ ಸರ್ಕಾರದ ಕೈಗಾರಿಕಾ ಸಚಿವ ಬಲವಂತ್‌ಸಿನ್ಹಾ ರಜಪೂತ್‌, ಎರಡು ದಶಕಗಳ ಹಿಂದೆ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು ಭಿತ್ತಿದ ಅಭಿವೃದ್ಧಿಯ ಮಾದರಿ ಇಂದು ಫಲ ನೀಡಿದೆ. ದೇಶದ ಪ್ರಮುಖ ಕೈಗಾರಿಕಾ ತಾಣವಾಗಿ ರಾಜ್ಯ ಬೆಳೆದಿದೆ. ಕೈಗಾರಿಕಾ ಸ್ನೇಹಿ ವಾತಾವರಣ ನಿರ್ಮಾಣವಾಗಿದೆ ಎಂದರು.

ಭಾರತದ ಸೋಲಾರ್ ವಿದ್ಯುತ್ ಉತ್ಪಾದನೆಯಲ್ಲಿ ಶೇ 13.2ರಷ್ಟು ಪಾಲನ್ನು ಗುಜರಾತ್ ಹೊಂದಿದೆ. ಭಾರತದ ಒಟ್ಟು ಉತ್ಪಾದನೆಯ ಶೇ 18ರಷ್ಟು ಇದೆ. ಸರಕು ಸಾಗಣೆ ಕ್ಷೇತ್ರದಲ್ಲಿ ಶೇ 33ರಷ್ಟು ಪಾಲು ಪಡೆದಿದೆ. ₹35 ಲಕ್ಷದವರೆಗಿನ ಸಾಲಕ್ಕೆ ಶೇ 25ರಷ್ಟು ಸಬ್ಸಿಡಿ ನೀಡಲಾಗುತ್ತಿದೆ. ಕೈಗಾರಿಕೆಗಳಿಗೆ ತಡೆ ರಹಿತವಾಗಿ ಬೇಡಿಕೆಯ ಶೇ 100ರಷ್ಟು ವಿದ್ಯುತ್ ಪೂರೈಸಲಾಗುತ್ತಿದೆ. ನಿರುದ್ಯೋಗ ಸಮಸ್ಯೆ ಶೇ 2ಕ್ಕಿಂತ ಕಡಿಮೆ ಇದೆ. ಎಲ್ಲರಲ್ಲೂ ಒಂದು ಕುಟುಂಬದ ಪರಿಕಲ್ಪನೆ ಬೆಳೆಸಲಾಗಿದೆ. ಇದು ಗುಜರಾತ್ ಅಭಿವೃದ್ಧಿಯ ಗುಟ್ಟು ಎಂದು ಹೇಳಿದರು.

ದೆಹಲಿಯಿಂದ ಆರಂಭವಾದ ಜಾಗತಿಕ ಸಮಾವೇಶದ ಪ್ರಚಾರ ದೇಶದ ಪ್ರಮುಖ ನಗರಗಳಲ್ಲಿ ರೋಡ್‌ ಶೋ ಮೂಲಕ ಮುಂದುವರಿದಿದೆ. ಜಪಾನ್, ಜರ್ಮನಿ, ಇಟಲಿ, ಡೆನ್ಮಾರ್ಕ್, ಸಿಂಗಪುರ, ಆಸ್ಟ್ರೇಲಿಯಾ, ಫ್ರಾನ್ಸ್, ಯುಎಇ, ವಿಯೆಟ್ನಾಂ, ದಕ್ಷಿಣ ಕೊರಿಯಾ, ಯುಎಸ್‌ಎಗಳಲ್ಲೂ ಪ್ರದರ್ಶನ ನೀಡಲಾಗಿದೆ. ಬೆಂಗಳೂರಿನಲ್ಲೂ 19 ಉದ್ಯಮಗಳ ಪ್ರಮುಖರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದರು.

ಜ್ಯೋತಿ ಲ್ಯಾಬೊರೇಟರೀಸ್‌ ವ್ಯವಸ್ಥಾಪಕ ನಿರ್ದೇಶಕ ಕೆ.ಉಲ್ಲಾಸ್‌ ಕಾರಂತ್, ಐಬಿಎಂ ಕ್ಲೌಡ್ ಮತ್ತು ಕಾಗ್ನಿಟಿವ್ ಸಾಫ್ಟ್‌ವೇರ್ ಉಪಾಧ್ಯಕ್ಷ ಗೌರವ್‌ ಶರ್ಮಾ, ಕ್ರಾಫ್ಟ್-ಹೀಂಜ್ ಕಂಪನಿ ನಿರ್ದೇಶಕ ವಿರಾಜ್ ಮೆಹ್ತಾ, ವಿದೇಹ್ ಖರೆ, ಇನ್-ಸ್ಪೇಸ್ ನಿರ್ದೇಶಕ ವಿನೋದ್ ಕುಮಾರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT