ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನ್ಮಶತಾಬ್ದಿ ಸಂಭ್ರಮ: ಎಚ್ಚೆನ್‌ ಮೇಷ್ಟ್ರ ನೆನಪುಗಳು

Last Updated 6 ಜೂನ್ 2020, 2:40 IST
ಅಕ್ಷರ ಗಾತ್ರ

ಎಚ್. ನರಸಿಂಹಯ್ಯ ಅವರೊಂದಿಗಿನ ಒಡನಾಟದಲ್ಲಿ ನಾನು ಕಾಲೇಜಿನ ಒಳಗಡೆ ಕಲಿತುದಕ್ಕಿಂತ ಹೊರಗೆ ಕಲಿತಿದ್ದೇ ಜಾಸ್ತಿ. ಶಿಕ್ಷಣ ತಜ್ಞ, ಪ್ರಖರ ವಿಚಾರವಾದಿ, ಸಂಗೀತ, ಸಾಹಿತ್ಯ, ಕಲಾ ಪ್ರೇಮಿ, ಕನ್ನಡ ಪರಿಚಾರಕ, ನಿರ್ಭಿಡೆಯ ನಡವಳಿಕೆ ಇತ್ಯಾದಿ ವಿಶೇಷಣಗಳೊಂದಿಗೆ ನಾಡು ಅವರನ್ನು ಗುರುತಿಸಿರುವುದು ಸಹಜ. ಅವರ ಎಂಟೂವರೆ ದಶಕಗಳ ಬದುಕಿನ ಇನ್ನೊಂದು ಮುಖವೆಂದರೆ ಹಾಸ್ಯ ಪ್ರಜ್ಞೆ. ನನ್ನ ಮೇಷ್ಟ್ರ ನಿಷ್ಕಲ್ಮಷ ನಗುವಿನ ಹಿಂದೆ ಇದ್ದ ಗಾಢ ಹಾಸ್ಯಪ್ರಜ್ಞೆಗೆ ಬಹಳ ವರ್ಷ ಮುಖಾಮುಖಿಯಾದವನು ನಾನು. ಅದರ ಕೆಲವು ತುಣುಕುಗಳು ಇಲ್ಲಿವೆ.

***

ಎಚ್ಚೆನ್‍ಗೆ ನಿತ್ಯವೂ ಲಾಲ್‍ಬಾಗಿನಲ್ಲಿ ವಾಕಿಂಗ್ ಮಾಡುವ ಪರಿಪಾಠ. ಎಚ್ಚೆನ್ ಬೆಂಗಳೂರಿನಲ್ಲಿ ಇದ್ದಾರೋ ಇಲ್ಲವೋ ಎನ್ನುವುದು ಅಲ್ಲಿ ವಾಕ್ ಮಾಡುವವರಿಗೆಲ್ಲ ಗೊತ್ತಾಗುತ್ತಿತ್ತು. ವಾಕಿಂಗ್‌ಗೆ ಬರುವವರಲ್ಲಿ ಅನೇಕರು ಸಾಕು ನಾಯಿಯನ್ನೂ ಕರೆತರುತ್ತಾರೆ. ಕೆಲವರ ಜೊತೆ ನಾಯಿ ಹಿಂಡೇ ಇರುತ್ತದೆ. ಗಂಡ-ಹೆಂಡತಿ ಪರಸ್ಪರ ಕನ್ನಡ, ತಮಿಳು, ತೆಲುಗು ಹೀಗೆ ತಮ್ಮ ಭಾಷೆಯಲ್ಲಿ ಮಾತಾಡುತ್ತಾರೆ. ಆದರೆ ಎಚ್ಚೆನ್‍ಗೆ ಅಚ್ಚರಿಯಾಗಿ ಕಂಡಿದ್ದೆಂದರೆ ಅವರೆಲ್ಲ ತಮ್ಮ ನಾಯಿ ಮರಿಯೊಂದಿಗೆ ಮಾತನಾಡುವಾಗ ಇಂಗ್ಲಿಷ್‌ ಬಳಸುವುದು! ಟಾಮಿ ಕಂ ಹಿಯರ್, ಬೇಬಿ ಕಮಾನ್, ಜೂಲಿ, ಪಿಕ್ ದ ಬಾಲ್... ಹೀಗೆ.

ತಾವು ಸಾಕಿದ ನಾಯಿಗೆ ರಾಮು ಎಂದೋ ಭೀಮು ಎಂದೋ ನಮ್ಮ ಹೆಸರನ್ನಿಟ್ಟವರು ವಿರಳಾತಿವಿರಳ. ‘ನಾಯಿಗೂ ಇಂಗ್ಲಿಷ್ ಬಿಟ್ಟು ಬೇರೆ ಭಾಷೆ ಅರ್ಥವಾಗದೆಂಬ ತೀರ್ಮಾನಕ್ಕೆ ಬೆಂಗಳೂರು ಜನ ಬಂದ ಹಾಗಿದೆ’ ಎನ್ನುವಾಗ, ಅವರೊಳಗಿನ ಕನ್ನಡಾಭಿಮಾನಕ್ಕೆ ಸಂಕಟ ಮೆತ್ತಿದ್ದು ಕಾಣಿಸುತ್ತಿತ್ತು. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲೆಲ್ಲ ಅವರು ಈ ಘಟನೆಯನ್ನು ವಿವರಿಸಿ ಸತ್ತ ಕನ್ನಡ ಪ್ರೇಮವನ್ನು ಜಾಗೃತಗೊಳಿಸುವ ಯತ್ನ ಮಾಡುತ್ತಿದ್ದರು.

***

ನ್ಯಾಷನಲ್ ಹೈಸ್ಕೂಲಿಗೆ ಸೇರಲೆಂದು ಬಾಲಕನೊಬ್ಬ ಬಂದು ಅವರ ಮುಂದೆ ನಿಂತಿದ್ದ. ಏನಪ್ಪ ಅಂದ್ರು ಎಚ್ಚೆನ್. ಫೀಸು ಸ್ವಲ್ಪ ಕಡಿಮೆ ಮಾಡಿಕೊಳ್ಳುವಂತೆ ಕೇಳಲು ಮಮ್ಮಿ ಹೇಳಿದ್ದಾರೆ. ಮುಖ ಎತ್ತಿ ಅವನನ್ನು ನೋಡಿದ ಮೇಷ್ಟ್ರು, ನಿನ್ನ ಮಮ್ಮಿಗೆ ಹೇಳು, ಮಮ್ಮಿ ಡ್ಯಾಡಿ ಎಂದರೆ ನಮ್ಮಲ್ಲಿ ಫೀಸು ಜಾಸ್ತಿ ಅಂತ. ಹುಡುಗ ಮನೆಗೆ ಓಡಿದ. ತುಸುವೇ ಹೊತ್ತಿನಲ್ಲಿ ತಾಯಿ–ಮಗ ಓಡೋಡಿ ಬಂದರು. ಮಮ್ಮಿ ಡ್ಯಾಡಿ ಬಿಟ್ಟು ಅಪ್ಪ ಅಮ್ಮ ಬಳಸ್ತೇವೆ, ಕನ್ನಡದಲ್ಲೇ ಮಾತಾಡ್ತೇವೆ, ನಮ್ಮ ಮಗನಿಗೆ ಸಹಾಯ ಮಾಡಿ ಎಂದು ಆ ತಾಯಿ ಗೋಗರೆದರು.

***

ಎಚ್ಚೆನ್ ಕ್ರೀಡಾಪ್ರೇಮಿ. ನ್ಯಾಷನಲ್ ಕಾಲೇಜು ಕ್ರೀಡಾಕೂಟಕ್ಕೆ ಸಿದ್ಧತೆ ನಡೆದಿತ್ತು. ಕಾಲೇಜಿನ ಎಲ್ಲಾ ಕ್ರೀಡೆಗಳ ಹುಡುಗ, ಹುಡುಗಿಯರು ತಮಗೇನು ಬೇಕೆನ್ನುವುದನ್ನು ಎಚ್ಚೆನ್ ಮುಂದೆ ಹೇಳಿಕೊಳ್ಳುತ್ತಿದ್ದರು. ಒಬ್ಬ ಯುವತಿ, ಥ್ರೋ ಬಾಲ್ ಆಟದಲ್ಲಿ ಭಾಗವಹಿಸಲು ಅನುಕೂಲ ಎಂಬ ಕಾರಣಕ್ಕೆ ಸಲ್ವಾರ್ ಕಮೀಜ್ ಬೇಕೆಂಬ ಕೋರಿಕೆ ಮಂಡಿಸಿದಳು. ಸ್ತ್ರೀಯರ ವಸ್ತ್ರಾಲಂಕಾರದ ಬಗ್ಗೆ ಎಚ್ಚೆನ್‌ಗೆ ಏನೇನೂ ಗೊತ್ತಿರಲಿಲ್ಲ. ಹುಡುಗಿಯ ಡಿಮ್ಯಾಂಡ್ ಅತಿಯಾಯಿತೆನ್ನಿಸಿತು. ‘ಅಲ್ಲಮ್ಮಾ ಎಲ್ಲರೂ ಒಂದೊಂದು ಕೇಳಿದರೆ ನೀನು ಎರಡೆರಡು ಕೇಳ್ತೀಯಲ್ಲಮ್ಮ, ಸಲ್ವಾರ್ ಅಥವಾ ಕಮೀಜ್ ಯಾವುದಾದರೊಂದನ್ನು ಹಾಕಮ್ಮ’ ಎನ್ನಬೇಕೇ!

***

ವಿಚಾರವಾದದ ವಿಚಾರದಲ್ಲಿ ಎಚ್ಚೆನ್‍ರದು ಒಳಗೊಂದು ಹೊರಗೊಂದು ಆಗಿರಲಿಲ್ಲ. ದಶಕಗಳ ಹಿಂದಿನ ಮಾತು. ಕೂಗು ಮಾರಿಯ ಭಯ ಸಮಾಜದ ಎಲ್ಲ ಸ್ತರಗಳಲ್ಲೂ ಭಯ ಹುಟ್ಟಿಸಿತ್ತು. ಹಳ್ಳಿ ನಗರ ಎನ್ನದೆ ಮನೆಗಳ ಬಾಗಿಲ, ಗೋಡೆಯ ಮೇಲೆ ‘ನಾಳೆ ಬಾ’ ಎಂದು ಬರೆಯುವುದು ಭಯದಿಂದ ಮುಕ್ತವಾಗುವ ಮಾರ್ಗವೆನಿಸಿತ್ತು. ಎಚ್ಚೆನ್ ಯಾರಿಗೆ, ಎಷ್ಟು ಜನಕ್ಕೆ ಎಂದು ಬುದ್ಧಿ ತಿಳಿವಳಿಕೆ ಹೇಳಿಯಾರು? ಅವರಲ್ಲಿ ಒಂದು ಪರಿಹಾರ ಹೊಳೆದಿತ್ತು. ತಮ್ಮ ಕೊಠಡಿಯ ಬಾಗಿಲ ಮೇಲೆ ‘ಇಂದೇ ಬಾ’ ಎಂದು ಬರೆದಿದ್ದರು. ಈಗಿನ ಭಾಷೆಯಲ್ಲಿ ಹೇಳುವುದಾದರೆ ಆಗ ಅದು ವೈರಲ್ ಆಗಿತ್ತು.

***

ಗಣೇಶೋತ್ಸವ ಸಮಯದಲ್ಲಿ ಅನಾಥಾಶ್ರಮದ ಮಕ್ಕಳನ್ನು ಕರೆತಂದು ಅವರಿಗೆ ಉಪಚರಿಸುವ ಪರಿಪಾಠದ ನಮ್ಮ ಮನೆಯ ಕಾರ್ಯಕ್ರಮವೊಂದರಲ್ಲಿ ಎಚ್ಚೆನ್ ಮತ್ತು ಎಸ್.ಕೆ. ಕರೀಂ ಖಾನ್ ಮುಖ್ಯ ಅತಿಥಿಗಳು. ಮಕ್ಕಳೆಲ್ಲ ಎದ್ದು ನಿಂತು ಚಪ್ಪಾಳೆ ತಟ್ಟಿ ಸಂಭ್ರಮ ವ್ಯಕ್ತಪಡಿಸಿದರು. ಹಸನ್ಮುಖರಾದ ಎಚ್ಚೆನ್ ಆ ಮಕ್ಕಳಿಗೆ ಹೇಳಿದ ಮಾತು ‘ನೋಡ್ರಪ್ಪಾ ಮಕ್ಕಳ್ರಾ, ನೀವು ಅನಾಥಾಶ್ರಮದಲ್ಲಿರ್ತೀರಾ, ನಾನು ಹಾಸ್ಟೆಲ್‍ನಲ್ಲಿರ್ತೀನಿ, ಏನೂ ವ್ಯತ್ಯಾಸವಿಲ್ಲ’. ಮಕ್ಕಳು ಮನದಣಿಯೆ ನಕ್ಕರು.

***

ದೇವರ ವಿಚಾರದಲ್ಲಿ ಎಚ್ಚೆನ್ ನಿಲುವು ಪಕ್ಕಾ ವೈಚಾರಿಕ. ಈಗ ಅವರು ಇದ್ದಿದ್ದರೆ ಕೊರೊನಾ ಸಂಕಷ್ಟದಲ್ಲಿರುವವರಿಗೆ ಯಾವ ಧರ್ಮದ ದೇವರೂ ನೆರವಿಗೆ ಬರದುದರ ಬಗ್ಗೆ ಏನು ಹೇಳುತ್ತಿದ್ದರೋ. ಅವರು ಹೇಳುತ್ತಿದ್ದ ಜೋಕುಗಳಲ್ಲಿ ಒಂದು ಹೀಗೆ ಇದೆ. ಪತ್ನಿ ಕಾಣೆಯಾದವನೊಬ್ಬ ಶ್ರೀರಾಮ ದೇವಸ್ಥಾನಕ್ಕೆ ಹೋಗಿ ತನ್ನ ಪತ್ನಿಯನ್ನು ಹುಡುಕಿಕೊಡುವಂತೆ ಬೇಡಿಕೊಂಡನಂತೆ. ಆಗ ರಾಮ ‘ಅಲ್ಲಯ್ಯಾ, ನನ್ನ ಹೆಂಡ್ತೀನೇ ಹುಡುಕಿಕೊಳ್ಳೋದು ನನಗೆ ಆಗಲಿಲ್ಲ, ನಿನಗೆ ಹೇಗೆ ಸಹಾಯ ಮಾಡಲಿ’ ಎಂದನಂತೆ. ‘ಇಲ್ಲಿಂದ ಸ್ವಲ್ಪ ದೂರದಲ್ಲಿ ಆಂಜನೇಯ ದೇವಸ್ಥಾನವಿದೆ, ಅಲ್ಲಿ ಹೋಗಿ ಕೇಳಿಕೋ, ಅವನೇ ನನ್ನ ಹೆಂಡತಿಯನ್ನು ಹುಡುಕಿಕೊಟ್ಟವನು’ ಎಂದೂ ಹೇಳಿದನಂತೆ.

ಎಚ್ಚೆನ್ ಎಂದರೆ ಎಚ್ಚೆನ್!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT