ಬುಧವಾರ, ನವೆಂಬರ್ 13, 2019
23 °C
ನೌಕರರಿಗೆ 5 ವರ್ಷಕ್ಕೇ ವೇತನ ಪರಿಷ್ಕರಣೆ

ಎಚ್‌ಎಎಲ್‌: ಕಾರ್ಮಿಕ ವೆಚ್ಚ ಹೆಚ್ಚಿದರೆ ಕಂಪನಿಗೇ ಅಪಾಯ

Published:
Updated:

ಬೆಂಗಳೂರು: ಹಿಂದೂಸ್ತಾನ್‌ ಏರೋನಾಟಿಕಲ್‌ ಲಿಮಿಟೆಡ್‌ (ಎಚ್‌ಎಎಲ್‌) ಕಂಪನಿಯಲ್ಲಿ ಅಧಿಕಾರಿ ವರ್ಗಕ್ಕೆ 10 ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಆಗುತ್ತದೆ. ಆದರೆ, ನೌಕರರಿಗೆ ಐದು ವರ್ಷಕ್ಕೇ ಆಗುತ್ತಿದೆ. ಇದನ್ನು ಅರ್ಥಮಾಡಿಕೊಂಡು ನೌಕರರು ತಮ್ಮ ಮುಷ್ಕರವನ್ನು ಶೀಘ್ರ ಕೊನೆಗೊಳಿಸುವ ವಿಶ್ವಾಸ ಇದೆ ಎಂದು ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ವಿ.ಎಂ.ಚಮೋಲಾ ಹೇಳಿದರು.

ವೇತನ ಪರಿಷ್ಕರಣೆಗೆ ಆಗ್ರಹಿಸಿ ನೌಕರರು ನಡೆಸುತ್ತಿರುವ ಮುಷ್ಕರ ಮಂಗಳವಾರ ಎರಡನೇ ದಿನಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಒಂದೂವರೆ ವರ್ಷದಿಂದೀಚೆಗೆ ವಿವಿಧ ಕಾರ್ಮಿಕ ಸಂಘಟನೆಗಳೊಂದಿಗೆ 11 ಬಾರಿ ಮಾತುಕತೆ ನಡೆಸಿ ವೇತನ ಪರಿಷ್ಕರಣೆಯಲ್ಲಿ ಅನ್ಯಾಯ ಆಗಿಲ್ಲ ಎಂಬುದನ್ನು ಮನವರಿಕೆ ಮಾಡುವ ಪ್ರಯತ್ನ ನಡೆದಿದೆ. ಆಡಳಿತ ಮಂಡಳಿಯ ಕಾಳಜಿಯನ್ನು ನೌಕರರು ಪರಿಗಣಿಸಬೇಕು ಎಂದರು.

‘ನೌಕರರ ವೇತನದಲ್ಲಿ ಶೇ 9ರಿಂದ 24ರಷ್ಟು (ಸರಾಸರಿ ಶೇ 15ರಿಂದ 16) ಹೆಚ್ಚಳ ಮಾಡಲಾಗಿದೆ. ಒಟ್ಟಾರೆ ವರಮಾನದಲ್ಲಿ ಕಾರ್ಮಿಕ ವೆಚ್ಚ ಶೇ 20ಕ್ಕಿಂತ ಕಡಿಮೆ ಇರಬೇಕು ಎಂಬ ನಿಯಮ ಇದ್ದು, ಎಚ್‌ಎಎಲ್‌ನಲ್ಲಿ ಅದು ಶೇ 24ರಷ್ಟಿದೆ. ಅಧಿಕ ಕಾರ್ಮಿಕ ವೆಚ್ಚದಿಂದ ಕಂಪನಿಗೆ ಕಾರ್ಯಾದೇಶಗಳು ಕಡಿಮೆಯಾಗುವ ಅಪಾಯವೂ ಇದೆ. ಹೀಗಾಗಿ ಕಂಪನಿಯ ಒಟ್ಟಾರೆ ಹಿತದೃಷ್ಟಿಯನ್ನು ನೋಡಿಕೊಂಡು, ಸರ್ಕಾರ ನಿಗದಿಪಡಿಸಿದ ಮಾನದಂಡದಂತೆಯೇ ವೇತನ ಪರಿಷ್ಕರಣೆ ಮಾಡಲಾಗಿದೆ’ ಎಂದು ಹೇಳಿದರು.

ಹಣಕಾಸು ಸ್ಥಿತಿ ಸುಸ್ಥಿರ: ಕಂಪನಿಯ ಹಣಕಾಸು ಸ್ಥಿತಿ ಸುಸ್ಥಿರವಾಗಿದೆ. ಹೀಗಾಗಿಯೇ ವೇತನ ಪರಿಷ್ಕರಣೆ ಮಾಡಲಾಗಿದೆ. ಮುಂದಿನ 10 ವರ್ಷಗಳಲ್ಲಿ ಕಂಪನಿಗೆ ಸಿಗುವ ಕಾರ್ಯಾದೇಶಗಳ ಆಧಾರದಲ್ಲಿ ಕಂಪನಿಯ ಹಣಕಾಸು ಪರಿಸ್ಥಿತಿ ಇರುತ್ತದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ತೀರಾ ಅಧಿಕ ಕಾರ್ಮಿಕ ವೆಚ್ಚ ಎದುರಾದರೆ ಎಚ್‌ಎಎಲ್‌ನ ಉತ್ಪನ್ನಗಳನ್ನು ಖರೀದಿಸುವವರೇ ಇಲ್ಲವಾಗುವ ಅಪಾಯ ಇದೆ ಎಂದು ಹಣಕಾಸು ವಿಭಾಗದ ನಿರ್ದೇಶಕ ಸಿ. ಬಿ. ಅನಂತಕೃಷ್ಣನ್‌ ಹೇಳಿದರು.

‘ಸಾರ್ವಜನಿಕ ಕ್ಷೇತ್ರದ ಉದ್ಯಮಗಳ ಪೈಕಿ ಎಚ್‌ಎಎಲ್‌ನ ಕಾರ್ಮಿಕ ವೆಚ್ಚ ಅಧಿಕ ಎಂಬ ಭಾವನೆ ಇದೆ. ಇದು ಕಂಪನಿಯ ಒಟ್ಟಾರೆ ವಹಿವಾಟಿನ ಮೇಲೆ ಪ್ರಭಾವ ಬೀಳುತ್ತದೆ. ಕಾರ್ಮಿಕ ವೆಚ್ಚವನ್ನು ಗ್ರಾಹಕರ ಮೇಲೆ ಹೇರಲಾಗದು. ಹೀಗಿದ್ದರೂ ಅತ್ಯಂತ ಸ್ಪರ್ಧಾತ್ಮಕ ರೀತಿಯಲ್ಲಿ ನೌಕರರ ವೇತನ ಪರಿಷ್ಕರಣೆ ನಡೆದಿದೆ’ ಎಂದರು.

ಮುಷ್ಕರದಿಂದ ಸದ್ಯಕ್ಕೆ ತೊಂದರೆ ಇಲ್ಲ

‘ಎಚ್‌ಎಎಲ್‌ ನೌಕರರ ಮುಷ್ಕರದಲ್ಲಿ 19 ಸಾವಿರದಷ್ಟು ನೌಕರರ ಪೈಕಿ ಬಹುತೇಕ ಶೇ 50ರಷ್ಟು ಮಂದಿ ಪಾಲ್ಗೊಂಡಿರಬಹುದು. ಆದರೆ ಸದ್ಯಕ್ಕೆ ಉತ್ಪಾದನೆ, ನಿರ್ವಹಣೆ ವಿಚಾರದಲ್ಲಿ ತೊಂದರೆ ಇಲ್ಲ. ಗುತ್ತಿಗೆ ಆಧಾರದಲ್ಲಿ ಕೆಲಸಕ್ಕಿರುವ ನೌಕರರು, ಕಾರ್ಯನಿರ್ವಾಹಕರು, ಅಧಿಕಾರಿಗಳು ಸದ್ಯದ ಬಿಕ್ಕಟ್ಟಿನ ಪರಿಸ್ಥಿತಿಯನ್ನು ನಿಭಾಯಿಸಿಕೊಂಡು ಹೋಗುವ ಸಾಮರ್ಥ್ಯ ಹೊಂದಿದ್ದಾರೆ, ಮುಷ್ಕರ ಸುದೀರ್ಘ ಸಮಯ ಮುಂದುವರಿಯುವ ಸಾಧ್ಯತೆ ಇಲ್ಲ. ನಮ್ಮ ಆಂತರಿಕ ಬಿಕ್ಕಟ್ಟನ್ನು ನಾವೇ ಬಗೆಹರಿಸುವ ವಿಶ್ವಾಸ ಇರುವುದರಿಂದ ರಕ್ಷಣಾ ಸಚಿವರು ಇಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯ ಬೀಳಲಾರದು’ ಎಂದು ವಿ. ಎಂ. ಚಮೋಲಾ ಹೇಳಿದರು.

ಮುಷ್ಕರ ವಾಪಸ್‌ ಇಲ್ಲ

ಆಡಳಿತ ಮಂಡಳಿ ಸತ್ಯವನ್ನು ಮರೆಮಾಚಿದೆ. ನೌಕರರಿಗೆ ನ್ಯಾಯ ಸಿಕ್ಕಿಲ್ಲ. 5, 6, 7 ವೇತನ ಹಂತದ ನೌಕರರಿಗೆ ಸೌಲಭ್ಯ ತೀರಾ ಕಡಿಮೆಯಾಗಿದೆ. ಹೀಗಾಗಿ ಮುಷ್ಕರ ಅನಿರ್ದಿಷ್ಟ ಅವಧಿಗೆ ಮುಂದುವರಿಯಲಿದೆ ಎಂದು ಎಚ್‌ಎಎಲ್‌ ಯೂನಿಯನ್‌ನ ಅಖಿಲ ಭಾರತ ಸಮನ್ವಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಸೂರ್ಯದೇವ್‌ ಚಂದ್ರಶೇಖರ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)