ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಪಿನ ಬುತ್ತಿ ತೆರೆಯುವ ಹನುಮ ಜಯಂತಿ

ಹತ್ತೂರುಗಳ ಗ್ರಾಮಸ್ಥರನ್ನು ಬೆಸೆಯುವ ಉತ್ಸವ
Last Updated 26 ಡಿಸೆಂಬರ್ 2020, 18:10 IST
ಅಕ್ಷರ ಗಾತ್ರ

ಹೆಸರಘಟ್ಟ: ಹನುಮ ಜಯಂತಿ ಅಂದರೆ ಅಲ್ಲಿ ನೆನಪಿನ ಬುತ್ತಿ ಬಿಚ್ಚುಕೊಳ್ಳುತ್ತದೆ. ಗೋವುಗಳ ಮಾರಾಟ, ಮದುವೆಯ ಮಾತುಕತೆ, ಹೆಣ್ಣು ಗಂಡುಗಳ ಗೊತ್ತುವಳಿ, ಜಗಳ ಪಂಚಾಯಿತಿ... ಹೀಗೆ ನೂರಾರು ಕಾರಣಗಳಿಗೆ ಜನ ಇಲ್ಲಿ ಸೇರುತ್ತಿದ್ದರು.

ಹೆಸರಘಟ್ಟ ಗ್ರಾಮದ ಪಶು ಸಂಗೋಪನೆ ಕ್ಷೇತ್ರದಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ನಡೆಯುವ ಹನುಮ ಜಯಂತಿಯಂದು ಹತ್ತೂರ ಗ್ರಾಮಗಳ ಜನ ಸೇರುತ್ತಾರೆ.

ಜಮೀನು ಬಿಟ್ಟುಕೊಟ್ಟ ಜನ:ಪಶು ಸಂಗೋಪನೆ ಇಲಾಖೆಗೆ ತಮ್ಮ ಗ್ರಾಮ ಮತ್ತು ಜಮೀನುಗಳನ್ನು ಬಿಟ್ಟು ಕೊಟ್ಟ ಗ್ರಾಮಸ್ಥರು ನಗರದ ಬೇರೆ ಬೇರೆ ಭಾಗಗಳಲ್ಲಿ ನೆಲೆಗೊಂಡರು. ಮತ್ತೆ ಕೆಲವರು ಸರ್ಕಾರ ಸೂಚಿಸಿದ ಜಾಗದಲ್ಲಿ ಬದುಕು ಕಟ್ಟಿಕೊಂಡರು. ಸ್ಥಳಾಂತರವಾಗಿದ್ದ ಗ್ರಾಮಸ್ಥರು ಮೂಲ ಗ್ರಾಮದಲ್ಲಿದ್ದ ದೇವಸ್ಥಾನಗಳನ್ನು ಯಥಾ ಸ್ಥಿತಿಯಲ್ಲಿ ಕಾಯ್ದುಕೊಂಡು ಬಂದರು. ಜಾತ್ರೆ ಅಚರಣೆಗಳನ್ನು ನಡೆಸಿಕೊಂಡು ಬಂದರು. ಇಂತಹ ದೇಗುಲಗಳ ಸಾಲಿನಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನವೂ ಒಂದು.

ಪಶು ಸಂಗೋಪನೆ ಇಲಾಖೆಗಾಗಿ ಸೀತಕೆಂಪನಹಳ್ಳಿ, ಬ್ಯಾತ, ಹಾರೋಹಳ್ಳಿ ಪಾಳ್ಯ, ಕಾಕೋಳು ಗ್ರಾಮಗಳು ಸ್ಥಳಾಂತರವಾದವು. ಸ್ಥಳಾಂತರಕ್ಕೆ ಮುಂಚೆ ಹನುಮ ಜಯಂತಿಯಂದು ದೊಡ್ಡ ಜಾತ್ರೆಯೇ ನಡೆಯುತ್ತಿತ್ತು. ಹೆಸರಘಟ್ಟ ಕೆರೆಯ ಸುತ್ತ ಮುತ್ತಲಿನ ಎಲ್ಲ ಗ್ರಾಮಸ್ಥರು ಬಂದು ಜಾತ್ರೆಯಲ್ಲಿ ಭಾಗಿಯಾಗುತ್ತಿದ್ದರು. ಜಾತ್ರೆಯ ದಿನದಲ್ಲಿ ರಾಗಿ, ಮೆಕ್ಕೆಜೋಳ, ವಿವಿಧ ತರಕಾರಿಗಳನ್ನು ರೈತರು ತಂದು ಮಾರಾಟ ಮಾಡುತ್ತಿದ್ದರು. ಹೆಣ್ಣು ಗಂಡುಗಳನ್ನು ತೋರಿಸುತ್ತಿದ್ದರು. ನವ ದಂಪತಿ ಬರಲೇ ಬೇಕು ಎನ್ನುವ ಅಲಿಖಿತ ನಿಯಮ ಇಲ್ಲಿತ್ತು ಎನ್ನುತ್ತಾರೆ ಸೀತಕೆಂಪನಹಳ್ಳಿ ಗ್ರಾಮದ ನಿವಾಸಿ ಗೀತಮ್ಮ ಮುನಿಯಪ್ಪ.

ಗ್ರಾಮಸ್ಥರು ತಮ್ಮ ಪರಿಚಯಸ್ಥರಿಗೆ ದೇವಸ್ಥಾನ ಬದಿಯಲ್ಲಿ ಬಿದಿರಿನ ತಾತ್ಕಾಲಿಕ ಮನೆಗಳನ್ನು ನಿರ್ಮಿಸಿ ಊಟ ಹಾಕಿಸುತ್ತಿದ್ದರು. ಗ್ರಾಮಸ್ಥರಲ್ಲಿ ಬಾಂಧವ್ಯ ವೃದ್ಧಿಗೆ ಹನುಮ ಜಯಂತಿ ಸಹಕಾರಿಯಾಗಿತ್ತು. ಆ ಕಾರಣಕ್ಕಾಗಿಯೇ, ಸ್ಥಳಾಂತರಗೊಂಡಿದ್ದರೂ ವರ್ಷಕ್ಕೆ ಒಮ್ಮೆ ಹತ್ತು ಗ್ರಾಮಗಳ ಗ್ರಾಮಸ್ಥರು ಸೇರಿ ಹನುಮ ಜಯಂತಿ ಮಾಡುತ್ತೇವೆ ಎಂದು ತಮ್ಮ ನೆನಪಿನ ಬುತ್ತಿ ಬಿಚ್ಚಿಟ್ಟರು ಕಾಕೋಳು ಗ್ರಾಮದ ನಿವಾಸಿ ಮುರಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT