ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಲ್ಲ ಸಮಾಜದವರನ್ನು ಒಳಗೊಂಡು ಸಮ್ಮೇಳನ: ಡಾ. ಗಿರಿಧರ ಕಜೆ ಹೇಳಿಕೆ

ಹವ್ಯಕ ಮಹಾಸಭೆ ಸಂಸ್ಥಾಪನೋತ್ಸವದಲ್ಲಿ ಡಾ. ಗಿರಿಧರ ಕಜೆ ಹೇಳಿಕೆ
Published 31 ಮಾರ್ಚ್ 2024, 21:30 IST
Last Updated 31 ಮಾರ್ಚ್ 2024, 21:30 IST
ಅಕ್ಷರ ಗಾತ್ರ

ಬೆಂಗಳೂರು: ‘ಮೂರನೇ ವಿಶ್ವ ಹವ್ಯಕ ಸಮ್ಮೇಳನವು 2024ರ ಡಿ.27ರಿಂದ 29ರವರೆಗೆ ಇಲ್ಲಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಈ ಸಮ್ಮೇಳನವು ಎಲ್ಲ ಸಮಾಜವನ್ನೂ ಒಳಗೊಳ್ಳಲಿದ್ದು, ಹವ್ಯಕರ ವಿಶೇಷತೆಗಳನ್ನು ತಿಳಿಸಿಕೊಡಲಾಗುತ್ತದೆ’ ಎಂದು ಅಖಿಲ ಹವ್ಯಕ ಮಹಾಸಭೆ ಅಧ್ಯಕ್ಷ ಡಾ. ಗಿರಿಧರ ಕಜೆ ತಿಳಿಸಿದರು. 

ಮಹಾಸಭೆ ನಗರದಲ್ಲಿ ಭಾನುವಾರ ಹಮ್ಮಿಕೊಂಡ ಸಂಸ್ಥಾಪನೋತ್ಸವ ಹಾಗೂ ವಿಶೇಷ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

‘ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಹತ್ತಾರು ಸಮಾವೇಶಗಳು ನಡೆಯಲಿದ್ದು, ಇದು ಎಲ್ಲ ಸಮಾಜದವರಿಗೂ ಮುಕ್ತವಾಗಿರಲಿದೆ. ಇದು ಜಾತಿಯ ಸಮಾವೇಶವಾಗದೇ, ಹವ್ಯಕ ಸಮಾಜವನ್ನು ಸಮಷ್ಟಿ ಸಮಾಜಕ್ಕೆ ಪರಿಚಯಿಸುವ ಕಾರ್ಯ ಇಲ್ಲಿ ನಡೆಯಲಿದೆ. 2018ರಲ್ಲಿ ನಡೆದ ಎರಡನೇ ವಿಶ್ವ ಹವ್ಯಕ ಸಮ್ಮೇಳನಕ್ಕೂ ನಾಡಿನಾದ್ಯಂತ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿತ್ತು. ಹವ್ಯಕ ಸಮಾಜ ಆದರ್ಶ ಸಮಾಜವಾಗಿದೆ. ಲೋಕಕಲ್ಯಾಣದ ಕಾರಣಕ್ಕಾಗಿಯೇ ಹುಟ್ಟಿಕೊಂಡವರು ಹವ್ಯಕರು. ಈ ಸಮಾಜವು ತನ್ನತನವನ್ನು ಇಟ್ಟುಕೊಂಡು ದೊಡ್ಡ ವೃಕ್ಷವಾಗಿ ಇಡೀ ಲೋಕಕ್ಕೆ ನೆರಳನ್ನು ನೀಡಬೇಕಾಗಿದೆ’ ಎಂದು ಹೇಳಿದರು. 

ಭಾಷಾ ತಜ್ಞ ಪಾದೇಕಲ್ಲು ವಿಷ್ಣು ಭಟ್ಟ, ‘ನಮ್ಮಲ್ಲಿರುವ ಜ್ಞಾನವನ್ನು ಹಂಚುವುದರ ಮೂಲಕ ಸಮಾಜಕ್ಕೆ ನಾವು ಉಪಕಾರಿಯಾಗಬೇಕು. ನಮ್ಮ ಸಾಧನೆಯ ಜೊತೆ ಜೊತೆಗೆ ನಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಜ್ಞಾನವನ್ನೂ ನಾವು ಹಂಚಬೇಕು. ನಮ್ಮ ಅನುಭವಗಳನ್ನು ದಾಖಲಿಸಬೇಕು’ ಎಂದರು. 

‘ಹವ್ಯಕ ವಿಭೂಷಣ ಪ್ರಶಸ್ತಿ’ ಪುರಸ್ಕೃತ ಸಾಹಿತಿ ಎಚ್.ಎಂ. ತಿಮ್ಮಪ್ಪ ಕಲಸಿ, ‘ವಾಸ್ತವದಲ್ಲಿ ಹವ್ಯಕರು ಅಲ್ಪಸಂಖ್ಯಾತರಾಗಿದ್ದಾರೆ. ಈ ಸಮುದಾಯದವರಿಗೆ ಯಾವುದೇ ಸರ್ಕಾರಿ ಸೌಲಭ್ಯಗಳು ಸಿಗುತ್ತಿಲ್ಲ. ತಮ್ಮಲ್ಲಿರುವ ಪ್ರತಿಭೆಯಿಂದ ಎಲ್ಲ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಹವ್ಯಕರನ್ನು ಕದಂಬ ದೊರೆ ಮಯೂರವರ್ಮ ಉತ್ತರದ ಅಹಿಚ್ಛತ್ರದಿಂದ ಕರೆದುಕೊಂಡು ಬಂದ ಎಂಬುದು ನಿಜವಾದರೂ, ಹವ್ಯಕರು ಮೂಲತಃ ಈ ನಾಡಿನವರು. ಕಾರಣಾಂತರಗಳಿಂದ ಇಲ್ಲಿಂದ ಉತ್ತರ ಭಾರತಕ್ಕೆ ವಲಸೆ ಹೋಗಿದ್ದರು. ಮಯೂರವರ್ಮ ಮತ್ತೆ ಹವ್ಯಕರನ್ನು ಈ ಮಣ್ಣಿಗೆ ಕರೆತಂದ’ ಎಂದು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT