ಬೆಂಗಳೂರು: ಬಾಯಲ್ಲಿ ನೀರೂರಿಸುವ ಮಲೆನಾಡು-ಕರಾವಳಿ ಭಾಗದ ಹವ್ಯಕರ ಪಾರಂಪರಿಕ ತಿನಿಸುಗಳು, ಹಳ್ಳಿ ಸೊಗಡಿನ ಆಲೆಮನೆ, ಪಾರಂಪರಿಕ ವಸ್ತುಗಳ ಪ್ರದರ್ಶನ, ಅಡಿಕೆ ಸಂಸ್ಕೃತಿಯ ಸಮಗ್ರ ದರ್ಶನ...

ಇವು ಕಾಣಸಿಗುವುದು ಅಖಿಲ ಹವ್ಯಕ ಮಹಾಸಭಾ ನಗರದ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿರುವ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ. ಮೂರು ದಿನಗಳ ಈ ಸಮ್ಮೇಳನಕ್ಕೆ ಶುಕ್ರವಾರ ಚಾಲನೆ ದೊರೆತಿದ್ದು, ಒಂದೇ ಸೂರಿನಡಿ ಹವ್ಯಕ ಸಮುದಾಯದ ಹಲವು ವಿಶೇಷಗಳು ಅನಾವರಣಗೊಂಡಿವೆ. ನಾಡಿನ ವಿವಿಧೆಡೆ ನೆಲೆಸಿರುವ ಹವ್ಯಕರ ಸಮ್ಮಿಲನಕ್ಕೆ ಕಾರಣವಾದ ಈ ಸಮ್ಮೇಳನ, ಸಮುದಾಯದ ಮುಂದಿರುವ ಸವಾಲು ಹಾಗೂ ಎದುರಿಸುತ್ತಿರುವ ಸಮಸ್ಯೆಗಳ ಚಿಂತನ ಮಂಥನಕ್ಕೆ ದಾರಿ ತೋರಿತು.

ಪ್ರಧಾನ ವೇದಿಕೆಗೆ ಸಾಗುವ ಮಾರ್ಗದ ಇಕ್ಕೆಲಗಳಲ್ಲಿಯೇ ‘ಹವ್ಯಕ ಪ್ರಶಸ್ತಿ’ ಪುರಸ್ಕೃತರ ಕಿರು ಪರಿಚಯ ದರ್ಶನವಾಗಲಿದೆ. ಶುಕ್ರವಾರ ಬೆಳಿಗ್ಗೆ ಒಂದೆಡೆ ಹವ್ಯಕ ಮಹಿಳೆಯರು ಭಜನೆ ಮಾಡಿದರೆ, ಇನ್ನೊಂದೆಡೆ ಪೂಜೆ ಹಾಗೂ ಯಜ್ಞವನ್ನು ನಡೆಸಲಾಯಿತು. ಪ್ರಧಾನ ವೇದಿಕೆಯಲ್ಲಿ ವಿಚಾರಗೋಷ್ಠಿಗಳು ನಡೆದರೆ, ಸಮಾನಾಂತರ ವೇದಿಕೆಯಲ್ಲಿ ಗಾಯನ, ನೃತ್ಯ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಬೆಳಿಗ್ಗೆಯಿಂದಲೇ ನಡೆದವು.

ಬೆಳಿಗ್ಗೆ 8 ಗಂಟೆಯಿಂದಲೇ ಅರಮನೆ ಮೈದಾನವನ್ನು ಹವ್ಯಕರು ಆವರಿಸಿಕೊಂಡಿದ್ದರು. ಮಠಾಧೀಶರು ಹಾಗೂ ಅತಿಥಿಗಳಿಗೆ 1,081 ಮಾತೆಯರಿಂದ ಪೂರ್ಣಕುಂಭ ಸ್ವಾಗತ, 1,081 ಮಕ್ಕಳಿಂದ ಪುಷ್ಪವೃಷ್ಟಿ ಸ್ವಾಗತ ಹಾಗೂ 1,081 ಪುರುಷರಿಂದ ವೇದಘೋಷ ಸ್ವಾಗತ ಕೋರಲಾಯಿತು. ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಅವರನ್ನು ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು. 2,300 ಕಿ.ಮೀ. ದೂರದ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಅಹಿಚ್ಛತ್ರದಿಂದ ತರಲಾದ ಜ್ಯೋತಿಯಿಂದ ದೀಪ ಬೆಳಗುವುದರ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು.

ಸಮಾರಂಭಕ್ಕೆ ಆರಂಭಕ್ಕೆ ಮುನ್ನ, ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರಿಗೆ ಮೌನಾಚರಣೆ ಮಾಡಿ, ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಪ್ರಶಸ್ತಿ ಪ್ರದಾನ: ಉದ್ಘಾಟನೆ ಸಮಾರಂಭದ ಬಳಿಕ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 81 ಮಂದಿಗೆ ‘ಹವ್ಯಕ ಸಾಧಕ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಚಲನಚಿತ್ರ ನಟ ರಮೇಶ್ ಅರವಿಂದ್ ಅವರು ದಿಕ್ಸೂಚಿ ಭಾಷಣ ಮಾಡಿದರು. ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಜಿ.ಎಲ್.ಹೆಗಡೆ ಕುಮಟಾ ಅವರ ಅಧ್ಯಕ್ಷತೆಯಲ್ಲಿ ‘21ನೇ ಶತಮಾನದ ಹವ್ಯಕರು’ ಎಂಬ ವಿಷಯದ ಬಗ್ಗೆ ಪ್ರಥಮ ಗೋಷ್ಠಿ ನಡೆಯಿತು. ಗಜಾನನ ಶರ್ಮ ಹುಕ್ಕಲು ಅವರ ಅಧ್ಯಕ್ಷತೆಯಲ್ಲಿ ನಡೆದ ‘ಹವ್ಯಕರ ಸಾರ್ವಕಾಲಿಕ ಕೊಡುಗೆಗಳು’ ಗೋಷ್ಠಿಯಲ್ಲಿ ಹವ್ಯಕರ ಆಹಾರ ಪದ್ಧತಿ, ಭಾಷೆ ಮತ್ತು ಕಲೆಯ ಬಗ್ಗೆ ವಿಷಯ ತಜ್ಞರು ವಿಚಾರ ಮಂಡಿಸಿದರು. ಬಳಿಕ, 81 ಕೃಷಿಕರಿಗೆ ‘ಹವ್ಯಕ ಕೃಷಿ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ದಿಕ್ಸೂಚಿ ಭಾಷಣ ಮಾಡಿದರು. ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದರು.

ಸಂಜೆ ಪ್ರಮೋದ ಹೆಗಡೆ ಯಲ್ಲಾಪುರ ಅವರ ಅಧ್ಯಕ್ಷತೆಯಲ್ಲಿ ‘ಹವ್ಯಕರ ಬದುಕು ಮತ್ತು ಭವಿಷ್ಯ’ ಗೋಷ್ಠಿ ನಡೆಯಿತು. ವಿವಿಧ ಜಾತಿಗಳ ಸಂಘ–ಸಂಸ್ಥೆಗಳ ಮುಖಂಡರಿಗೆ ಸೌಹಾರ್ದ ಗೌರವ ಸನ್ಮಾನ ಸಲ್ಲಿಸಲಾಯಿತು. ಹವ್ಯಕ ಕಲಾವಿದರಿಂದ ‘ಇಗಪ್ಪ ಹೆಗಡೆಯ ವಿವಾಹ ಪ್ರಹಸನ’ ನಾಟಕವು ಪ್ರೇಕ್ಷಕರನ್ನು ರಂಜಿಸಿತು. ಹವ್ಯಕ ಸಂಗೀತ ಕಲಾವಿದರಿಂದ ಸುಗಮ ಸಂಗೀತ ಮತ್ತು ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳೂ ನಡೆದವು.

ಆಲೆಮನೆ ಗೋ ಪ್ರದರ್ಶನ

ಸಮ್ಮೇಳನದಲ್ಲಿ ಗ್ರಾಮೀಣ ಸೊಗಡಿನ ಆಲೆ ಮನೆ ಗಮನ ಸೆಳೆಯಿತು. ಕೋಣದ ನೆರವಿನಿಂದ ಆಲೆಗಾಣದ ಮೂಲಕ ಸ್ಥಳದಲ್ಲಿಯೇ ತೆಗೆದ ಕಬ್ಬಿನ ಹಾಲಿಗೆ ಬೇಡಿಕೆ ಹೆಚ್ಚಿತ್ತು. ಅಲ್ಲಿಯೇ ಬೆಲ್ಲವನ್ನೂ ತಯಾರಿಸಿ ವಿತರಿಸಲಾಯಿತು. ವಿವಿಧ ತಳಿಯ ದೇಸಿ ಗೋವುಗಳ ಪ್ರದರ್ಶನವೂ ಸಮ್ಮೇಳನದಲ್ಲಿ ನಡೆಯಿತು. ಸಮ್ಮೇಳನದಲ್ಲಿ ಗಾಯತ್ರಿ ಥೀಮ್ ಪಾರ್ಕ್ ನಿರ್ಮಿಸಲಾಗಿದೆ. ಗಾಯತ್ರಿ ಮಂತ್ರದ ಮಹತ್ವ ಇಲ್ಲಿ ದರ್ಶನವಾಗಲಿದೆ. ಜನಿವಾರ ತಯಾರಿ ಗೋತ್ರ ಪ್ರವರ್ತಕರು ಗಾಯತ್ರಿ ಯಜ್ಞ ಪಲ್ಲಕ್ಕಿ ಉತ್ಸವ ಸೇರಿ ಗಾಯತ್ರಿ ದೇವಿಯ ವಿವಿಧ ರೂಪ ಇಲ್ಲಿ ಕಾಣಬಹುದಾಗಿದೆ.

ಪಾಕೋತ್ಸವದಲ್ಲಿ ತರಹೇವಾರಿ ಖಾದ್ಯ

ಹವ್ಯಕರ ಪಾಕ ವೈವಿಧ್ಯವನ್ನು ಸಮ್ಮೇಳನದಲ್ಲಿ ವೀಕ್ಷಿಸಿ ಸವಿಯಬಹುದಾಗಿದೆ. ಅಕ್ಕಿ ಕೇಸರಿ ಜಿಲೇಬಿ ಹಲಸಿನ ಹಣ್ಣಿನ ದೋಸೆ ಕಬ್ಬಿನ ಹಾಲಿನ ದೋಸೆ ಪತ್ರೊಡೆ ಕೊಟ್ಟೆಕಡುಬು ಅತ್ರಾಸ ಕಾಯಿ ಕಡುಬು ಹಾಲುಬಾಯಿ ಗೆಣಸೆಲೆ ಹಲಸಿನ ಹಣ್ಣಿನ ಮುಳಕ ಪಾಯಸ ಹೋಳಿಗೆ ಜೀಗುಜ್ಜೆ ಪೋಡಿ ಸೇರಿ ತರಹೇವಾರಿ ಖಾದ್ಯಗಳಿವೆ. ಕರಕುಶಲ ವಸ್ತುಗಳ ಹಾಗೂ ವಾಣಿಜ್ಯ ಮಳಿಗೆಗಳೂ ಮೇಳದಲ್ಲಿದ್ದು ಬಟ್ಟೆ ಆಲಂಕಾರಿಕ ವಸ್ತುಗಳ ಮಳಿಗೆಗಳಲ್ಲಿ ಜನಜಂಗುಳಿ ಉಂಟಾಗಿತ್ತು. ಸಮ್ಮೇಳನಕ್ಕೆ ಬಂದವರಿಗೆ ಉಚಿತವಾಗಿ ತಿಂಡಿ ಮಧ್ಯಾಹ್ನ ಹಾಗೂ ರಾತ್ರಿ ಊಟವನ್ನು ಒದಗಿಸಲಾಯಿತು. ದಿನವಿಡಿ ಮಜ್ಜಿಗೆಯನ್ನು ವಿತರಿಸಲಾಯಿತು.

ಪಾರಂಪರಿಕ ವಸ್ತು ಅಡಿಕೆ ಸಂಸ್ಕೃತಿ ಹಿಂದೆ ಬಳಸುತ್ತಿದ್ದ ಕಡಗೋಲು ಕೆರೆಮಣೆ ಹೆಡಗೆ ದೋಟಿ ಲಾಟೀನು ಸೇರಿ ವಿವಿಧ ಪಾರಂಪರಿಕ ವಸ್ತುಗಳನ್ನು ಪ್ರದರ್ಶನಕ್ಕೆ ಇರಿಸಲಾಗಿತ್ತು. ಬಿದಿರು ಕೌದಿ ಸೇರಿ ವಿವಿಧ ಕಲೆಯ ಉತ್ಪನ್ನಗಳೂ ಇದ್ದವು. ಅಡಿಕೆ ಕೆಲಸಕ್ಕೆ ಬೇಕಾದ ಕೃಷಿ ಉಪಕರಣಗಳನ್ನು ಇರಿಸಲಾಗಿತ್ತು. ಅಡಿಕೆ ಸುಲಿಯುವ ಯಂತ್ರಗಳು ಸೇರಿ ವಿವಿಧ ಉಪಕರಣಗಳ ಬಗ್ಗೆ ಕೃಷಿಕರು ವಿಚಾರಿಸಿದರು. ಸಮ್ಮೇಳನದಲ್ಲಿ 6 ಸಾವಿರ ಹವ್ಯಕ ಪುಸ್ತಗಳು ಹಾಗೂ 108 ವರ್ಷಗಳ ಪಂಚಾಂಗಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ.

ಸಮ್ಮೇಳನದಲ್ಲಿ ಇಂದು

ಸಮ್ಮೇಳನದ ಎರಡನೇ ದಿನವಾದ ಶನಿವಾರವೂ ಅರಮನೆ ಮೈದಾನದಲ್ಲಿ (ಗೇಟ್ ಸಂಖ್ಯೆ 6) ಬೆಳಿಗ್ಗೆ 9ರಿಂದ ರಾತ್ರಿ 9 ಗಂಟೆವರೆಗೆ ಕಾರ್ಯಕ್ರಮಗಳು ನಡೆಯಲಿದೆ. ಬೆಳಿಗ್ಗೆ 9ಕ್ಕೆ ಸಾಕ್ಷಾತ್ಕಾರ ಸಭೆ ನಡೆಯಲಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಸಾಕ್ಷಾತ್ಕಾರ’ ಕೃತಿ ಬಿಡುಗಡೆ ಮಾಡಲಿದ್ದಾರೆ. ಹವ್ಯಕ ವೇದರತ್ನ ಹವ್ಯಕ ಶಿಕ್ಷಕ ರತ್ನ ಪ್ರಶಸ್ತಿಗಳ ಪ್ರದಾನ ಹಾಗೂ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ಸಂಜೆ ಸುಗಮ ಸಂಗೀತ ಹಾಗೂ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.