ಎಚ್‌ಡಿಕೆ ಮಾಧ್ಯಮ ಕಾರ್ಯದರ್ಶಿ ಕೆ.ಸಿ. ಸದಾನಂದ ನಿಧನ

ಬೆಂಗಳೂರು: ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ಮಾಧ್ಯಮ ಕಾರ್ಯದರ್ಶಿಯಾಗಿದ್ದ ಪತ್ರಕರ್ತ ಕೆ.ಸಿ. ಸದಾನಂದ (49) ಹೃದಯಾಘಾತದಿಂದ ಸೋಮವಾರ ತಡ ರಾತ್ರಿ ನಿಧನರಾಗಿದ್ದಾರೆ.
ಹಲವು ವರ್ಷಗಳಿಂದ ಕುಮಾರಸ್ವಾಮಿ ಅವರ ಜತೆಗಿದ್ದ ಸದಾನಂದ, ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯವರ ಮಾಧ್ಯಮ ಸಮನ್ವಯಕಾರರಾಗಿ ಕಾರ್ಯನಿರ್ವಹಿಸಿದ್ದರು. ನಂತರದ ದಿನಗಳಲ್ಲಿ ಖಾಸಗಿಯಾಗಿ ಕುಮಾರಸ್ವಾಮಿ ಅವರ ಮಾಧ್ಯಮ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು.
ಸೋಮವಾರ ತಡ ರಾತ್ರಿ ರಕ್ತದೊತ್ತಡದಲ್ಲಿ ಕುಸಿತ ಉಂಟಾಗಿತ್ತು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಹೃದಯಾಘಾತದಿಂದ ರಾತ್ರಿ 12 ಗಂಟೆ ಸುಮಾರಿಗೆ ಕೊನೆಯುಸಿರೆಳೆದರು.
ದೀರ್ಘ ಕಾಲದ ನನ್ನ ಒಡನಾಡಿ, ಹಿರಿಯ ಪತ್ರಕರ್ತ, ಮಾಧ್ಯಮ ಕಾರ್ಯದರ್ಶಿಯೂ ಆಗಿದ್ದ ಕೆ.ಸಿ. ಸದಾನಂದ ನಿಧನರಾಗಿದ್ದಾರೆ. ಅವರ ಅಗಲಿಕೆ ನನ್ನನ್ನು ನೋವಿಗೆ ತಳ್ಳಿದೆ. ಎಂಥ ಆಮಿಷಗಳಿಗೂ ಜಗ್ಗದ ಸದಾನಂದ ಕರ್ತವ್ಯನಿಷ್ಠೆ, ಸ್ವಾಮಿನಿಷ್ಠೆಯನ್ನೂ ಪ್ರದರ್ಶಿಸಿದ್ದರು. ಅವರ ಕುಟುಂಬದ ನೋವು ನನ್ನದೂ ಕೂಡ. ನೀವು ನಿರ್ಗಮಿಸಿದರೂ ‘ಸದಾ’ ನೆನಪಲ್ಲಿರುತ್ತೀರಿ. pic.twitter.com/oIbjje0S8c
— H D Kumaraswamy (@hd_kumaraswamy) July 6, 2021
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನವರಾದ ಸದಾನಂದ, ಸಂಜೆವಾಣಿ, ಈ ಸಂಜೆ, ಕನ್ನಡಪ್ರಭ ಪತ್ರಿಕೆಗಳಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದರು.
ಸದಾನಂದ ಅವರಿಗೆ ತಂದೆ, ಪತ್ನಿ ಹಾಗೂ ಮಗ ಇದ್ದಾರೆ. ಪಾರ್ಥಿವ ಶರೀರವನ್ನು ಸಂಜಯನಗರದಲ್ಲಿರುವ ಮೃತರ ನಿವಾಸಕ್ಕೆ ತರಲಾಗಿದೆ. ಮಧ್ಯಾಹ್ನ ನಗರದಲ್ಲೇ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಅವರ ಆಪ್ತರು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.