ಕೆಳಹಂತದ ಪೊಲೀಸರು ಪತಿವ್ರತೆಯರ ಮಕ್ಕಳಲ್ಲವೇ? ಹೆಡ್‌ಕಾನ್‌ಸ್ಟೆಬಲ್ ಪ್ರಶ್ನೆ

7
‘ಮಾಡಿದರೂ ಗೌರವಯುತ ಬದುಕು ಬೇಕು’

ಕೆಳಹಂತದ ಪೊಲೀಸರು ಪತಿವ್ರತೆಯರ ಮಕ್ಕಳಲ್ಲವೇ? ಹೆಡ್‌ಕಾನ್‌ಸ್ಟೆಬಲ್ ಪ್ರಶ್ನೆ

Published:
Updated:

ಬೆಂಗಳೂರು: ‘ಮಹಾಸ್ವಾಮಿಗಳೇ, ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳು ಮಾತ್ರ ಪತಿವ್ರತೆಯರಿಗೆ ಹುಟ್ಟಿದವರೇ? ಇತರೆ ಸಿಬ್ಬಂದಿ ಪತಿವ್ರತೆಯರ ಮಕ್ಕಳಲ್ಲವೇ? ಠಾಣೆಯಲ್ಲಿ ಕೆಳಹಂತದ ನೌಕರರ ಮೇಲೆ ಏಕೆ ಇಂಥ ಪದಪ್ರಯೋಗಗಳು ನಡೆಯುತ್ತಿವೆ...’

ಇನ್‌ಸ್ಪೆಕ್ಟರ್ ತಮಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಹೆಡ್‌ಕಾನ್‌ಸ್ಟೆಬಲ್‌ವೊಬ್ಬರು ನಗರ ಪೊಲೀಸ್ ಕಮಿಷನರ್‌ಗೆ ಬರೆದಿರುವ ರಾಜೀನಾಮೆ ಪತ್ರದಲ್ಲಿ ಇಂಥ ಪ್ರಶ್ನೆಗಳನ್ನು ಹಾಕಿದ್ದಾರೆ. ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿರುವ ಆ ಪತ್ರ, ಇಲಾಖೆಯ ಆಂತರಿಕ ವಲಯದಲ್ಲಿ ತೀವ್ರ ಚರ್ಚೆಯನ್ನು ಹುಟ್ಟು ಹಾಕಿದೆ.

ಪತ್ರದ ಸಾರಾಂಶ: ‘2005ರಲ್ಲಿ ಕಾನ್‌ಸ್ಟೆಬಲ್ ಆಗಿ ಇಲಾಖೆ ಸೇರಿದ ನಾನು, 2016ರಲ್ಲಿ ಬಡ್ತಿ ಪಡೆದು ಬೆಂಗಳೂರಿನ ಠಾಣೆಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಇದೇ ಸೆ.27ರಂದು ನನ್ನನ್ನು ಕರೆದ ಠಾಣಾ ಬರಹಗಾರರು, ಕೊಲೆ ಪ್ರಕರಣ (ಅಪರಾಧ ಸಂಖ್ಯೆ 31/2018) ಸಂಬಂಧ ನ್ಯಾಯಾಲಯ ಹೊರಡಿಸಿರುವ ‘ಇಂಟಿಮೇಷನ್’ ಆದೇಶ ಪತ್ರವನ್ನು ಗುಂಟೂರು ಜಿಲ್ಲೆಯ ಮಂಗಳಗಿರಿ ನ್ಯಾಯಾಲಯಕ್ಕೆ, ಮಂಗಳಗಿರಿ ಟೌನ್ ಪೊಲೀಸ್ ಠಾಣೆಗೆ ಹಾಗೂ ಗುಂಟೂರು ಜಿಲ್ಲಾ ಕಾರಾಗೃಹಕ್ಕೆ ಕೊಟ್ಟು ಬರುವಂತೆ ಹೇಳಿದರು. ಮರುದಿನ ಮಧ್ಯಾಹ್ನವೇ ನಾನು ಸ್ವಂತ ಖರ್ಚಿನಲ್ಲಿ ಅಲ್ಲಿಗೆ ತೆರಳಿದೆ’ ಎಂದು ಹೆಡ್‌ಕಾನ್‌ಸ್ಟೆಬಲ್ ದೂರಿನಲ್ಲಿ ವಿವರಿಸಿದ್ದಾರೆ.

‘ಮರುದಿನ (ಸೆ. 28) ಮಧ್ಯಾಹ್ನವೇ ಹೊರಟು ಸೆ.29ರ ಬೆಳಿಗ್ಗೆ ಮಂಗಳಗಿರಿ ಟೌನ್ ಠಾಣೆಗೆ ತೆರಳಿದೆ. ಅಲ್ಲಿನ ಇನ್‌ಸ್ಪೆಕ್ಟರ್ ಹರಿಕೃಷ್ಣ, ‘ಆರೋಪಿಗಳು ನಮ್ಮ ಠಾಣೆಯ ವ್ಯಾಪ್ತಿಯವರಲ್ಲ. ಹೀಗಾಗಿ, ಈ ಆದೇಶ ನಮಗೆ ಅನ್ವಯ ಆಗುವುದಿಲ್ಲ. ಮಂಗಳಗಿರಿ ತಾಲ್ಲೂಕು ನ್ಯಾಯಾಧೀಶರು ಆದೇಶ ನೀಡಿದಲ್ಲಿ ಪ್ರತಿಗಳನ್ನು ಸ್ವೀಕರಿಸಿ ಪ್ರಕ್ರಿಯೆ ಪಾಲಿಸುತ್ತೇನೆ’ ಎಂದು ಹೇಳಿದರು. ಆ ವಿಚಾರ ತಿಳಿಸಲು ಕೂಡಲೇ ನಮ್ಮ ಇನ್‌ಸ್ಪೆಕ್ಟರ್‌ಗೆ ಕರೆ ಮಾಡಿದೆ. ಆಗ ಹರಿಕೃಷ್ಣ ಅವರು, ‘ನಾನೇ ನಿಮ್ಮ ಇನ್‌ಸ್ಪೆಕ್ಟರ್ ಜತೆ ಮಾತನಾಡುತ್ತೇನೆ’ ಎಂದು ಫೋನ್ ಪಡೆದು ಮಾತನಾಡಿದ್ದರು.’

‘15 ನಿಮಿಷದ ಬಳಿಕ ನನಗೆ ಕರೆ ಮಾಡಿದ ನಮ್ಮ ಠಾಣೆಯ ಇನ್‌ಸ್ಪೆಕ್ಟರ್, ‘ಅವರಿಗೆ ಫೋನ್ ಯಾಕೆ ಕೊಟ್ಟೆ. ಹೇಳಿದಷ್ಟು ಮಾಡಿಕೊಂಡು ಬರೋಕೆ ಆಗಲ್ವ. ಬೂಟ್ ಕಾಲಿನಲ್ಲಿ ಒದೀತಿನಿ....’ ಎನ್ನುತ್ತ ತುಂಬ ಕೆಟ್ಟ ಪದಗಳನ್ನು ಬಳಸಿ ಬೈದರು. ಅಷ್ಟಕ್ಕೂ ಇಲ್ಲಿ ನಾನು ಮಾಡಿದ ಅಪರಾಧವಾದರೂ ಏನು? ಕರ್ತವ್ಯದ ನಿಮಿತ್ತ ಹೊರಗೆ ಹೋದಾಗ, ಅಲ್ಲಿನ ಬೆಳವಣಿಗೆಗಳನ್ನು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇ ತಪ್ಪಾಯಿತೇ?’

‘ಮಹಾಸ್ವಾಮಿ, ನಾನು ಹಣ ಕೊಟ್ಟು ಈ ಉದ್ಯೋಗಕ್ಕೆ ಬಂದಿಲ್ಲ. ಹಾಗೆಯೇ, ಸಾರ್ವಜನಿಕರಿಂದ ಸುಲಿಗೆ ಮಾಡಿ ಸಂಪಾದಿಸುವ ಉದ್ದೇಶವೂ ನನಗಿಲ್ಲ. ಪೊಲೀಸ್ ಸಮವಸ್ತ್ರ ಹಾಕಿಕೊಂಡು ಜನರ ಮಧ್ಯೆ ಕೆಲಸ ಮಾಡುವುದೇ ಹೆಮ್ಮೆಯ ವಿಚಾರ ಎಂದು ಭಾವಿಸಿಕೊಂಡು ಬದುಕುತ್ತಿದ್ದೇನೆ. ಆದರೆ, ಇನ್‌ಸ್ಪೆಕ್ಟರ್ ನನ್ನನ್ನು ಸಮಾಜಘಾತುಕನ ರೀತಿಯಲ್ಲಿ ನೋಡಿದ್ದಾರೆ.’

‘ಕೆಳಹಂತದ ಸಿಬ್ಬಂದಿ ಅಧಿಕಾರಿಗಳಿಗೆ ಜೀತದಾಳುಗಳಲ್ಲ, ಅಲ್ಲವೇ? ಕನಿಷ್ಠ ಮಾನವೀಯತೆಯೂ ಇಲ್ಲದ ಇಂಥ ಅಧಿಕಾರಿಗಳ ಕೆಳಗೆ ಸ್ವಾಭಿಮಾನ ಬಿಟ್ಟು ಕೆಲಸ ಮಾಡುವುದಕ್ಕಿಂತ, ಕೂಲಿ ಮಾಡಿಕೊಂಡು ಗೌರವಯುತವಾಗಿ ಬದುಕುವುದು ಒಳ್ಳೆಯದು. ಹೀಗಾಗಿ, ರಾಜೀನಾಮೆ ನೀಡುತ್ತಿದ್ದೇನೆ. ಈ ಮನವಿಯನ್ನು ಪುರಸ್ಕರಿಸಿ, ಉದ್ಯೋಗದಿಂದ ಬಿಡುಗಡೆ ಮಾಡಬೇಕೆಂದು ಕೋರುತ್ತೇನೆ’ ಎಂದು ಹೆಡ್‌ಕಾನ್‌ಸ್ಟೆಬಲ್ ಬರೆದಿದ್ದಾರೆ.

ಈ ಕುರಿತು ಇನ್‌ಸ್ಪೆಕ್ಟರ್ ಅವರನ್ನು ವಿಚಾರಿಸಿದಾಗ, ‘ಹೆಡ್‌ಕಾನ್‌ಸ್ಟೆಬಲ್ ಆ ಪತ್ರ ಬರೆದಿಲ್ಲ. ಯಾರೋ ಅದನ್ನು ಸೃಷ್ಟಿಸಿ ವಾಟ್ಸ್‌ಆ್ಯಪ್‌ನಲ್ಲಿ ಹರಿಬಿಟ್ಟಿದ್ದಾರೆ’ ಎಂದು ಹೇಳಿದರು. ಆದರೆ, ಅವರು ರಾಜೀನಾಮೆ ಪತ್ರ ಬರೆದಿರುವುದನ್ನು ಅದೇ ಠಾಣೆಯ ಸಿಬ್ಬಂದಿ ಖಚಿತಪಡಿಸಿದರು.

ರಾಜೀನಾಮೆ ಪತ್ರದ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ, ‘ನಾನು ಯಾರಿಗೂ ಆ ಪತ್ರವನ್ನು ಕಳಿಸಿರಲಿಲ್ಲ. ಇದೆಲ್ಲ ಊಹಾಪೋಹದ ಸುದ್ದಿ. ಅ.2ರಂದು ನಾನು ಗಸ್ತು ಕರ್ತವ್ಯ ನಿರ್ವಹಿಸಿದ್ದೇನೆ’ ಎಂದು ಹೆಡ್‌ಕಾನ್‌ಸ್ಟೆಬಲ್ ಹೆಸರಿನಲ್ಲೂ ಸ್ಪಷ್ಟನೆ ಪತ್ರವೊಂದು ಹರಿದಾಡಿತು.

‘ದೂರು ಪರಿಶೀಲಿಸಿ, ತನಿಖೆಗೆ ಆದೇಶ’

‘ಟಪಾಲು ವಿಭಾಗಕ್ಕೆ ದೂರು ಬಂದಿರಬಹುದು. ಬುಧವಾರ ಪರಿಶೀಲಿಸುತ್ತೇನೆ. ಹೆಡ್‌ಕಾನ್‌ಸ್ಟೆಬಲ್‌ ರಾಜೀನಾಮೆ ಬಯಸಿದರೆ ಅವರಿಗೆ ಬಿಡುಗಡೆ ಆದೇಶ ಕೊಡುತ್ತೇನೆ. ಇನ್‌ಸ್ಪೆಕ್ಟರ್ ವಿರುದ್ಧ ತನಿಖೆಗೆ ಆದೇಶಿಸಿ, ತಪ್ಪು ಸಾಬೀತಾದರೆ ಶಿಸ್ತು ಕ್ರಮ ಜರುಗಿಸುತ್ತೇನೆ’ ಎಂದು ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್‌ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 29

  Happy
 • 3

  Amused
 • 2

  Sad
 • 4

  Frustrated
 • 2

  Angry

Comments:

0 comments

Write the first review for this !