ಬೆಂಗಳೂರು: ಲಿಂಗತ್ವ ಅಲ್ಪಸಂಖ್ಯಾತರು ಸಮಾಜದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಬಿಂಬಿಸುವ ಇಂಗ್ಲಿಷ್ ಗೀತೆಗಳುಳ್ಳ ‘ಹೆಣ್ತನ’ ಆಲ್ಬಂ ಅನ್ನು ಸೋಮವಾರ ಬಿಡುಗಡೆ ಮಾಡಲಾಯಿತು.
ನಗರದ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ‘ಒಂದೆಡೆ’ ಸಂಸ್ಥೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಹಿನ್ನೆಲೆ ಗಾಯಕಿ ಮೇರಿ ಉಷಾ ಕೋಕಿಲಾ ನಿರ್ದೇಶಿಸಿರುವ 'ಹೆಣ್ತನ' ಆಲ್ಬಂ ಅನ್ನು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಬಿಡುಗಡೆ ಮಾಡಿದರು.
ಲಿಂಗತ್ವ ಅಲ್ಪಸಂಖ್ಯಾತರ ಪರ ಹಕ್ಕುಗಳ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಅವರು ಆಲ್ಬಂಗೆ ಹಾಡಿದ್ದಾರೆ. ವಿವಿಧ ಪಾತ್ರಗಳಿಗೆ ಸಮುದಾಯದವರೇ ಬಣ್ಣ ಹಚ್ಚಿದ್ದಾರೆ. ಬೆಂಗಳೂರು ನಗರ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಚಿತ್ರೀಕರಣ ಮಾಡಲಾಗಿದೆ.
ಬಳಿಕ ಮಾತನಾಡಿದ ದಯಾನಂದ, ‘ಅಕ್ಕೈ ಪದ್ಮಶಾಲಿ ಮತ್ತು ಅವರ ತಂಡದ ಸದಸ್ಯರೊಂದಿಗೆ ಚರ್ಚಿಸಿದ ಬಳಿಕ ಸಮುದಾಯದ ಬಗ್ಗೆ ನಾನು ಹೊಂದಿದ್ದ ಅಭಿಪ್ರಾಯ ಮತ್ತು ಆಲೋಚನೆಗಳು ಬದಲಾಯಿತು. ಸಮುದಾಯದ ಮೇಲೆ ಪೊಲೀಸರ ದೌರ್ಜನ್ಯ ಮೊದಲಿನಿಂತಿಲ್ಲ. ಪ್ರತಿಯೊಬ್ಬರಿಗೂ ಬದುಕುವ ಹಕ್ಕನ್ನು ಸಂವಿಧಾನ ನೀಡಿದೆ. ಯಾರ ಮೇಲೂ ದೌರ್ಜನ್ಯ ಮಾಡುವಂತಿಲ್ಲ’ ಎಂದು ಹೇಳಿದರು.
ಸಮಾಜದಲ್ಲಿ ಬದಲಾವಣೆ ತರಲು ಸಮುದಾಯದವರು ಪೊಲೀಸ್ ಇಲಾಖೆ ಜೊತೆ ಕೈ ಜೋಡಿಸಬೇಕು. ಬದಲಾವಣೆಯನ್ನು ಸ್ವೀಕರಿಸಲು ಸಮಾಜಕ್ಕೂ ಸಾಕಷ್ಟು ಸಮಯ ಬೇಕಾಗಿದೆ. ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳು ಗಮನಕ್ಕೆ ಬಂದಿದ್ದು, ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಮಾತನಾಡಿ, ‘ಜಾತಿ, ಧರ್ಮದ ಕಾರಣಕ್ಕಾಗಿ ದೇಶದಲ್ಲಿ ಅಸ್ಪೃಶ್ಯರು ಯಾತನೆ ಅನುಭವಿಸಿದರು. ದೇವರು, ಧರ್ಮ, ಅಧ್ಯಾತ್ಮವನ್ನು ಮಾರಾಟದ ದಂಧೆಯಾಗಿ ಮಾಡಿಕೊಳ್ಳಲಾಗಿದೆ. ಯಾರೂ ತಾನು ಹೆಣ್ಣು ಮತ್ತು ಗಂಡಾಗಿ ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡಿರುವುದಿಲ್ಲ. ಸಮಾಜದಲ್ಲಿ ಎಲ್ಲ ಸಮುದಾಯದವರಿಗೂ ಬದುಕುವ ಹಕ್ಕಿದೆ’ ಎಂದು ಹೇಳಿದರು.
‘ಹೆಣ್ತನ’ ಆಲ್ಬಂ ನೋಡಿದಾಗ ಮನಸ್ಸಿಗೆ ನೋವು ಉಂಟಾಯಿತು. ಲಿಂಗತ್ವ ಅಲ್ಪಸಂಖ್ಯಾತರ ಮೇಲೆ ರೌಡಿಗಳು, ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ರಕ್ಷಣೆ ಮಾಡಬೇಕಾದವರೇ ಈ ರೀತಿ ಮಾಡಿದರೆ ಯಾರ ಬಳಿ ಹೋಗಬೇಕು?’ ಎಂದು ಬೇಸರ ವ್ಯಕ್ತಪಡಿಸಿದರು.
ಸುಗಮ ಸಂಗೀತ ಗಾಯಕಿ ಎಂ.ಡಿ.ಪಲ್ಲವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಸರಳಾ ಅವರು ಸಂವಿಧಾನದ ಪೀಠಿಕೆ ಓದಿದರು. ನಟ ಕಿಶೋರ್ ಕುಮಾರ್, ನಟಿ ಸಂಯುಕ್ತಾ ಹೊರನಾಡು, ಅಕ್ಕೈ ಪದ್ಮಶಾಲಿ ಮಾತನಾಡಿದರು. ಕನ್ನಡ ಉಪನ್ಯಾಸಕಿ ಅನಿತಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.