ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಪರೀಕ್ಷೆ, ಲಸಿಕೆಗೆ ಸರ್ಕಾರಿ ಶಾಲೆಯಲ್ಲಿ ಪರ್ಯಾಯ ವ್ಯವಸ್ಥೆ

ಹೇರೋಹಳ್ಳಿ ಪಿಎಚ್‌ಸಿ: ಅಂತರ ಕಾಪಾಡಲು ವ್ಯವಸ್ಥೆ ಇಲ್ಲ | ‘ಪ್ರಜಾವಾಣಿ’ ಸಚಿತ್ರ ವರದಿಗೆ ಸ್ಪಂದಿಸಿ ಸ್ಥಳ ಪರಿಶೀಲಿಸಿದ ಸಚಿವ ಸೋಮಶೇಖರ್
Last Updated 24 ಏಪ್ರಿಲ್ 2021, 12:21 IST
ಅಕ್ಷರ ಗಾತ್ರ

ರಾಜರಾಜೇಶ್ವರಿನಗರ: ಕರೋನಾ ಲಸಿಕೆ ಪಡೆಯಲು ಮತ್ತು ಪರೀಕ್ಷೆ ಮಾಡಿಸಿಕೊಳ್ಳಲು ಮಾಗಡಿ ರಸ್ತೆ ಬಳಿಯ ಹೇರೋಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ (ಪಿಎಚ್‌ಸಿ) ಶುಕ್ರವಾರ ಬಂದಿದ್ದ ನಾಗರಿಕರು ಅಂತರ ಕಾಯ್ದುಕೊಳ್ಳದೆ ಗುಂಪುಗೂಡಿರುವ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಸಚಿತ್ರ ವರದಿ ಪ್ರಕಟವಾಗಿದ್ದನ್ನು ಕಂಡು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಈ ಪಿಎಚ್‌ಸಿಗೆ ಶನಿವಾರ ಧಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೋವಿಡ್ ಲಸಿಕೆ ಪಡೆದುಕೊಳ್ಳಲು ಹಾಗೂ ಪರೀಕ್ಷೆ ಮಾಡಿಸಿಕೊಳ್ಳಲು ಬಂದಿದ್ದ ಸಾರ್ವಜನಿಕರು ಶನಿವಾರವೂ ರಸ್ತೆಯಲ್ಲಿ ಗುಂಪುಗೂಡಿ ನಿಂತಿದ್ದರು. ಇದನ್ನು ಗಮನಿಸಿದ ಸಚಿವರು, ತಕ್ಷಣವೇ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ದೂರವಾಣಿಯಲ್ಲಿ ಮಾತನಾಡಿ ಸಾರ್ವಜನಿಕರ ಹಿತದೃಷ್ಟಿಯಿಂದ ಆರೋಗ್ಯ ಕೇಂದ್ರ ಪಕ್ಕದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಕೋವಿಡ್ ಲಸಿಕೆ ನೀಡಲು ಹಾಗೂ ಪರೀಕ್ಷೆ ಮಾಡಲು ಸ್ಥಳಾವಕಾಶ ಮಾಡಿಕೊಡುವಂತೆ ಸೂಚಿಸಿದರು.

‘ಯಾವುದೇ ಕಾರಣಕ್ಕೂ ಕೋವಿಡ್ ಚಿಕಿತ್ಸೆ ವಿಳಂಬ ಆಗಬಾರದು. ಕೋವಿಡ್ ಸೋಂಕು ದೃಢಪಟ್ಟರೆ ಕೂಡಲೇ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಬಿಬಿಎಂಪಿ ವತಿಯಿಂದ ಚಿಕಿತ್ಸೆ ದೊರಕಿಸಿ ಕೊಡಲು ಎಲ್ಲಾ ರೀತಿಯ ಕ್ರಮಕೈಗೊಳ್ಳಬೇಕು. ಅಗತ್ಯ ಬಿದ್ದರೆ ಆಯಾ ಆಸ್ಪತ್ರೆ ಮಾಲೀಕರೊಂದಿಗೆ ಚರ್ಚಿಸಿ ಐಸಿಯು ಹಾಸಿಗೆಗಳನ್ನು ಹೊಂದಿಸಿಕೊಡಬೇಕು. ಕೊರೊನಾ ಸೋಂಕಿತರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು’ ಎಂದು ಸಚಿವರು ಆರ್‌.ಆರ್‌.ನಗರ ವಲಯದ ಜಂಟಿ ಆಯುಕ್ತ ಡಾ.ಎಸ್.ನಾಗರಾಜ್, ವೈದ್ಯಾಧಿಕಾರಿಗಳಾದ ಡಾ.ವಿವೇಕ್, ಡಾ.ಕವಿತಾ ಅವರಿಗೆ ಸೂಚನೆ ನೀಡಿದರು.

‘ನಾಗರಿಕರೂ ಕೂಡ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಿ, ಅಂತರ ಕಾಯ್ದು ಕೊಳ್ಳಬೇಕು’ ಎಂದು ಮನವಿ ಮಾಡಿದರು.

ತಿಪ್ಪೇನಹಳ್ಳಿ, ಉಲ್ಲಾಳು, ಕೆಂಗೇರಿ ಉಪನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸ್ವಯಂಸೇವಕರಾದ ನಾಗವೇಣಿ, ರವಿಶಂಕರ್, ಶಂಕರಪ್ಪ, ಪ್ರಸಾದ್, ರಾಜಣ್ಣ ಜೊತೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT