ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮೆ ವ್ಯಾಜ್ಯ: ಹೊಣೆ ನಿಗದಿ ಮಾಡಿದ ಹೈಕೋರ್ಟ್

Last Updated 17 ಅಕ್ಟೋಬರ್ 2020, 20:52 IST
ಅಕ್ಷರ ಗಾತ್ರ

ಬೆಂಗಳೂರು: ಅಪಘಾತದಲ್ಲಿ ಮೃತಪಟ್ಟ ಪಾದಚಾರಿ ಕುಟುಂಬಕ್ಕೆ ಪರಿಹಾರ ನೀಡಲು ಎರಡು ವಿಮಾ ಕಂಪನಿಗಳೂ ತಳ್ಳಿ ಹಾಕುತ್ತಿದ್ದ ವಿಶೇಷ ಪ್ರಕರಣವನ್ನು ಇತ್ಯರ್ಥಪಡಿಸಿರುವ ಹೈಕೋರ್ಟ್‌, ಸಮಗ್ರ ವಿಮೆ ಒದಗಿಸಿರುವ ಕಂಪನಿಗೆ ಹೊಣೆ ಹೊರಿಸಿದೆ.

2014ರ ಜನವರಿ 6ರಂದು ಕಾರು ಖರೀದಿಸಲು ಹೋಗಿದ್ದವರಿಗೆ ಅದರ ವೇಗ ಪರಿಶೀಲಿಸಲು (ಟೆಸ್ಟ್ ಡ್ರೈವ್) ಕಂಪನಿ ಸಿಬ್ಬಂದಿ ಕರೆದೊಯ್ದಿದ್ದರು. ಆಗ ಪಾದಚಾರಿಯೊಬ್ಬರಿಗೆ ಡಿಕ್ಕಿ ಹೊಡೆದು ಅವರು ಮೃತಪಟ್ಟಿದ್ದರು. ಭಾರತಿ ಆಕ್ಸ್ ಜನರಲ್ ಇನ್ಶುರೆನ್ಸ್ ಕಂಪನಿಯಲ್ಲಿ ಸಮಗ್ರ ವಿಮೆ ಹೊಂದಿದ್ದರೆ, ಟ್ರೇಡ್‌ ಪ್ಲೇಟ್‌ ಸರ್ಟಿಫಿಕೇಟ್‌ (ವಾಹನ ಮಾರಾಟ ಆಗುವ ಮುನ್ನ ನೀಡುವ ಪ್ರಮಾಣ ಪತ್ರ) ವಿಮೆಯನ್ನು ನ್ಯಾಷನಲ್ ಇನ್ಶುರೆನ್ಸ್ ಕಂಪನಿ ಹೊಂದಿತ್ತು.

ಕಾರು ಖರೀದಿಸಿದ ವ್ಯಕ್ತಿಯ ಹೆಸರಿಗೆ ಸಾರಿಗೆ ಇಲಾಖೆಯಲ್ಲಿ ನೋಂದಣಿಯಾದ ನಂತರವೇ ಸಮಗ್ರ ವಿಮೆ ಅನ್ವಯವಾಗುತ್ತದೆ ಎಂದು ಭಾರತಿ ಆಕ್ಸ್ ಕಂಪನಿ ವಾದಿಸಿತ್ತು. ಹಾಗಾಗಿ, ₹19.30 ಲಕ್ಷ ವಿಮೆ ಪರಿಹಾರ ನೀಡುವ ಜವಾಬ್ದಾರಿಯನ್ನು ನ್ಯಾಷನಲ್ ಇನ್ಶುರೆನ್ಸ್ ಕಂಪನಿಗೆ ಹೊಣೆ ಹೊರಸಿ ಮೋಟಾರು ಅಪಘಾತಗಳ ನ್ಯಾಯಮಂಡಳಿ ಆದೇಶಿಸಿತ್ತು.

ಈ ಸಂಬಂಧ ಸಲ್ಲಿಕೆಯಾಗಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ‘ನಿಯಮಗಳ ಪ್ರಕಾರ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದರೆ ಟ್ರೇಡ್‌ ಪ್ಲೇಟ್ ವಿಮಾ ಪರಿಹಾರಕ್ಕೆ ಅರ್ಹವಾಗುವುದಿಲ್ಲ. ಕಾರು ತಯಾರಿಕಾ ಕಂಪನಿ ಅಥವಾ ಮಾರಾಟ ಮಾಡುವ ಏಜೆನ್ಸಿ ಆವರಣದಲ್ಲಿ ಅಪಘಾತ ಸಂಭವಿಸಿದ್ದರೆ ಮಾತ್ರ ಈ ವಿಮೆ ಅನ್ವಯವಾಗುತ್ತದೆ ಎಂಬುದನ್ನು ಮನಗಂಡ ಪೀಠ, ‘ಅಪಘಾತ ಯಾವಗಲಾದರೂ ಸಂಭವಿಸಿರಲಿ ಸಮಗ್ರ ವಿಮಾ ಸೌಲಭ್ಯ ನೀಡಿರುವ ಕಂಪನಿಯೇ ಪರಿಹಾರ ಪಾವತಿಸಬೇಕು. ಬಡ್ಡಿ ಸೇರಿಸಿ ₹23.38 ಲಕ್ಷ ಪಾವತಿಸಬೇಕು’ ಎಂದು ಆದೇಶಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT