ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಯಾಳುಗಳಿಗೆ ಪರಿಹಾರ ನೀಡದೆ ಸಭೆ ನಡೆಸಿದ ಬಿಬಿಎಂಪಿ ನಡೆಗೆ ಹೈಕೋರ್ಟ್ ಅತೀವ ಬೇಸರ 

ಅಂತೂ ನ್ಯಾಯಾಂಗ ನಿಂದನೆ ತೂಗುಗತ್ತಿಯಿಂದ ಪಾರು
Last Updated 28 ನವೆಂಬರ್ 2019, 7:11 IST
ಅಕ್ಷರ ಗಾತ್ರ

ಬೆಂಗಳೂರು:ಸಾರ್ವಜನಿಕರ ಪ್ರಾಣ ರಕ್ಷಣೆಗಾಗಿ ಮುತುವರ್ಜಿ‌ ವಹಿಸಬೇಕಾದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ); ಹೈಕೋರ್ಟ್ ಆದೇಶ‌ ಪಾಲಿಸಬೇಕೋ ಬೇಡವೋ ಎಂಬ ಬಗ್ಗೆ ಮೇಯರ್, ಉಪಮೇಯರ್,‌ ಆಡಳಿತ ಪಕ್ಷದ‌ ನಾಯಕರು ಹಾಗೂ ಎಲ್ಲ ಸ್ಥಾಯಿ ಸಮಿತಿಯ ಮುಖ್ಯಸ್ಥರನ್ನು ಗುಡ್ಡೆ‌ ಹಾಕಿಕೊಂಡು ಕೌನ್ಸಿಲ್ ಸಭೆಯಲ್ಲಿ ಈ ವಿಷಯ ಚರ್ಚಿಸೋಣ ಎಂದು ಅವಿರೋಧ‌ ತೀರ್ಮಾನ ಕೈಗೊಳ್ಳುತ್ತದೆಯಲ್ಲಾ. ಎಂತಹ ದುರವಸ್ಥೆ ಇದು...!

‘ಬಿಬಿಎಂಪಿ ವ್ಯಾಪ್ತಿಯಲ್ಲಿನ ರಸ್ತೆ ಗುಂಡಿಗಳು ಮತ್ತು ಪಾದಚಾರಿ ಮಾರ್ಗಗಳಿಂದ ಉಂಟಾಗುವ ಅಪಘಾತಗಳಲ್ಲಿ ಗಾಯಗೊಂಡ ವ್ಯಕ್ತಿಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು 2019ರ ಜುಲೈ‌ 31ರ ಹೈಕೋರ್ಟ್ ಆದೇಶ‌ ಪಾಲನೆಗೆ ಬಿಬಿಎಂಪಿ ಕಣ್ಣಾಮುಚ್ಚಾಲೆ ಆಟವಾಡುತ್ತಿದೆ’ ಎಂದುಹೈಕೋರ್ಟ್ ಗುರುವಾರ ತೀವ್ರ ಬೇಸರ ವ್ಯಕ್ತಪಡಿಸಿ ಈ ಮಾತುಗಳನ್ನು ಹೇಳಿತು.‌

ನ್ಯಾಯಪೀಠದ ಆದೇಶ

‘ಸಾರ್ವಜನಿಕ ಹಿತರಕ್ಷಣೆಗಾಗಿ ಕೆಲಸ ಮಾಡಬೇಕಾದ ಪಾಲಿಕೆ, ಆದೇಶ ಪಾಲಿಸುತ್ತೇನೆ ಎಂದುಕೋರ್ಟ್‌ಗೆ ಪದೇಪದೇ ಹೇಳುತ್ತಲೇ ಬಂದಿದೆ. ಆದರೆ ಪಾಲಿಸಿಲ್ಲ. ನ್ಯಾಯಾಂಗ ನಿಂದನೆ ಎಚ್ಚರಿಕೆ ನೀಡಿದಾಕ್ಷಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದೇವೆ ಎಂದು ತಿಳಿಸಿದೆ.

‘ಈ ಪ್ರಕರಣದಲ್ಲಿ ಬಿಬಿಎಂಪಿಯ ನಡೆ ನ್ಯಾಯೋಚಿತವಾಗಿಲ್ಲ‌. ಕೋರ್ಟ್‌‌ನ ಮೃದು ಧೋರಣೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ನಾಗರಿಕರು ತಮ್ಮ ಹಕ್ಕುಗಳ ರಕ್ಷಣೆಗಾಗಿ ಕೋರ್ಟ್ ಮೆಟ್ಟಿಲೇರುವ ತನಕ ಅದು ನಿರ್ಲಿಪ್ತವಾಗಿರುತ್ತದೆ. ಇದನ್ನೆಲ್ಲಾ ನೋಡಿ ಹೈಕೋರ್ಟ್ ಕೈಕಟ್ಟಿ ಕೂರಲು ಆಗದೆ, ನವೆಂಬರ್ 27ರಂದು ಪಾಲಿಕೆಯ ಸಭೆಯಲ್ಲಿ ಕೈಗೊಳ್ಳಲಾದ ಅವಿರೋಧ ತೀರ್ಮಾನಕ್ಕೆ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸುವ ಪ್ರಕ್ರಿಯೆಗೆ ಮುಂದಾಗುತ್ತೇವೆ ಎಂದಾಕ್ಷಣ ಎಚ್ಚೆತ್ತುಕೊಂಡಿದೆ.

‘ಕೋರ್ಟ್ ಆದೇಶ‌ ಪಾಲಿಸಬೇಕೊ ಬೇಡವೊ ಎಂಬ ಬಗ್ಗೆ ಬಿಬಿಎಂಪಿ ಆಯುಕ್ತರು ಪ್ರಮಾಣ ಪತ್ರ ಸಲ್ಲಿಸುತ್ತಾರೆ. ಈ‌ ಪ್ರಮಾಣ ಪತ್ರ ಯಾವುದೇ ದಾರಿಹೋಕ ಸಲ್ಲಿಸಿಲ್ಲ. ಪ್ರತಿಷ್ಠಿತ ಐಎಎಸ್ ಅಧಿಕಾರಿ ದಾಖಲಿಸಿರುವಂಥದ್ದಾಗಿದೆ. ಮೊದಮೊದಲು ಕೋರ್ಟ್ ಆದೇಶವನ್ನು ಪಾಲಿಸುತ್ತೇವೆ ಎಂದು ಹೇಳುತ್ತಿದ್ದವರು ಈಗ ಚೌಕಾಶಿ ಆಟ ಆಡುತ್ತಿದ್ದಾರೆ. ಸಾರ್ವಜನಿಕ ಸಂಸ್ಥೆಯಾದ ಪಾಲಿಕೆ ಇಂತಹದ್ದೊಂದು ವಿಷಯದಲ್ಲಿ ಘನತೆಯಿಂದ ನಡೆದುಕೊಳ್ಳಬೇಕಿತ್ತು‌. ಕೋರ್ಟ್ ಆದೇಶ‌ ಪಾಲನೆ ಮಾಡಬೇಕಿತ್ತು.

‘ಬಿಬಿಎಂಪಿ ಕಾರ್ಯ ವೈಖರಿಯನ್ನು ಒರೆಗೆ ಹಚ್ಚುವ ಬದಲು ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಹರಿಸುವುದಕ್ಕೆ ಆದ್ಯತೆ ನೀಡುವುದು ಮುಖ್ಯ ಎಂದು ನ್ಯಾಯಪೀಠ ಭಾವಿಸುತ್ತದೆ. ಹಾಗಾಗಿ, ಈ ಹಿಂದಿನ ಕೋರ್ಟ್‌‌ ಆದೇಶ ಪಾಲಿಸಿರುವ ಬಗ್ಗೆ ಡಿಸೆಂಬರ್ 16ಕ್ಕೆ ಸಮಗ್ರ ವರದಿಯನ್ನು ಸಲ್ಲಿಸುವಂತೆ ಬಿಬಿಎಂಪಿಗೆ ನಿರ್ದೇಶಿಸಲಾಗುತ್ತಿದೆ’ಎಂದು ನ್ಯಾಯಪೀಠ ವಿಚಾರಣೆ ಮುಂದೂಡಿದೆ.

ಮೆಮೊ ಸಲ್ಲಿಕೆ

ಏತನ್ಮಧ್ಯೆ, ಬಿಬಿಎಂಪಿ ಪರ ವಕೀಲರು ವಿಚಾರಣೆ ಆರಂಭಕ್ಕೂ ಮೊದಲು 2019ರ ಜುಲೈ 31ರ ಆದೇಶಕ್ಕೆ ಸಂಬಂಧಿಸಿದಂತೆ ದೈನಂದಿನ ಪ್ರಮುಖ ಪತ್ರಿಕೆಗಳಲ್ಲಿ ಸಾರ್ವಜನಿಕ ಪ್ರಕಟಣೆ ನೀಡಲಾಗಿದೆ ಎಂದು ನ್ಯಾಯಪೀಠಕ್ಕೆ ಮೆಮೊ ಸಲ್ಲಿಸಿದರು.

ನಿನ್ನೆ ಗರಂ ಆಗಿದ್ದ ನ್ಯಾಯಪೀಠ

ಕೋರ್ಟ್ ಆದೇಶ ಪಾಲನೆ ಮಾಡಬೇಕೊ ಬೇಡವೊ ಎಂಬ ಬಗ್ಗೆ ಮೇಯರ್, ಉಪ ಮೇಯರ್, ಆಡಳಿತ ಪಕ್ಷದ ನಾಯಕ ಹಾಗೂ ಎಲ್ಲ ಸ್ಥಾಯಿ ಸಮಿತಿ ಮುಖ್ಯಸ್ಥರು ಅವಿರೋಧ ತೀರ್ಮಾನ ಕೈಗೊಂಡಿದ್ದೇವೆ ಎಂದು ಬಿಬಿಎಂಪಿ ಬುಧವಾರವಷ್ಟೇ (ನ.27) ಪ್ರಮಾಣಪತ್ರ ಸಲ್ಲಿಸಿತ್ತು. ಇದಕ್ಕೆ ನ್ಯಾಯಪೀಠ ಕೆಂಡಾಮಂಡಲವಾಗಿತ್ತು.

‘ಕೋರ್ಟ್ ಆದೇಶ ಪಾಲಿಸಿ ಎಂದು ಆದೇಶಿಸಿದರೆ ಮೀಟಿಂಗ್ ಮಾಡಿ ಆದೇಶ ಪಾಲನೆ ಮಾಡಬೇಕೊ ಬೇಡವೊ ಎಂದು ಉದ್ಧಟತನದ ವರ್ತನೆ ತೋರುತ್ತೀರಾ. ನಿಮಗೆ ತಕ್ಕ ಪಾಠ ಕಲಿಸಲೇಬೇಕು.ಸಭೆ ನಡೆಸಿದವರು ಯಾರು, ಅವರ ಹೆಸರುಗಳನ್ನು ಕೊಡಿ. ಅವರ ವಿರುದ್ಧ ನ್ಯಾಯಾಂಗ ನಿಂದನೆ‌ ಮೊಕದ್ದಮೆ ದಾಖಲು ಮಾಡೋಣ’ಎಂದು ಗುರುವಾರಕ್ಕೆ ವಿಚಾರಣೆ ಮುಂದೂಡಿತ್ತು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT