ವ್ಯಾಜ್ಯ ಬಿಟ್ಟು ಬಾಂಧವ್ಯ ವೃದ್ಧಿಸಿಕೊಳ್ಳಿ: ನ್ಯಾ.ಓಕಾ

ಮಂಗಳವಾರ, ಜೂಲೈ 16, 2019
25 °C
ರಾಷ್ಟ್ರೀಯ ಲೋಕ ಅದಾಲತ್‌: ನಗರ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ರಾಜಿ

ವ್ಯಾಜ್ಯ ಬಿಟ್ಟು ಬಾಂಧವ್ಯ ವೃದ್ಧಿಸಿಕೊಳ್ಳಿ: ನ್ಯಾ.ಓಕಾ

Published:
Updated:
Prajavani

ಬೆಂಗಳೂರು: ಕೋಟ್ಯಂತರ ಮೌಲ್ಯದ ಸ್ಥಿರಾಸ್ತಿಯ ಪಾಲು ದಾವೆಯೊಂದು ಶನಿವಾರ ಇಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಸಂಧಾನದ ಮೂಲಕ ಇತ್ಯರ್ಥವಾಯಿತು. ಅಂತೆಯೇ ಈ ಪ್ರಕರಣದ ಇತ್ಯರ್ಥಕ್ಕಾಗಿ ಶ್ರಮಿಸಿದ ಅದಾಲತ್‌ ಪ್ರಯತ್ನ, ಸ್ಥಳದಲ್ಲಿದ್ದ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್.ಓಕಾ ಅವರ ಮುಕ್ತಕಂಠದ ಶ್ಲಾಘನೆಗೂ ಪಾತ್ರವಾಯಿತು.

ನಗರದ ಪ್ರತಿಷ್ಠಿತ ಪ್ರದೇಶದಲ್ಲಿನ ಸ್ಥಿರಾಸ್ತಿಗೆ ಸಂಬಂಧಿಸಿದಂತೆ ಎಂಟು ಜನ ಅಣ್ಣ–ತಂಗಿಯರ ನಡುವೆ 21 ವರ್ಷಗಳಿಂದ ಪಾಲುದಾವೆ ವ್ಯಾಜ್ಯ ನಡೆಯುತ್ತಿತ್ತು. ಎಲ್ಲರಿಗಿಂತಲೂ ಹಿರಿಯರಾಗಿದ್ದ ಅವಿವಾಹಿತ ಅಕ್ಕ ಸಾವಿಗೀಡಾದ ಕಾರಣ ಆಕೆಗೆ ಸೇರಿದ್ದ ಚರ ಮತ್ತು ಸ್ಥಿರಾಸ್ತಿಯ ಪಾಲನ್ನು ಭಾಗ ಮಾಡಿಕೊಳ್ಳಲು ಸಿವಿಲ್‌ ದಾವೆ ಹೂಡಲಾಗಿತ್ತು. ಈ ಪ್ರಕರಣ ಶನಿವಾರ ಸೆಷನ್ಸ್‌ ನ್ಯಾಯಾಧೀಶರಾದ ಸಿದ್ದಪ್ಪ ಹೊಸಮನಿ ಹಾಗೂ ರಾಮಚಂದ್ರ ಡಿ.ಹುದ್ದಾರ ಅವರು ವಾದಿ–ಪ್ರತಿವಾದಿಗಳ ನಡುವೆ ಸಂಧಾನ ನಡೆಸಿ ಸುಖಾಂತ್ಯಗೊಳ್ಳುವಂತೆ ವಿಲೇವಾರಿ ಮಾಡಿದರು.

ಪ್ರಕರಣದ ವಿಲೇವಾರಿ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಓಕಾ ಅವರು ಕಕ್ಷಿದಾರರನ್ನು (ಒಬ್ಬ ಸಹೋದರಿ ವೀಲ್‌ ಚೇರ್‌ನಲ್ಲಿ ಬಂದಿದ್ದರು) ಉದ್ದೇಶಿಸಿ, ‘ವ್ಯಾಜ್ಯ ಸಾಧನೆಯ ಬದಲಿಗೆ ಸಂಧಾನಕ್ಕೆ ಮುಂದಾದ ನಿಮ್ಮ ನಡೆ ಪ್ರಶಂಸನೀಯ. ಇನ್ನು ಮುಂದೆ ನಿಮ್ಮ ನಡುವಿನ ಬಾಂಧವ್ಯವನ್ನು ವೃದ್ಧಿಸಿಕೊಳ್ಳಿ, ಹಬ್ಬ–ಹರಿದಿನಗಳನ್ನು ಒಟ್ಟಿಗೇ ಆಚರಿಸಿ’ ಎಂದು ಕಿವಿಮಾತು ಹೇಳಿದರು.

ಅದಾಲತ್‌ ನಡೆಯುತ್ತಿದ್ದ 130 ಕೋರ್ಟ್‌ ಹಾಲ್‌ಗಳಿಗೆ ಮಧ್ಯಾಹ್ನ 12 ಗಂಟೆ ವೇಳೆಗೆ ಭೇಟಿ ನೀಡಿದ ಓಕಾ ಅವರು ಪ್ರಾಧಿಕಾರದ ಪ್ರಯತ್ನಕ್ಕೆ ತೃಪ್ತಿ ವ್ಯಕ್ತಪಡಿಸಿದರು.

79 ಸಾವಿರ ಪ್ರಕರಣ ರಾಜಿ: ಮೊತ್ತ 381 ಕೋಟಿ
‘ರಾಜ್ಯದಾದ್ಯಂತ 79,354 ಪ್ರಕರಣಗಳನ್ನು ರಾಜಿ ಮಾಡಲಾಗಿದ್ದು ಇವುಗಳ ಮೊತ್ತ ₹ 381 ಕೋಟಿ’ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂಜೀವಕುಮಾರ್‌ ಹಂಚಾಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಕರಣಗಳಲ್ಲಿ 68,431 ರಾಜಿ ಆಗಿದ್ದು, ವ್ಯಾಜ್ಯಪೂರ್ವ ಪ್ರಕರಣಗಳಲ್ಲಿ 9,200 ಹಾಗೂ ಹೈಕೋರ್ಟ್‌ನಲ್ಲಿ ಬಾಕಿ ಇದ್ದ 1,723 ಪ್ರಕರಣಗಳನ್ನು ರಾಜಿ ಮಾಡಲಾಗಿದೆ’ ಎಂದು ವಿವರಿಸಲಾಗಿದೆ.

’ಬೆಂಗಳೂರು ವ್ಯಾಪ್ತಿಯಲ್ಲಿ ಅತಿ ಹೆಚ್ಚು ಪ್ರಕರಣ ಸಂಧಾನಗೊಂಡಿವೆ’ ಎಂದು ಜಿಲ್ಲಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಸೋಮಶೇಖರ ತಿಳಿಸಿದ್ದಾರೆ. ರಾಜ್ಯದಾದ್ಯಂತ ಎಲ್ಲ ಜಿಲ್ಲೆಗಳ ಹಾಗೂ ತಾಲ್ಲೂಕು ನ್ಯಾಯಾಲಯಗಳಲ್ಲಿ ಸಿವಿಲ್‌ ಹಾಗೂ ಕ್ರಿಮಿನಲ್‌ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ.

4 ಸಾವಿರ ಜನರಿಗೆ ಊಟ, ಟ್ರಾಫಿಕ್‌ ಜಾಮ್
ಅದಾಲತ್‌ಗೆ ಕಕ್ಷಿದಾರರು ನಿರೀಕ್ಷೆಗೂ ಮೀರಿ ಸ್ಪಂದಿಸಿದರು. ಸಿಟಿ ಸಿವಿಲ್‌ ಕೋರ್ಟ್‌ ಸುತ್ತಮುತ್ತ ವಾಹನ ಸಂಚಾರಕ್ಕೆ ಸಾಕಷ್ಟು ವ್ಯತ್ಯಯ ಉಂಟಾಯಿತು.

ಮಧ್ಯಾಹ್ನದ ಊಟಕ್ಕೆ ಹೋಳಿಗೆ, ಶ್ಯಾವಿಗೆ ಪಾಯಸ, ವೆಜ್‌ ಬಿರಿಯಾನಿ ಅನ್ನ ಸಾಂಬಾರು ನೀಡಲಾಯಿತು. ನಾಲ್ಕು ಸಾವಿರಕ್ಕೂ ಹೆಚ್ಚು ಜನರು ಊಟ ಸವಿದರು. 130 ಜನ ನ್ಯಾಯಾಧೀಶರು ಬೆಳಗ್ಗೆಯಿಂದ ಸಂಜೆಯವರೆಗೆ ಪ್ರಕರಣಗಳ ರಾಜಿ ಸಂಧಾನಕಾರರಾಗಿ ಕಾರ್ಯ ನಿರ್ವಹಿಸಿದರು. ಸೆಷನ್ಸ್ ಕೋರ್ಟ್‌ ಪ್ರಧಾನ ನ್ಯಾಯಾಧೀಶ ಶಿವಶಂಕರ ಬಿ.ಅಮರಣ್ಣವರ, ಬೆಂಗಳೂರು ನಗರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಸೋಮಶೇಖರ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಯಶಸ್ಸಿಗೆ ಶ್ರಮಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !