ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳು ದಾರಿ ತಪ್ಪಲು ಕೌಟುಂಬಿಕ ಕಲಹ ಕಾರಣ: ನ್ಯಾಯಮೂರ್ತಿ ವಾಗ್ದಾಳಿ

‘ವಿದ್ಯಾವಂತರ ನೀಚ ಕೆಲಸ’
Last Updated 4 ನವೆಂಬರ್ 2019, 19:14 IST
ಅಕ್ಷರ ಗಾತ್ರ

ಬೆಂಗಳೂರು: ‘ತಂದೆಯನ್ನು ದ್ವೇಷಿಸುವಂತೆ ಮಕ್ಕಳಿಗೆ ಹೇಳಿಕೊಡುವ ತಾಯಿ; ತಾಯಿಯನ್ನು ದ್ವೇಷಿಸುವಂತೆ ಹೇಳಿಕೊಡು‌ವ ತಂದೆಯರು ಯಾವ ಪುರುಷಾರ್ಥಕ್ಕೆ ಪೋಷಕರಾಗಬೇಕು’ ಎಂದು ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ.

ವಿಚ್ಛೇದನಕ್ಕೆ ಸಂಬಂಧಿಸಿದ ಅರ್ಜಿಯೊಂದನ್ನು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ. ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ, ವ್ಯಾಜ್ಯಕರ್ತರ ನಡೆಯನ್ನು ಮೌಖಿಕವಾಗಿ ತರಾಟೆಗೆ ತೆಗೆದುಕೊಂಡಿತು.

‘ಮಕ್ಕಳು ದಾರಿ ತಪ್ಪಲು, ಅಪರಾಧ ಎಸಗಲು ಇಂತಹ ಪೋಷಕರೇ ಪ್ರಮುಖ ಕಾರಣ. ಇಂತ‌ಹವರಿಂದ ಸಮಾಜ ಘಾತುಕ ಮಕ್ಕಳು ಅರ್ಪಣೆಯಾಗುತ್ತಿವೆ. ತಮ್ಮೊಳಗಿನ ಸೇಡು ತೀರಿಸಿಕೊಳ್ಳಲು ಇವರು ಮಕ್ಕಳನ್ನು ಬಳಸಿಕೊಳ್ಳುತ್ತಿದ್ದಾರೆ’ ಎಂದು ನ್ಯಾಯಮೂರ್ತಿ ಬಿ.ವೀರಪ್ಪ ವಾಗ್ದಾಳಿ ನಡೆಸಿದರು.

ನೀಚ ಕೆಲಸ: ‘ಅತಿ ಹೆಚ್ಚು ವಿದ್ಯಾವಂತರೇ ಇಂತಹ ನೀಚ ಕೆಲಸಗಳಲ್ಲಿ ತೊಡಗಿದ್ದಾರೆ. ಕೌಟುಂಬಿಕ ನ್ಯಾಯಾಲಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಕಿಡಿ ಕಾರಿದರು.

‘ವಕೀಲರ ಸಂಘ ಹಾಗೂ ಸ್ವಯಂ ಸೇವಾ ಸಂಸ್ಥೆಗಳು (ಎನ್‌ಜಿಒ) ಇಂತಹ ಸಂಗತಿಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು’ ಎಂದ ಸೂಚಿಸಿದ ನ್ಯಾಯಪೀಠ, ಮುಂದಿನ ವಿಚಾರಣೆಗೆ ಪೋಷಕರು ಖುದ್ದು ಹಾಜರಿರುವಂತೆ ನಿರ್ದೇಶಿಸಿದೆ.

ಪ್ರಕರಣವೇನು?: ಪತಿ ಅಮೆರಿಕದಲ್ಲಿ ವೈದ್ಯರಾಗಿದ್ದಾರೆ. ಪತ್ನಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿ. ಇಬ್ಬರ ನಡುವಿನ ವಿಚ್ಛೇದನ ಪ್ರಕರಣ ಕೌಟುಂಬಿಕ ನ್ಯಾಯಾಲಯದಲ್ಲಿದೆ.

‘ನಾನು ಬೆಂಗಳೂರಿಗೆ ಬಂದಾಗ ಮಗುವಿನ ಜೊತೆ 2 ಗಂಟೆ ಮಾತ್ರ ಇರಲು ಅವಕಾಶ ನೀಡಲಾಗಿದೆ. ಮಕ್ಕಳು ಪೋಷಕರೊಡನೆ 50:50ರ ಅನುಪಾದಂತೆ ಸಮಯ ಕಳೆಯಲು ಅವಕಾಶವಿದೆ. ಆದರೆ, ಪತ್ನಿ ನನಗೆ ಈ ಅವಕಾಶ ನೀಡುತ್ತಿಲ್ಲ. ಆದ್ದರಿಂದ ಈ ನಿಟ್ಟಿನಲ್ಲಿ ಪತ್ನಿಗೆ ಸೂಕ್ತ ನಿರ್ದೇಶನ ನೀಡಬೇಕು’ ಎಂದು ಕೋರಿ ಪತಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಸ್ವಾರ್ಥಕ್ಕೆ ಮಕ್ಕಳನ್ನು ಬಳಸಿಕೊಳ್ಳುವವರು ಹೇಡಿಗಳು
‘ಸ್ವಾರ್ಥಕ್ಕೆ ಮಕ್ಕಳನ್ನು ಅಸ್ತ್ರವಾಗಿ ಬಳಸಿಕೊಳ್ಳುವವರು ಹೇಡಿಗಳು. ಇವರೆಲ್ಲಾ ತಾಲಿಬಾನೀಯರಿಗಿಂತಲೂ ವಿಕೃತವಾಗಿ ಮಕ್ಕಳನ್ನು ಬೆಳೆಸುತ್ತಿದ್ದಾರೆ’ ಎಂದುನ್ಯಾಯಮೂರ್ತಿಗಳು ಆತಂಕ ವ್ಯಕ್ತಪಡಿಸಿದರು.

‘ಪೋಷಕರ ವೈಷಮ್ಯ, ಕಲಹ, ಮನಸ್ತಾಪಗಳನ್ನೇ ನೋಡಿಕೊಂಡು ಬೆಳೆಯುವ ಮಕ್ಕಳೇ ಭವಿಷ್ಯದಲ್ಲಿ ಸಮಾಜಘಾತುಕರಾಗುತ್ತಾರೆ. ದಯಮಾಡಿ ಇಂತಹ ಮಕ್ಕಳನ್ನು ಸಮಾಜಕ್ಕೆ ನೀಡಬೇಡಿ’ ಎಂದರು.

**

ಇವತ್ತು ಸಾಮಾಜಿಕ ಹೊಣೆಗಾರಿಕೆ ಇಲ್ಲದ‌ ವಕೀಲರು, ವೈದ್ಯರು ಹಾಗೂ ಪೋಷಕರೇ ಎಲ್ಲ ಕ್ಷೇತ್ರಗಳಲ್ಲಿ ತುಂಬಿ ತುಳುಕಾಡುತ್ತಿದ್ದಾರೆ. ಇವರಿಂದ ದೇಶದ ಭವಿಷ್ಯ ಹಾಳಾಗುತ್ತಿದೆ.
-ಬಿ.ವೀರಪ್ಪ, ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT