ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಮಾವು– ಹಲಸು ಮೇಳಕ್ಕೆ ಚಾಲನೆ

ಶೇ 10ರಷ್ಟು ರಿಯಾಯಿತಿಯಲ್ಲಿ ಹಣ್ಣುಗಳ ಮಾರಾಟ * ವಿವಿಧ ತಳಿಗಳ ಮಾವು ಲಭ್ಯ
Published 27 ಮೇ 2023, 0:55 IST
Last Updated 27 ಮೇ 2023, 0:55 IST
ಅಕ್ಷರ ಗಾತ್ರ

ಬೆಂಗಳೂರು: ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘ (ಹಾಪ್‍ಕಾಮ್ಸ್) ಹಮ್ಮಿಕೊಂಡಿರುವ ಮಾವು– ಹಲಸು ಮೇಳಕ್ಕೆ ಶುಕ್ರವಾರ ಚಾಲನೆ ದೊರೆತಿದ್ದು, ಹಾಪ್‍ಕಾಮ್ಸ್ ನಗರದ ಎಲ್ಲಾ ಮಾರಾಟ ಮಳಿಗೆಗಳಲ್ಲಿ ಪ್ರತಿ ಕೆ.ಜಿ.ಗೆ ಶೇ 10ರಷ್ಟು ರಿಯಾಯಿತಿ ನೀಡಲಾಗಿದೆ. 

ನಗರದ ಲಾಲ್‌ಬಾಗ್‌ ಮುಖ್ಯರಸ್ತೆಯಲ್ಲಿರುವ ಹಾಪ್‌ಕಾಮ್ಸ್‌ ಕೇಂದ್ರ ಮಳಿಗೆಯಲ್ಲಿ ಮೇಳಕ್ಕೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು. ಮೇಳ ಜೂನ್ 5ರವರೆಗೆ ನಡೆಯಲಿದೆ. 

ಬಾದಾಮಿ, ಮಲ್ಲಿಕಾ, ರಸಪುರಿ, ಮಲಗೋವಾ ಸೇರಿ 15ಕ್ಕೂ ಅಧಿಕ ತಳಿಯ ಮಾವಿನ ಹಣ್ಣುಗಳನ್ನು ಮೇಳದಲ್ಲಿ ಇರಿಸಲಾಗಿದೆ. ವಿವಿಧ ಸ್ಥಳೀಯ ತಳಿಯ ಹಲಸು ಸಹ ಇದೆ. ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಮಾವಿನ ಹಣ್ಣು 3 ಮತ್ತು 5 ಕೆ.ಜಿ ಗಳ ಪ್ಯಾಕಿಂಗ್‌ನಲ್ಲಿ ಮಾರಾಟ ವ್ಯವಸ್ಥೆ ಮಾಡಲಾಗಿದೆ. ಮೇಳಕ್ಕೆ ಬಂದವರಲ್ಲಿ ಹೆಚ್ಚಿನವರು 5 ಕೆ.ಜಿ ಗಳ ಬಾಕ್ಸ್‌ಗಳನ್ನು ಕೊಂಡೊಯ್ದರು. ಬಾದಾಮಿ, ಆಲ್ಪೋನ್ಸೊ ತಳಿಯ ಹಣ್ಣು ಖರೀದಿಗೆ ಗ್ರಾಹಕರು ಆಸಕ್ತಿ ತೋರಿದರು. 

ಹೆಚ್ಚಿನ ಮಾರಾಟ ಗುರಿ: ಹಾಪ್‌ಕಾಮ್ಸ್‌ ಅಧ್ಯಕ್ಷ ದೇವರಾಜ್, ‘ಈ ಬಾರಿಯ ಮೇಳದಲ್ಲಿ ಸುಮಾರು 1 ಸಾವಿರ ಟನ್ ಮಾವಿನ ಹಣ್ಣನ್ನು ಮಾರಾಟ ಮಾಡುವ ಗುರಿ ಹೊಂದಲಾಗಿದೆ. ಹಾಪ್‌ಕಾಮ್ಸ್‌ ವ್ಯಾಪ್ತಿಯಲ್ಲಿ ಸುಮಾರು 9 ಸಾವಿರ ರೈತರಿದ್ದಾರೆ. ರಾಮನಗರ, ಚನ್ನಪಟ್ಟಣ, ಕೋಲಾರ ಸೇರಿ ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳ ರೈತರು ಬೆಳೆದ ಹಣ್ಣು ಮತ್ತು ತರಕಾರಿಗಳ ಮಾರಾಟ ಮಾಡಲಾಗುತ್ತಿದೆ’ ಎಂದರು. 

ಹಾಪ್‍ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಮಿರ್ಜಿ ಉಮೇಶ ಶಂಕರ, ‘ಮಾವು ಮತ್ತು ಹಲಸು ಬೆಳೆಗಾರರಿಗೆ ಉತ್ತಮ ಮಾರುಕಟ್ಟೆ ಸೌಲಭ್ಯಗಳನ್ನು ಕಲ್ಪಿಸುವ ಜತೆಗೆ ಗ್ರಾಹಕರಿಗೆ ವಿವಿಧ ತಳಿಗಳ ರುಚಿಕರ ಹಣ್ಣುಗಳನ್ನು ರಿಯಾಯಿತಿ ದರದಲ್ಲಿ ಲಭ್ಯವಾಗುವಂತೆ ಮಾಡುವುದೇ ಈ ಮೇಳದ ಉದ್ದೇಶ. ರೈತರ ತೋಟದಿಂದ ಮಾವು ಮತ್ತು ಹಲಸಿನ ಹಣ್ಣುಗಳನ್ನು ಖರೀದಿಸಲಾಗುತ್ತದೆ. ಕಾರ್ಬೈಡ್‌ ರಹಿತವಾದ ರುಚಿಕರ ಹಾಗೂ ಆರೋಗ್ಯಕರ ಮಾವಿನ ಹಣ್ಣುಗಳು ನಮ್ಮ ಮಳಿಗೆಗಳಲ್ಲಿ ದೊರೆಯುತ್ತವೆ. ಆಯ್ದ 20 ಮಳಿಗೆಗಳಲ್ಲಿ ಆನ್‌ಲೈನ್‌ ಮೂಲಕ ಮಾರಾಟ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ’ ಎಂದು ತಿಳಿಸಿದರು. 

‘ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ದರ ಶೇ 5ರಷ್ಟು ಹೆಚ್ಚಿದೆ. ಮಳೆ ಮಾವಿಗೆ ಹಾನಿ ಮಾಡಿದ್ದು, ಫಸಲು ಕಡಿಮೆಯಿದೆ. ಆಲ್ಪೋನ್ಸೊ ಹಾಗೂ ಮಲ್ಲಿಕಾ ಖರೀದಿಗೆ ಗ್ರಾಹಕರು ಆಸಕ್ತಿ ತೋರುತ್ತಿದ್ದಾರೆ’ ಎಂದು ಹಾಪ್‌ಕಾಮ್ಸ್‌ ಸಿಬ್ಬಂದಿ ಶಿವಣ್ಣ ತಿಳಿಸಿದರು. 

‘ಉತ್ತಮ ಗುಣಮಟ್ಟದ ಹಾಗೂ ವಿವಿಧ ತಳಿಗಳ ಮಾವಿನ ಹಣ್ಣುಗಳು ಮೇಳದಲ್ಲಿ ಸಿಗುತ್ತಿವೆ. ರಾಸಾಯನಿಕ ಬಳಸದೆ ನೈಸರ್ಗಿಕವಾಗಿ ಮಾಗಿದ ಹಣ್ಣನ್ನು ಮಾರಾಟ ಮಾಡಲಾಗುತ್ತದೆ. ಇದರಿಂದ ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ಖರೀದಿಸುತ್ತೇವೆ’ ಎಂದು ಮೇಳಕ್ಕೆ ಬಂದಿದ್ದ ಗ್ರಾಹಕರು ಸಂತಸ ವ್ಯಕ್ತಪಡಿಸಿದರು. 

‘ಹಾಪ್‌ಕಾಮ್ಸ್‌ಗೆ ಹೆಚ್ಚಿನ ಅನುದಾನ’

‘ಹಾಪ್‌ಕಾಮ್ಸ್‌ನಂತಹ ಸಂಸ್ಥೆಗಳಿಗೆ ಸರ್ಕಾರ ಹೆಚ್ಚಿನ ಅನುದಾನ ನೀಡಬೇಕು. ಈ ಹಿಂದೆ ಸಚಿವನಾಗಿದ್ದಾಗ ಹಾಪ್‌ಕಾಮ್ಸ್‌ಗೆ ಹೆಚ್ಚಿನ ಅನುದಾನ ಕೊಡಿಸುವಲ್ಲಿ ಸಫಲನಾಗಿದ್ದೆ. ಮುಂದಿನ ದಿನಗಳಲ್ಲಿ ಕೂಡ ಈ ಕೆಲಸ ಮಾಡುತ್ತೇನೆ. ಹಿಂದಿನ ಸರ್ಕಾರ ₹ 12 ಕೋಟಿ ಬಡ್ಡಿರಹಿತ ಸಾಲ ನೀಡಲು ಮುಂದಾಗಿತ್ತು. ಅದನ್ನು ಈಗಿನ ಸರ್ಕಾರದಿಂದ ಕೊಡಿಸುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತೇನೆ’ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.  ಶಾಸಕ ಉದಯ ಗರುಡಾಚಾರ್ ‘ಹಾಪ್‌ಕಾಮ್ಸ್ ರೈತರು ಬೆಳೆದ ಬೆಳಗಳನ್ನು ನೇರವಾಗಿ ಖರೀದಿಸಿ ಮಾರಾಟ ಮಾಡುತ್ತಿದೆ. ಈಗಾಗಲೇ ಹಾಪ್‌ಕಾಮ್ಸ್‌ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಕೊಡಿಸಿದ್ದೇನೆ. ಮುಂದಿನ ದಿನಗಳಲ್ಲಿ ಕೂಡ ಹಾಪ್‌ಕಾಮ್ಸ್‌ ಅಭಿವೃದ್ಧಿಗೆ ಅಗತ್ಯ ಸಹಾಯ ಮಾಡಲಾಗುವುದು’ ಎಂದು ಭರವಸೆ ನೀಡಿದರು.

Cut-off box - ಹಾಪ್‌ಕಾಮ್ಸ್‌ ಮೇಳದ ದರ (ಮೇ 26) ಮಾವು ತಳಿಗಳು;ಕೆ.ಜಿ.ಗೆ ದರ (₹ ಗಳಲ್ಲಿ) ತೋತಾಪುರಿ;31 ನಾಟಿ ಮಾವು;36 ಬಾದಾಮಿ;132 ಆಲ್ಪೋನ್ಸೊ;139 ರಸಪುರಿ;112 ಸೆಂದೂರ;52 ಬ್ಯೆಗಂಪಲ್ಲಿ;52 ಮಲಗೋವಾ;144 ಮಲ್ಲಿಕಾ;108 ದಶರಿ;126 ಕೇಸರ್;104 ಅಮರಪಲ್ಲಿ;126 ಸಕ್ಕರಗುತ್ತಿ;122 ಕಾಲಪಾಡು;139 ಇಮಾಮ್ ಪಸಂದ್;149

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT