ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಳಿಮಾವು ಪ್ರವಾಹ: ಕಹಿ ಭಾನುವಾರ

ಮನೆಯೊಳಗೆ ನುಗ್ಗಿದ ನೀರು
Last Updated 25 ನವೆಂಬರ್ 2019, 1:31 IST
ಅಕ್ಷರ ಗಾತ್ರ

ಬೆಂಗಳೂರು: ರಸ್ತೆಯೆಲ್ಲ ಜಲಾವೃತವಾಗಿ ದಾರಿ ಕಾಣದೆ ಕಂಗಾಲಾದ ಜನ. ಮನೆಯಲ್ಲಿ ನೀರು ತುಂಬಿಕೊಂಡ ನೀರು ಇಳಿದು ಹೋಗುವುದನ್ನೇ ನಿರೀಕ್ಷಿಸುತ್ತಾ ಹೊರಗಡೆ ನಿಂತಿದ್ದ ನಿವಾಸಿಗಳು... ಮನೆಯೊಳಗೆ ನುಗ್ಗಿದ್ದ ದುರ್ನಾತ ತುಂಬಿದ ನೀರನ್ನು ಮೂಗು ಮುಚ್ಚಿಕೊಂಡೇ ಹೊರ ಹಾಕುತ್ತಿದ್ದ ಮನೆ ಮಂದಿ...

ಹುಳಿಮಾವು ಕೆರೆಯ ದಂಡೆ ಒಡೆದಿದ್ದರಿಂದ ಸೃಷ್ಟಿಯಾದ ಪ್ರವಾಹವು, ಕೆರೆಯ ಸುತ್ತಲಿನ ನಿವಾಸಿಗಳ ಪಾಲಿಗೆ ಭಾನುವಾರವನ್ನು ಕಹಿ ದಿನವನ್ನಾಗಿಸಿತು. ರಜೆಯ ಖುಷಿಯೆಲ್ಲವೂ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಯಿತು.

ಈ ನೆರೆ ಹುಳಿಮಾವು, ಸಾಯಿಬಾಬಾ ದೇವಸ್ಥಾನದ ರಸ್ತೆ, ಬೇಗೂರು ರಸ್ತೆ, ವಿಶ್ವೇಶ್ವರಯ್ಯ ರಸ್ತೆ ಅಕ್ಕ ಪಕ್ಕದ ಮನೆಗಳ ಚಿತ್ರಣವನ್ನೇ ಬದಲಾಯಿಸಿತ್ತು. ಮನೆಯ ಮಹಡಿ ಏರಿದ್ದವರು, ನೀರಿಳಿಯುವ ಗಳಿಗೆಗಾಗಿ ಗಂಟೆಗಟ್ಟಲೆ ಕಾಯಬೇಕಾಯಿತು. ಪ್ರವಾಹಪೀಡಿತ ಪ್ರದೇಶಗಳಲ್ಲಿ ಕಂಡು ಬಂದ ಒಂದೊಂದು ದೃಶ್ಯವೂ ಅಲ್ಲಿನ ನಿವಾಸಿಗಳ ಅಸಹಾಯಕತೆಯ ಕತೆಯನ್ನು ಹೇಳುತ್ತಿತ್ತು.

‘ಮಕ್ಕಳಿಗೆ ರಜೆ ಇದ್ದ ಕಾರಣ ಕುಟುಂಬದೊಂದಿಗೆ ತಿರುಗಾಡಲು ಹೊರಗಡೆ ಹೋಗಿದ್ದೆ. ಮಧ್ಯಾಹ್ನ 1 ಗಂಟೆ ವೇಳೆಗೆ ಕೆರೆ ದಂಡೆ ಒಡೆದ ವಿಚಾರ ತಿಳಿಯಿತು. ಕೂಡಲೇ ಮನೆಯತ್ತ ಹೊರಟು ಬಂದೆ. ಆದರೆ, ಇದು ನಿಜಕ್ಕೂ ನನ್ನ ಮನೆಯೇ ಎಂಬ ಅನುಮಾನ ಮೂಡುವಂತಹ ಪರಿಸ್ಥಿತಿ ಅಲ್ಲಿ ನಿರ್ಮಾಣವಾಗಿತ್ತು’ ಎಂದು ಸಾಯಿಬಾಬಾ ದೇವಸ್ಥಾನ ರಸ್ತೆಯ ನಿವಾಸಿ ಮುನೇಶ್ ಬೇಸರ ವ್ಯಕ್ತ
ಪಡಿಸಿದರು.

ಕೊಚ್ಚಿ ಹೋಯಿತು ಕಾರು: ಬೆಳಿಗ್ಗೆ ರಸ್ತೆ ಬದಿ ನಿಲ್ಲಿಸಿದ್ದ ಕಾರು, ಸಂಜೆ ವೇಳೆಗೆ ನೀರಿನಲ್ಲಿ ಕೊಚ್ಚಿಹೋಗಿ ಅರ್ಧ ಕಿ.ಮೀ ಸಾಗಿ ವಿಭಜಕದ ಮೇಲೆ ನಿಂತಿತ್ತು. ಟೋಯಿಂಗ್‌ ವಾಹನವನ್ನು ತರಿಸಿಕೊಂಡು ಆ ಕಾರನ್ನು ಮತ್ತೆ ಮನೆಯಂಗಳಕ್ಕೆ ಎಳೆದು ತರುವಲ್ಲಿ ಮಾಲೀಕರು ಹೈರಾಣಾಗಿದ್ದರು.

ನವದಂಪತಿಯ ಬವಣೆ: ರಸ್ತೆ ಬದಿ ನಿಲ್ಲಿಸಿದ ವಾಹನಗಳೆಲ್ಲಾ ಅಡ್ಡಾದಿಡ್ಡಿ ಬಿದ್ದಿದ್ದವು. ಕೋಲ್ಕತ್ತದಿಂದ ಬೆಂಗಳೂರಿಗೆ ಬಂದಿದ್ದ ನವದಂಪತಿ, ಅಪಾರ್ಟ್‌ಮೆಂಟ್‌ ಸಮುಚ್ಛಯದಲ್ಲಿದ್ದ ಮನೆಯನ್ನು ತಲುಪುವುದಕ್ಕೂ ಹರಸಾಹಸ ಪಟ್ಟರು. ಸರಕುತುಂಬಿದ್ದ ಮಣಭಾರದ ಟ್ರಾಲಿಯನ್ನು ಜಲಾವೃತ ರಸ್ತೆಯಲ್ಲೇ ಎಳೆದೊಯ್ಯುವ ದೃಶ್ಯ ಮನಕಲಕುವಂತಿತ್ತು. ಅವರ ಸಹಾಯಕ್ಕೆ ಯಾರೂ ಬರಲಿಲ್ಲ.

ಬೇಗೂರು ರಸ್ತೆಯಲ್ಲಿದ್ದ ಗ್ಯಾರೇಜ್‌ ಸಂಜೆಯವರೆಗೂ ನೀರಿನಿಂದ ಆವರಿಸಿಕೊಂಡಿತ್ತು. ಈ ಬಗ್ಗೆ ಸ್ಥಳೀಯರನ್ನು ವಿಚಾರಿಸಿದಾಗ ‘ಭೀಕರ ಮಳೆ ಸುರಿದಾಗ ಪ್ರವಾಹ ಬರುವುದನ್ನು ನೋಡಿದ್ದೇವೆ. ಆದರೆ, ಬೆಂಗಳೂರಿನಲ್ಲಿ ಉಕ್ಕಿ ಹರಿಯಲು ಸಮುದ್ರವೂ ಇಲ್ಲ. ಮಳೆಯೇ ಬಾರದೆ ಪ್ರವಾಹ ಬಂದಿದೆಯಲ್ಲ ಸಾರ್‌...’ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.

ಸಾಯಿಬಾಬಾ ರಸ್ತೆಯಲ್ಲಿದ್ದ ‘ರಿಲಯನ್ಸ್‌ ಫ್ರೆಶ್’ ವಸತಿ ಸಂಕೀರ್ಣದ ನೆಲಮಹಡಿ ಪೂರ್ಣ ಜಲಾವೃತವಾಗಿತ್ತು. ಉಳಿದ ಸಂಕೀರ್ಣಗಳ ನೆಲಮಹಡಿಗಳಲ್ಲಿದ್ದ ವಿದ್ಯುತ್‌ ಪೂರೈಕೆ ನಿಯಂತ್ರಿಸುವ ಘಟಕಗಳನ್ನು ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಗಿತಗೊಳಿಸಲಾಗಿತ್ತು.

ಸಂತ್ರಸ್ತರಿಗೆ ವಸತಿ, ಊಟದ ವ್ಯವಸ್ಥೆ

‘800ಕ್ಕೂ ಹೆಚ್ಚು ಮನೆಗಳಿಗೆ ಕೆರೆ ನೀರು ನುಗ್ಗಿ ಹಾನಿಯಾಗಿದೆ. ಪಾಲಿಕೆ ಸಿಬ್ಬಂದಿ ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿದ್ದಾರೆ. ಮೀನಾಕ್ಷಿ ಕಲ್ಯಾಣ ಮಂಟಪ, ಸಾಯಿಬಾಬಾ ಆಶ್ರಮ ಹಾಗೂ ಸ್ಥಳೀಯ ಕಲ್ಯಾಣ ಮಂಟಪಗಳಲ್ಲಿ ಸಂತ್ರಸ್ತರಿಗೆ ವಸತಿ, ಊಟ ವ್ಯವಸ್ಥೆ ಮಾಡಲಾಗಿದೆ’ ಎಂದುಮೇಯರ್ ಎಂ.ಗೌತಮ್ ಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT