ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಐಎಸ್ಸಿ ಹುದ್ದೆ: ಕನ್ನಡಿಗರಿಗೆ ‘ಕನ್ನಡಿಯೊಳಗಿನ ಗಂಟು’

ಸರೋಜಿನಿ ಮಹಿಷಿ ವರದಿ ಜಾರಿಗೆ ಹಿಂದೇಟು– 85 ಸಿ ಗುಂಪಿನ ಹುದ್ದೆ ಅನ್ಯರಾಜ್ಯದವರ ಪಾಲು?
Last Updated 25 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆಯು ಸಿ ಗುಂಪಿನ 85 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದ್ದು, ಈ ಹುದ್ದೆಗಳು ಕನ್ನಡಿಗರ ಪಾಲಿಗೆ ಕನ್ನಡಿಯೊಳಗಿನ ಗಂಟಾಗಿವೆ. ಸರೋಜಿನಿ ಮಹಿಷಿ ವರದಿ ಪ್ರಕಾರ ಕೇಂದ್ರ ಸರ್ಕಾರದ ಅಧೀನದ ಸಂಸ್ಥೆಗಳಲ್ಲೂ ಸಿ ಮತ್ತು ಡಿ ಗುಂಪಿನ ಹುದ್ದೆಗಳನ್ನು ಕಡ್ಡಾಯವಾಗಿ ಕನ್ನಡಿಗರಿಗೆ ಮೀಸಲಿಡಬೇಕು. ಆದರೆ, ಈ ಅಂಶ ಕಡೆಗಣಿಸಿ ನೇಮಕಾತಿ ಮಾಡಿಕೊಳ್ಳಲು ಐಐಎಸ್ಸಿ ಸಿದ್ಧತೆ ನಡೆಸಿದೆ.

ಐಐಎಸ್ಸಿಯು ಆಡಳಿತ ಸಹಾಯಕರ 85 ಹುದ್ದೆಗಳ ಭರ್ತಿಗೆ 2020ರ ಅ.1ರಂದು ಅಧಿಸೂಚನೆ ಹೊರಡಿಸಿತ್ತು. ‘ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು 15 ವರ್ಷಗಳಿಂದ ಕರ್ನಾಟಕದಲ್ಲೇ ನೆಲೆಸಿರಬೇಕು, ಲಿಖಿತ ಪರೀಕ್ಷೆಗಳಲ್ಲಿ ಕನಿಷ್ಠ ಒಂದು ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ಕಡ್ಡಾಯವಾಗಿ ಉತ್ತೀರ್ಣರಾಗಬೇಕೆಂಬ ಷರತ್ತನ್ನು ವಿಧಿಸಬೇಕು. ಇದು ಈ ನೆಲಕ್ಕೆ, ಈ ಸಂಸ್ಥೆಗೆ ಉದಾರವಾಗಿ ಜಾಗ ನೀಡಿದ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್‌ ಅವರಿಗೂ ಸಲ್ಲಿಸುವ ಗೌರವ’ ಎಂದು ಸಂಸ್ಥೆಯ ಕನ್ನಡ ಅಭಿವೃದ್ಧಿ ಕೋಶದವರು ರಿಜಿಸ್ಟ್ರಾರ್‌ಗೆ ಪತ್ರ ಬರೆದಿದ್ದರು.

ಸಿ ಗುಂಪಿನ ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲಿಡದ ಬಗ್ಗೆ ದೂರು ಕೇಳಿ ಬಂದಿದ್ದರಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾರಭರಣ ಅವರು ಪ್ರಾಧಿಕಾರದ ಸದಸ್ಯರೊಂದಿಗೆ ಐಐಎಸ್ಸಿಗೆ ಭೇಟಿ ನೀಡಿ ಕನ್ನಡ ಅನುಷ್ಠಾನಕ್ಕೆ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿದ್ದರು. ಸಿ ಮತ್ತು ಡಿ ಗುಂಪಿನ ಹುದ್ದೆಗಳನ್ನು ಕಡ್ಡಾಯವಾಗಿ ಕನ್ನಡಿಗರಿಗೇ ಮೀಸಲಿಡಬೇಕು ಎಂದೂ ತಾಕೀತು ಮಾಡಿದ್ದರು. ಅಲ್ಲದೇ 2021ರ ಜ.8ರಂದು ಸಂಸ್ಥೆಯ ನಿರ್ದೇಶಕರಿಗೆ ನೆನಪೋಲೆ ಬರೆದು ‘ಈ ನೆಲದ ಕಾನೂನು ಪಾಲಿಸುವ ಹೊಣೆ ಕೇಂದ್ರ ಸರ್ಕಾರದ ಸಂಸ್ಥೆಗಳಿಗೂ ಇದೆ’ ಎಂದು ಸ್ಪಷ್ಟಪಡಿಸಿದ್ದರು.

‘ಸಿ ಗುಂಪಿನ 85 ಹುದ್ದೆಗಳಿಗೆ ಎಷ್ಟು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಪ್ರವೇಶ ಪರೀಕ್ಷೆಯಲ್ಲಿ ಎಷ್ಟು ಮಂದಿ ಹಾಜರಾಗಿದ್ದರು. ಅವರು ಯಾವ ರಾಜ್ಯದವರು, ಎಷ್ಟು ಮಂದಿ ತೇರ್ಗಡೆಯಾಗಿದ್ದಾರೆ ಎಂಬ ವಿವರ ನೀಡಬೇಕು. ಹುದ್ದೆಗಳ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಪ್ರತಿಯನ್ನೂ ಪ್ರಾಧಿಕಾರಕ್ಕೆ ನೀಡಬೇಕು. ಈ ದಾಖಲೆ ಒದಗಿಸುವವರೆಗೆ ನೇಮಕಾತಿ ಪ್ರಕ್ರಿಯೆಯನ್ನು ತಡೆ ಹಿಡಿಯಬೇಕೂ’ ಎಂದೂ ನಾಗಾಭರಣ ಸೂಚಿಸಿದ್ದರು.

ಐಐಎಸ್ಸಿ ಆಡಳಿತ ಮಂಡಳಿಯ ಸದಸ್ಯರಾಗಿರುವ ಸಂಸದ ಪಿ.ಸಿ.ಮೋಹನ್‌ ಹಾಗೂ ತೇಜಸ್ವಿಸೂರ್ಯ ಅವರೂ ಐಐಎಸ್ಸಿ ನಿರ್ದೇಶಕರಿಗೆ ಪತ್ರ ಬರೆದು ಸಿ ಗುಂಪಿನ ಹುದ್ದೆ ಭರ್ತಿ ಮಾಡುವಾಗ ಕನ್ನಡಿಗರನ್ನು ಕಡೆಗಣಿಸದಂತೆ ಸೂಚನೆ ನೀಡಿದ್ದರು. ಸಂಸ್ಥೆಯ ಕನ್ನಡ ಸಂಘವೂ ಈ ವಿಚಾರವಾಗಿ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರಿಗೆ ಪತ್ರ ಬರೆದು ಕನ್ನಡಿಗರನ್ನು ಕಡೆಗಣಿಸಿರುವುದರಿಂದ ಈ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಕೋರಿತ್ತು.

‘ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸೂಚನೆ, ಸಂಸದರ ಪತ್ರಗಳಿಗೆ ಸೊಪ್ಪು ಹಾಕದೆ ಐಐಎಸ್ಸಿ 85 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಅಂತಿಮಗೊಳಿಸುತ್ತಿದೆ. ಇದರಿಂದ ಕನ್ನಡಿಗರಿಗೆ ಅನ್ಯಾಯವಾಗಲಿದೆ’ ಎಂದು ಸಂಸ್ಥೆಯ ಕನ್ನಡ ಸಂಘದ ಸತೀಶ್‌ ಜಿ.ವಿ. ಬೇಸರ ವ್ಯಕ್ತಪಡಿಸಿದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಂಸ್ಥೆಯ ರಿಜಿಸ್ಟ್ರಾರ್‌ ಕೆ.ವಿ.ಎಸ್‌.ಹರಿ, ‘ನಮ್ಮದು ಕೇಂದ್ರ ಸರ್ಕಾರದ ಅನುದಾನದಿಂದ ನಡೆಯುವ ಸಂಸ್ಥೆ. ಹಾಗಾಗಿ ಕೇಂದ್ರದ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಇದಕ್ಕಿಂತ ಹೆಚ್ಚೇನೂ ಹೇಳಲು ಸಾಧ್ಯವಿಲ್ಲ’ ಎಂದರು.

‘ಕನ್ನಡಿಗರಿಗೆ ಇಲ್ಲ ಮಣೆ’

‘ಸಿಎನ್‌ಆರ್‌ ರಾವ್‌ ಅವರು 10 ವರ್ಷಗಳ ಕಾಲ ಐಐಎಸ್ಸಿ ನಿರ್ದೇಶಕರಾಗಿದ್ದರು. ಅವರ ಅವಧಿಯಲ್ಲಿ ಸಂಸ್ಥೆಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಕೆಲಸ ಮಾಡುತ್ತಿದ್ದ ನೌಕರರನ್ನು ಕಾಯಂಗೊಳಿಸಿದ್ದರು. ಆಗ ಕನ್ನಡಿಗರಿಗೇ ಪ್ರಾಧಾನ್ಯತೆ ಸಿಕ್ಕಿತ್ತು’ ಎಂದು ಸಂಸ್ಥೆಯ ಸಿಬ್ಬಂದಿಯೊಬ್ಬರು ಸ್ಮರಿಸಿದರು.

‘ಈಗಿನ ಅಧಿಕಾರಿಗಳು ನೇಮಕಾತಿ ಮಾಡಿಕೊಳ್ಳುವಾಗ ಕನ್ನಡಿಗರನ್ನು ಕಡೆಗಣಿಸುತ್ತಿದ್ದಾರೆ. ಸಂಸ್ಥೆ ಭದ್ರತಾ ಸಿಬ್ಬಂದಿಯಲ್ಲೂ ಹೆಚ್ಚಿನವರು ಹೊರರಾಜ್ಯದವರು. 800ಕ್ಕೂ ಅಧಿಕ ಕನ್ನಡಿಗರು ಸಂಸ್ಥೆಯಲ್ಲಿ ತಾತ್ಕಾಲಿಕ ನೌಕರರಾಗಿದ್ದಾರೆ. ಸಿ ಗುಂಪಿನ ಹುದ್ದೆ ಭರ್ತಿ ವೇಳೆ ಅವರಿಗೆ ಆದ್ಯತೆ ನೀಡಬಹುದಿತ್ತು’ ಎಂದು ಅವರು ಅಭಿಪ್ರಾಯಪಟ್ಟರು.

‘ಇತ್ತೀಚೆಗೆ ಹತ್ತಕ್ಕೂ ಹೆಚ್ಚು ಸಹಾಯಕ ರಿಜಿಸ್ಟ್ರಾರ್ ಹುದ್ದೆಗಳಿಗೆ ನೇಮಕಾತಿ ನಡೆಯಿತು. ನಾಮಕಾವಸ್ಥೆಗೆ ಕೇವಲ ಒಬ್ಬ ಕನ್ನಡಿಗರನ್ನು ನೇಮಕ ಮಾಡಿಕೊಳ್ಳಲಾಗಿದೆ. ಉಳಿದ ಒಂಬತ್ತು ಹುದ್ದೆಗಳು ಅನ್ಯರಾಜ್ಯದವರ ಪಾಲಾಗಿವೆ’ ಎಂದು ದೂರಿದರು.

‘ನೇಮಕಾತಿ ಪ್ರಕ್ರಿಯೆ ಹೊರಗುತ್ತಿಗೆ ಏಕೆ’

ದೇಶದ ವಿವಿಧ ಸಂಸ್ಥೆಗಳು ನೇಮಕಾತಿ ಸಂದರ್ಶನ ನಡೆಸಲು ಐಐಎಸ್ಸಿಯ ಪ್ರಾಧ್ಯಾಪಕರನ್ನು ಕರೆಸಿಕೊಳ್ಳುತ್ತಾರೆ. ಹಾಗಿರುವಾಗ ಸಿ ಗುಂಪಿನ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಹೊರಗುತ್ತಿಗೆ ನೀಡಿದ್ದೇಕೆ. ಐಐಎಸ್ಸಿಯ ಆಡಳಿತ ಸಹಾಯಕರ ನೇಮಕಾತಿ ನಡೆಸುವ ಯೋಗ್ಯತೆ ಈ ಸಂಸ್ಥೆಗಿಲ್ಲವೇ. ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಹೊರಗಿನವರಿಂದ ಮಾಡಿಸಬೇಕೇ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಸಂಸ್ಥೆಯ ಸಿಬ್ಬಂದಿಯೊಬ್ಬರು ಪ್ರಶ್ನಿಸಿದರು.

‘ಸಿ ಗುಂಪಿನ ಹುದ್ದೆಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ನಡೆದಿರುವ ಗುಮಾನಿ ಇದೆ. ವಿಶೇಷವಾಗಿ ಈಗಿರುವ ಡೆಪ್ಯುಟಿ ರಿಜಿಸ್ಟ್ರಾರ್ ಅವರ ಸಂಬಂಧಿಕರಿಗೇ ಹುದ್ದೆಗಳನ್ನು ಕರುಣಿಸಲಾಗುತ್ತಿದೆ’ ಎಂದು ಅವರು ಆರೋಪ ಮಾಡಿದರು. ‘ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು’ ಎಂದೂ ಅವರು ಒತ್ತಾಯಿಸಿದರು.

‘ಕೇಂದ್ರ ಶಿಕ್ಷಣ ಸಚಿವರ ಗಮನಕ್ಕೆ ತರುತ್ತೇನೆ’

‘ಐಐಎಸ್ಸಿಯ ಆಡಳಿತ ಸಹಾಯಕ ಹುದ್ದೆಗಳೆಲ್ಲವೂ ಕನ್ನಡಿಗರಿಗೇ ಸಿಗಬೇಕು. ಈ ವಿಚಾರವನ್ನುಕೇಂದ್ರ ಶಿಕ್ಷಣ ಸಚಿವ ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌ ಅವರ ಗಮನಕ್ಕೂ ತರುತ್ತೇನೆ. ಸಂಸ್ಥೆಯ ಆಡಳಿತ ಮಂಡಳಿ ಸಭೆ ನಡೆದಾಗಲೂ ಈ ವಿಚಾರ ಪ್ರಸ್ತಾಪಿಸುತ್ತೇನೆ’ ಎಂದು ಸಂಸದ ಹಾಗೂ ಐಐಎಸ್ಸಿ ಆಡಳಿತ ಮಂಡಳಿ ಸದಸ್ಯ ಪಿ.ಸಿ.ಮೋಹನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಐಐಎಸ್ಸಿ ಎದುರು ಧರಣಿ ಕೂರುತ್ತೇವೆ’

‘ಐಐಎಸ್ಸಿಯ ಸಿ ಗುಂಪಿನ ಹುದ್ದೆಗಳನ್ನು ಕನ್ನಡಿಗರಿಗೆ ನೀಡದಿದ್ದರೆ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ. ಅಷ್ಟೇ ಅಲ್ಲ, ಈ ನೆಲದ ನಿಯಮಗಳಿಗೆ ಬೆಲೆ ನೀಡದಿರುವುದನ್ನು ಖಂಡಿಸಿ ಸಂಸ್ಥೆಯ ಎದುರು ಧರಣಿ ಕೂರುತ್ತೇವೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT