ಶುಕ್ರವಾರ, ಏಪ್ರಿಲ್ 16, 2021
25 °C

ಟೋಯಿಂಗ್‌ನಲ್ಲಿ ಅಕ್ರಮ: ಕ್ರಮಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನಿಲುಗಡೆ ನಿರ್ಬಂಧಿಸಿರುವ ಸ್ಥಳಗಳಲ್ಲಿ ನಿಲ್ಲಿಸಿರುವ ವಾಹನಗಳ ಟೋಯಿಂಗ್‌ ಮಾಡುವ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಹಿರಿಯ ಅಧಿಕಾರಿಗಳು ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ರಾಜ್ಯ ಘಟಕದ ವಿ.ಆರ್. ಮರಾಠೆ ಒತ್ತಾಯಿಸಿದರು.

‘ಟೋಯಿಂಗ್ ಮಾಡಲು ಬಳಸುವ ವಾಹನಗಳನ್ನು ಸಾರಿಗೆ ಇಲಾಖೆ ಅಧಿಕಾರಿಗಳ ಅನುಮತಿ ಪಡೆಯದೆ ಅತಿ ಹೆಚ್ಚು ಮಾರ್ಪಾಡು ಮಾಡಿ ಕಾನೂನುಬಾಹಿರವಾಗಿ ಬಳಸಲಾಗುತ್ತದೆ. ಸಂಚಾರ ಪೊಲೀಸ್‌ ಅಧಿಕಾರಿಗಳಾಗಲಿ, ಸಾರಿಗೆ ಇಲಾಖೆ ಅಧಿಕಾರಿಗಳಾಗಲಿ ಇದರ ಬಗ್ಗೆ ಚಕಾರ ಎತ್ತುತ್ತಿಲ್ಲ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಮೋಟಾರು ವಾಹನ ಕಾಯ್ದೆ 1988ರ ಕಲಂ 52 (1)ರ ಪ್ರಕಾರ ಯಾವುದೇ ರೀತಿಯ ವಾಹನಗಳನ್ನು ನೋಂದಣಿ ಪ್ರಮಾಣ ಪತ್ರದಲ್ಲಿನ ಮಾನದಂಡಗಳಿಗೆ ವ್ಯತಿರಿಕ್ತವಾಗಿ ಮಾರ್ಪಾಡು ಮಾಡುವಂತಿಲ್ಲ’ ಎಂದೂ ಹೇಳಿದರು.

‘ನಿಯಮದ ಪ್ರಕಾರ ಟೋಯಿಂಗ್ ವಾಹನಗಳಲ್ಲಿ ಒಂದು ಬಾರಿಗೆ ಗರಿಷ್ಠ 4 ವಾಹನಗಳನ್ನು ಟೋಯಿಂಗ್ ಮಾಡಲು ಅವಕಾಶವಿದೆ. ಆದರೆ, ಈ ವಾಹನಗಳನ್ನು ಮಾರ್ಪಾಡು ಮಾಡಿ ಒಂದು ಬಾರಿಗೆ 8, 9 ವಾಹನಗಳನ್ನು ತುಂಬಲಾಗುತ್ತಿದೆ. ಗಾಡಿಗೆ ಹಾನಿಯಾಗಿರುವುದನ್ನು ಮಾಲೀಕರು ಪ್ರಶ್ನಿಸಿದರೆ ಸಿಬ್ಬಂದಿ ಗೂಂಡಾಗಳ ರೀತಿ ವರ್ತಿಸುತ್ತಾರೆ. ದಂಡದ ಪ್ರಮಾಣ ಹೆಚ್ಚು ಮಾಡಲಾಗಿದೆ. ವಿನಾಕಾರಣ ವಾಹನಗಳನ್ನು ತೆಗೆದುಕೊಂಡು ಹೋಗುತ್ತಾರೆ. ಪರೋಕ್ಷವಾಗಿ ಭ್ರಷ್ಟಾಚಾರ ಎಸಗಲಾಗುತ್ತಿದೆ’ ಎಂದು ಅವರು ದೂರಿದರು.

 ವೇದಿಕೆಯ ಉಪಾಧ್ಯಕ್ಷ ಎಸ್.ಮಂಜುನಾಥ್, ಕಾರ್ಯಕಾರಿ ಸಮಿತಿ ಸದಸ್ಯ ಸಿ.ಎನ್. ದೀಪಕ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು