ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲ ಸೌಲಭ್ಯದ ಕೊರತೆ: ಆರೋಪ

ಎ.ಪಿ.ಎಂ.ಸಿ ಮಹಾದ್ವಾರದಲ್ಲಿಯೇ ಜಲಬಾಧೆ ತೀರಿಸಿಕೊಳ್ಳುವ ರೈತರು
Last Updated 10 ಮಾರ್ಚ್ 2018, 7:01 IST
ಅಕ್ಷರ ಗಾತ್ರ

ಗಜೇಂದ್ರಗಡ: ಗಜೇಂದ್ರಗಡ ಪಟ್ಟಣ ತಾಲ್ಲೂಕು ಕೇಂದ್ರವಾದರೂ ಇಲ್ಲಿನ ಎ.ಪಿ.ಎಂ.ಸಿ ಮಾತ್ರ ತನ್ನ ಮೂಲ ಸ್ವರೂಪದಲ್ಲೇ ಉಳಿದಿದ್ದು, ರೈತರಿಗೆ ಇಂದಿಗೂ ಮೂಲ ಸೌಲಭ್ಯ ಇರದ ಕಾರಣ ಪೇಟೆಗೆ ಬಂದ ರೈತರು ಎಲ್ಲೆಂದರಲ್ಲೇ ಮೂತ್ರ ಬಾಧೆಯನ್ನು ತೀರಿಸಿಕೊಳ್ಳುವ ದೃಶ್ಯ ಕಂಡುಬರುತ್ತಿದೆ.

ಪಟ್ಟಣದ ಹೊರವಲಯದ ರೋಣ ರಸ್ತೆಗೆ ಹೊಂದಿಕೊಂಡಿರುವ ಜಗಜ್ಯೋತಿ ಬಸವೇಶ್ವರ ಉಪ ಮಾರುಕಟ್ಟೆಯು ರೈತರಿಗೆ ಬೇಕಾದ ಸೌಲಭ್ಯಗಳಿಲ್ಲದೆ ಅವ್ಯವಸ್ಥೆಯ ಆಗರವಾಗಿದ್ದರೂ ಸಂಬಂಧಪಟ್ಟವರು ಇತ್ತ ಗಮನಿಸುತ್ತಿಲ್ಲ ಎಂದು ಎಪಿಎಂಸಿಗೆ ಬರುವ ವ್ಯಾಪಾರಸ್ಥರು ದೂರುತ್ತಿದ್ದಾರೆ.

ವಾಣಿಜ್ಯ ನಗರಿ ಎಂಬ ಖ್ಯಾತಿ ಪಡೆದಿರುವ ಪಟ್ಟಣದ ಮಾರುಕಟ್ಟೆಯಲ್ಲಿ ಒಂದೂ ಮೂತ್ರಾಲಯವಿಲ್ಲ ಎಂಬುದು ವಿಪರ್ಯಾಸದ ಸಂಗತಿ. ಇಲ್ಲಿಗೆ ಬರುವ ರೈತರು ತಮ್ಮ ಮೂತ್ರ ಬಾಧೆ ತೀರಿಸಿಕೊಳ್ಳಲು ಮಾರುಕಟ್ಟೆ ದ್ವಾರದ ಬಳಿ ಇರುವ ಗಟಾರವನ್ನು ಅವಲಂಬಿಸಬೇಕಿದೆ.

ಈ ದ್ವಾರದ ಒಂದು ಬದಿಯಲ್ಲಿ ಅಂಚೆ ಕಚೇರಿ ಇದೆ. ಜತೆಗೆ ಪಕ್ಕದಲ್ಲಿ ಗಣಪತಿ ದೇವಸ್ಥಾನವೂ ಇದೆ. ಮಾರುಕಟ್ಟೆಗೆ ಬರುವ ರೈತರು ವಾಸನೆಯನ್ನು ತಡೆಯದೇ ಮೂಗು ಮುಚ್ಚಿಕೊಳ್ಳಬೇಕಾಗಿದೆ. ಇನ್ನು ಮಹಿಳೆಯರ ಸ್ಥಿತಿಯಂತೂ ಹೇಳತೀರದು.

ಪ್ರತಿ ಮಂಗಳವಾರ ಸಂತೆ ನಡೆಯುತ್ತಿದ್ದು ಮಾರುಕಟ್ಟೆಗೆ ಬರುವವರು ನರಕಯಾತನೆ ಅನುಭವಿಸುವಂತಾಗಿದೆ.

ಮಾರುಕಟ್ಟೆಯ ವರ್ತಕರಿಗೆ ಮತ್ತು ರೈತರಿಗೆ ಕುಡಿಯುವ ನೀರಿಗಾಗಿ ಶಾಸಕರು ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಿದ್ದರು, ಆದರೆ ಈ ಘಟಕ ಸೂಕ್ತ ನಿರ್ವಹಣೆ ಕೊರತೆಯಿಂದ ಸ್ಥಗಿತಗೊಂಡಿದೆ.

‘ಇತ್ತೀಚೆಗೆ ಶಾಸಕರು ರಸ್ತೆಗೆ ಟಾರ್ ಹಾಕುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದಾರೆ. ಈ ಮಾರುಕಟ್ಟೆಯ ರಸ್ತೆಗಳಿಗೆ ಕಾಂಕ್ರಿಟ್ ಹಾಕಲಾಗಿದ್ದು, ಅದರ ಗುತ್ತಿಗೆದಾರರು ಮೂತ್ರಾಲಯ ನಿರ್ಮಿಸುವುದಾಗಿ ಹೇಳಿ ಜನರ ಮೂಗಿಗೆ ತುಪ್ಪ ಸವರಿ ಹೋದವರು ಮರಳಿ ಇತ್ತ ಸುಳಿದಿಲ್ಲ’ ಎನ್ನುತ್ತಾರೆ ಇಲ್ಲಿನ ದಲಾಲರು.

‘ಇಲ್ಲಿನ ಜನರು ಎಲ್ಲೆಂದರಲ್ಲಿ ಮೂತ್ರ ಮಾಡುವುದು ಎ.ಪಿ.ಎಂ.ಸಿ ಅಧ್ಯಕ್ಷರಿಗೆ ಕಾಣುತ್ತಿಲ್ಲ. ಎ.ಪಿ.ಎಂ.ಸಿ ಒಳಗೆ ಈ ಹಿಂದೆ ಮೂತ್ರಾಲಯವನ್ನು ನಿರ್ಮಿಸಿದ್ದರೂ ಅದು ಕಳಪೆ ಕಾಮಗಾರಿಯಿಂದಾಗಿ ಬಿದ್ದು ಹೋಗಿದೆ. ಅದನ್ನು ದುರಸ್ತಿ ಕೂಡ ಮಾಡಿಲ್ಲ. ಇದಕ್ಕೆ ಖರ್ಚು ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ’ ಎನ್ನುತ್ತಾರೆ ಎ.ಪಿ.ಎಂ.ಸಿ ವರ್ತಕರ ಸಂಘದ ಅಧ್ಯಕ್ಷ ಅಮರೇಶ ಬಳಿಗಾರ.

‘ಎ.ಪಿ.ಎಂ.ಸಿ ಇರುವುದು ರೈತರಿಗಾಗಿ. ಅವರಿಗೆ ಇಲ್ಲಿ ಕುಡಿಯಲು ನೀರಿಲ್ಲ. ಆದರೆ ಚುನಾವಣೆ ತಂತ್ರವಾಗಿ ಪಟ್ಟಣದಲ್ಲಿ ಪುಕ್ಕಟೆ ನೀರು ನೀಡುತ್ತಿದ್ದಾರೆ. ಮೂತ್ರಾಲಯವನ್ನು ನಿರ್ಮಿಸದೇ ಇರುವುದು ಯಾವ ಅಭಿವೃದ್ಧಿ?’ ಎಂದು ಪುರಸಭೆ ಸದಸ್ಯ ಅಶೋಕ ವನ್ನಾಲ ವ್ಯಂಗ್ಯವಾಡಿದರು.

**

ಶಾಸಕರು ದಲಾಲರಿಗೆ ಮತ್ತು ವ್ಯಾಪಾರಿಗಳಿಗೆ ಇಲ್ಲದ ಸುಳ್ಳು ಹೇಳಿ ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವುದರಲ್ಲಿ ತಲ್ಲೀನರಾಗಿದ್ದಾರೆ.

–ಅಶೋಕ ವನ್ನಾಲ, ಪುರಸಭೆ ಸದಸ್ಯ

**

–ಶ್ರೀಶೈಲ ಎಂ. ಕುಂಬಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT