ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಂಎ ವಂಚನೆ ಪ್ರಕರಣ: ಹೂಡಿಕೆದಾರರ ದಿಕ್ಕು ತಪ್ಪಿಸಿದ ಒಪ್ಪಂದ

Last Updated 22 ಜೂನ್ 2019, 19:35 IST
ಅಕ್ಷರ ಗಾತ್ರ

ಬೆಂಗಳೂರು: ಸಾವಿರಾರು ಷೇರುದಾರರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ಪರಾರಿಯಾಗಿರುವ ‘ಐಎಂಎ ಸಮೂಹ ಕಂಪನಿ’ ವ್ಯವಸ್ಥಾಪಕ ನಿರ್ದೇಶಕ ಮಹಮದ್‌ ಮನ್ಸೂರ್‌ ಖಾನ್‌ ವಂಚನೆ ಮಾಡುವ ಉದ್ದೇಶದಿಂದಲೇ ಒಪ್ಪಂದ ಮಾಡಿಕೊಂಡಿದ್ದಾನೆ ಎಂಬ ಅಂಶ ತನಿಖೆಯಿಂದ ಬಯಲಾಗಿದೆ.

ಷೇರುದಾರರ ಹಣವನ್ನು ಚಿನಿವಾರ ಪೇಟೆಯಲ್ಲಿ ಹೂಡಿಕೆ ಮಾಡುವುದಾಗಿ ಹೇಳಲಾಗಿದ್ದರೂ, ಕಂಪನಿಗೆ ಇಷ್ಟಬಂದಂತೆ ಬಳಸಿಕೊಳ್ಳಲು; ಬೇಕಾದ ವ್ಯವಹಾರಗಳಲ್ಲಿ ಹೂಡಿಕೆ ಮಾಡಲು ಅನುಕೂಲವಾಗುವಂತೆ ಷರತ್ತುಗಳನ್ನು ರೂಪಿಸಲಾಗಿದೆ ಎಂದು ಉನ್ನತ ಪೊಲೀಸ್‌ ಮೂಲಗಳು ತಿಳಿಸಿವೆ. ಒಪ್ಪಂದ ಪತ್ರದ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಮಾರುಕಟ್ಟೆ ಅಪಾಯಗಳನ್ನು ಆಧರಿಸಿ ಷೇರುದಾರರ ಲಾಭ ಅಥವಾ ನಷ್ಟ ನಿರ್ಧಾರವಾಗಲಿದೆ. ಅಲ್ಲದೆ, ಮಾರುಕಟ್ಟೆ ಏರಿಳಿತಕ್ಕೆ ಅನುಗುಣವಾಗಿ ಹೂಡಿಕೆದಾರರಿಗೆ ಲಾಭಾಂಶ ನೀಡಲಾಗುವುದು. ಇದಕ್ಕೆ ಯಾವುದೇ ಕಾಲಮಿತಿ ಇರುವುದಿಲ್ಲ ಎಂದೂ ಒಪ್ಪಂದ ಪತ್ರದಲ್ಲಿ ಹೇಳಲಾಗಿದೆ.

ಹೂಡಿಕೆಯಾದ ಹಣದ ಭದ್ರತೆ ಹಾಗೂ ಸುರಕ್ಷತೆ ಕುರಿತು ಪ್ರಸ್ತಾಪಿಸಿರುವ ಒಪ್ಪಂದವು, ಮೂಲ ಧನಕ್ಕೆ ಹೊಡೆತ ಬಿದ್ದಲ್ಲಿ ಅದನ್ನು ಮರಳಿ ಗಳಿಸುವವರೆಗೂ ಕಂಪನಿ ಹೂಡಿಕೆ ಮಾಡುತ್ತಾ ಹೋಗುತ್ತದೆ. ಇದರ ಮರುಗಳಿಕೆಗೆ ಮೂರು ತಿಂಗಳ ಗಡುವು ನಿಗದಿ ಮಾಡಲಾಗಿದೆ. ಆದರೆ, ಹೂಡಿಕೆ ಮೇಲಿನ ಲಾಭಾಂಶ ಹಾಗೂ ಮೂಲ ಧನ ಹಿಂತಿರುಗಿಸುವ ಕುರಿತು ಕಂಪನಿ ಯಾವುದೇ ಭರವಸೆ ನೀಡಿಲ್ಲ ಎಂದು ಮೂಲಗಳು ವಿವರಿಸಿವೆ.

ಕಂಪನಿ ಒಪ್ಪಂದದ ಷರತ್ತುಗಳನ್ನು ಐಎಂಎ ಲೆಟರ್‌ಹೆಡ್‌ನಲ್ಲಿ ನೀಡಲಾಗಿದೆ. ಹೂಡಿಕೆ ಮಾಡಿದ ಹಣಕ್ಕೆ ಸಂಬಂಧಿಸಿದ ರಶೀದಿಗಳನ್ನು ಐಎಂಎ ಪತ್ತಿನ ಸಹಕಾರಿ ಸಂಘದ ಹೆಸರಿನಲ್ಲಿ ನೀಡಲಾಗಿದೆ. ಹೂಡಿಕೆ ಮಾಡಿದ ಹಣವನ್ನು ದುರ್ಬಳಕೆ ಮಾಡುವ ಉದ್ದೇಶದಿಂದಲೇ ಹೀಗೆ ಮಾಡಲಾಗಿದೆ. ಅಲ್ಲದೆ, ಬೇರೆ ಬೇರೆ ತೆರಿಗೆಗಳು ಮತ್ತು ಹಣಕಾಸು ಹೂಡಿಕೆಗೆ ಸಂಬಂಧಿಸಿದ ನಿಯಮಗಳಿಂದ ವಿನಾಯ್ತಿ ಪಡೆಯುವ ತಂತ್ರ ಇದರ ಹಿಂದಿದೆ ಎಂದೂ ಮೂಲಗಳು ಸ್ಪಷ್ಟಪಡಿಸಿವೆ.

ಪಾಸ್‌ಪೋರ್ಟ್‌ ಮುಟ್ಟುಗೋಲು
ಐಎಂಎ ಸಮೂಹ ಕಂಪನಿ ಸಂಸ್ಥಾಪಕ ಮನ್ಸೂರ್‌ ಖಾನ್‌ ಪಾಸ್‌ಪೋರ್ಟ್‌ ಅನ್ನು ಅಮಾನತುಗೊಳಿಸಿದ್ದು, ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ಆರಂಭಿಸಿದೆ.

ಖಾನ್‌ ಪಾಸ್‌‍‍ಪೋರ್ಟ್‌ ಮುಟ್ಟುಗೋಲು ಹಾಕಿಕೊಳ್ಳುವಂತೆ ಎಸ್‌ಐಟಿ ಪೊಲೀಸರು ಪಾಸ್‌ಪೋರ್ಟ್‌ ಕಚೇರಿಗೆ ಪತ್ರ ಬರೆದಿದ್ದರು.

ಅಲ್ಲದೆ, ಇವರ ಪತ್ತೆಗೆ ಇಂಟರ್‌ಪೋಲ್‌ಶುಕ್ರವಾರ ಸಂಜೆ ಬ್ಲೂಕಾರ್ನರ್‌ ನೋಟಿಸ್‌ ಹೊರಡಿಸಿದೆ. ಐಎಂಎ ವಂಚನೆ ಪ್ರಕರಣದಲ್ಲಿಪ್ರಮುಖ ಆರೋಪಿಯಾಗಿರುವ ಖಾನ್‌ ಜೂನ್‌ 8ರಿಂದ ನಾಪತ್ತೆಆಗಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT