ಬೆಂಗಳೂರಿನಲ್ಲೂ ಲಭ್ಯ ನೊಬೆಲ್‌ ಮನ್ನಣೆಯ ಕ್ಯಾನ್ಸರ್ ಚಿಕಿತ್ಸೆ

7

ಬೆಂಗಳೂರಿನಲ್ಲೂ ಲಭ್ಯ ನೊಬೆಲ್‌ ಮನ್ನಣೆಯ ಕ್ಯಾನ್ಸರ್ ಚಿಕಿತ್ಸೆ

Published:
Updated:

ಬೆಂಗಳೂರು: ‘ಇಮ್ಯುನೊ ಥೆರಪಿ ಮೂಲಕ ಕ್ಯಾನ್ಸರ್‌ ಗುಣಪಡಿಸಲು ಸಾಧ್ಯ’ ಎಂದು ಸಾರಿಹೇಳಿದ ಇಬ್ಬರು ವಿಜ್ಞಾನಿಗಳಿಗೆ ಈ ಬಾರಿಯ ವೈದ್ಯಕೀಯ ನೊಬೆಲ್‌ ಲಭಿಸಿದೆ. ಅಮೆರಿಕದ ಜೇಮ್ಸ್‌ ಅಲಿಸನ್‌ ಮತ್ತು ಜಪಾನ್‌ನ ಸುಕು ಹೊಂಜೊ ನೊಬೆಲ್ ಪುರಸ್ಕೃತರು.


ಡಾ.ಶೇಖರ್ ಪಾಟೀಲ್

‘ಕ್ಯಾನ್ಸರ್‌ ಚಿಕಿತ್ಸೆಗೆ ಬಳಕೆಯಲ್ಲಿರುವ ಹಲವು ವಿಧಾನಗಳ ಪೈಕಿ ಇದು ಹೊಸ ಚಿಕಿತ್ಸೆಯೇ ಅಥವಾ ಈಗಾಗಲೇ ಇದನ್ನು ಬಳಸಲಾಗುತ್ತಿದೆಯೇ’ ಎನ್ನುವ ಪ್ರಶ್ನೆ ಮುಂದಿಟ್ಟಾಗ, ‘ಎರಡು ವರ್ಷಗಳಿಂದ ಇಮ್ಯುನೊ ಥೆರಪಿ ಚಾಲ್ತಿಯಲ್ಲಿದೆ. ಅನೇಕ ಕ್ಯಾನ್ಸರ್‌ ರೋಗಿಗಳಿಗೆ ಈ ಚಿಕಿತ್ಸೆ ನೀಡಿದ್ದೇವೆ’ ಎಂದು ಬೆಂಗಳೂರು ಕ್ಯಾನ್ಸರ್‌ ಸಂಶೋಧನಾ ಕೇಂದ್ರದ ಡಾ. ಶೇಖರ್‌ ಪಾಟೀಲ್‌ ಪ್ರತಿಕ್ರಿಯಿಸಿದರು.

ಇದು ಹೇಗೆ ಕೆಲಸ ಮಾಡುತ್ತದೆ?

‘ಕ್ಯಾನ್ಸರ್‌ ಕೋಶಗಳು, ನಮ್ಮ ದೇಹದ ರೋಗನಿರೋಧಕ ವ್ಯವಸ್ಥೆಯಲ್ಲಿರುವ ಟಿ–ಜೀವಕೋಶಗಳ ಮೇಲ್ಮೈಯನ್ನು (ಇವು ಕ್ಯಾನ್ಸರ್‌ ಜೀವಕೋಶಗಳೊಂದಿಗೆ ಹೊಡೆದಾಡುತ್ತವೆ) ಪ್ರೋಟೀನ್‌ನಿಂದ ಬಂಧಿಸಿಬಿಡುತ್ತವೆ. ಇದರಿಂದ ಅವು ಕ್ಯಾನ್ಸರ್‌ ಜೀವಕೋಶಗಳೊಂದಿಗೆ ಹೋರಾಡಲು ಸಾಧ್ಯವಾಗುವುದಿಲ್ಲ’ ಎಂದು ಪಾಟೀಲ್‌ ವಿವರಿಸಿದರು.

‘ಸಾಂಪ್ರದಾಯಿಕ ಚಿಕಿತ್ಸಾ ವಿಧಾನದಲ್ಲಿ ಕೀಮೋಥೆರಪಿ ಮತ್ತು ರೇಡಿಯೊಥೆರಪಿ ಮೂಲಕ ನೇರವಾಗಿ ಕ್ಯಾನ್ಸರ್‌ ಕೋಶಗಳನ್ನು ಸಾಯಿಸಲಾಗುತ್ತದೆ. ಇದರಿಂದ ನಮ್ಮ ದೇಹದ ರೋಗನಿರೋಧಕ ಜೀವಕೋಶಗಳಿಗೂ ಹಾನಿಯಾಗುತ್ತದೆ. ಇಮ್ಯುನೊ ಥೆರಪಿ ವಿಧಾನದಲ್ಲಿ ಕ್ಯಾನ್ಸರ್‌ ಕೋಶಗಳನ್ನು ನಾಶಪಡಿಸುವ ಬದಲು ಟಿ–ಕೋಶಗಳ ಮೇಲೆ ಕೂತಿರುವ ಪ್ರೋಟೀನ್‌ ತೆಗೆದುಹಾಕಲಾಗುತ್ತದೆ. ಇದರಿಂದ ಟಿ–ಕೋಶ ಮತ್ತೆ ಕಾರ್ಯಪ್ರವೃತ್ತವಾಗುತ್ತದೆ. ರೋಗಿ ಗುಣಮುಖವಾಗುವ ಸಾಧ್ಯತೆ ಹೆಚ್ಚಾಗುತ್ತದೆ’ ಎಂದರು.

ಬೆಂಗಳೂರಿನಲ್ಲಿ ಈ ಚಿಕಿತ್ಸೆ ಇದೆಯೇ?

‘ಬೆಂಗಳೂರಿನ ಕೆಲ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಈ ಚಿಕಿತ್ಸೆ ಲಭ್ಯ. ಚಿಕಿತ್ಸಾ ವೆಚ್ಚ ದುಬಾರಿಯಾದ ಕಾರಣ ಎಲ್ಲರಿಗೂ ಇದನ್ನು ಸೂಚಿಸುವುದಿಲ್ಲ. ಸದ್ಯ ಶ್ವಾಸಕೋಶ ಮತ್ತು ಕಿಡ್ನಿ ಕ್ಯಾನ್ಸರ್‌ಗೆ ಈ ಚಿಕಿತ್ಸೆ ಬಳಸಿದ್ದೇವೆ. ಮೂರು ವಾರಗಳಿಗೊಮ್ಮೆ ಇಂಜೆಕ್ಷನ್‌ ನೀಡುತ್ತೇವೆ. ಒಂದು ಇಂಜೆಕ್ಷನ್‌ಗೆ ಸುಮಾರು ₹2 ಲಕ್ಷವಾಗುತ್ತದೆ’ ಎಂದು ಪಾಟೀಲ್‌ ಮಾಹಿತಿ ನೀಡಿದರು.


ಡಾ.ರಾಮಚಂದ್ರನ್

‘ಇದು ಹಳೆಯ ಚಿಕಿತ್ಸಾ ಪದ್ಧತಿ ಎಂದರು ಕಿದ್ವಾಯಿ ಕ್ಯಾನ್ಸರ್‌ ಆಸ್ಪತ್ರೆ ನಿರ್ದೇಶಕ ಸಿ.ರಾಮಚಂದರ್, ‘ಹೆಪಟೈಟಿಸಿಸ್‌ ಬಿ ಮತ್ತು ಸಿ ಸೇರಿ ವಿವಿಧ ಕಾಯಿಲೆಗಳಿಗೆ ಇಮ್ಯುನೊ ಥೆರಪಿ ಮಾಡಲಾಗುತ್ತಿತ್ತು. ಕ್ಯಾನ್ಸರ್‌ ಚಿಕಿತ್ಸೆಗೆ ಈ ವಿಧಾನವನ್ನು ಹೆಚ್ಚಾಗಿ ಬಳಸುತ್ತಿರಲಿಲ್ಲ. ಕ್ಯಾನ್ಸರ್‌ಗಾಗಿ ವರ್ಷಗಳ ಹಿಂದಷ್ಟೇ ಇಮ್ಯುನೊ ಡ್ರಗ್ಸ್‌ (ಔಷಧಿ) ಪರಿಚಯಿಸಲಾಗಿದೆ. ಕೆಲ ರೋಗಿಗಳಿಗೆ ಈ ಚಿಕಿತ್ಸೆ ನೀಡಿದ್ದೇವೆ’ ಎಂದರು.

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !