ಮಂಗಳವಾರ, ಅಕ್ಟೋಬರ್ 20, 2020
21 °C
ಮೆಟ್ರೊ ರೈಲಿನಲ್ಲಿ ಮೊದಲ ಬಾರಿ ಪ್ರಯಾಣಿಸಲು ಕನಿಷ್ಠ ₹200 ಬೇಕು!

ಮೆಟ್ರೊ ಪ್ರಯಾಣಕ್ಕೆ ಹೆಚ್ಚುವರಿ ಸ್ಮಾರ್ಟ್‌ಕಾರ್ಡ್‌ ಖರೀದಿಸುವ ಅನಿವಾರ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಟೋಕನ್‌ ವಿತರಿಸುವುದಿಲ್ಲ, ಹಳೆಯ ಸ್ಮಾರ್ಟ್‌ಕಾರ್ಡ್‌ಗಳನ್ನು ವೆಬ್‌ಸೈಟ್‌ನಲ್ಲಿಯೇ ರಿಚಾರ್ಜ್‌ ಮಾಡಿಸಿಕೊಳ್ಳಬೇಕು, ರಿಚಾರ್ಜ್‌ ಮಾಡಿಸಿಕೊಂಡ ಒಂದು ತಾಸಿನ ನಂತರವೇ ಪ್ರಯಾಣಿಸಬೇಕು, ಸ್ಮಾರ್ಟ್‌ಕಾರ್ಡ್‌ ರಿಚಾರ್ಜ್‌ ಮಾಡಿಸಿಕೊಂಡ 7 ದಿನಗಳೊಳಗೇ ಬಳಸಬೇಕು...

ಮೆಟ್ರೊ ರೈಲಿನಲ್ಲಿ ಪ್ರಯಾಣಿಸುವವರಿಗೆ ಬೆಂಗಳೂರು ಮೆಟ್ರೊ ರೈಲು ನಿಗಮವು ವಿಧಿಸಿರುವ ಷರತ್ತುಗಳಿವು. ಈ ನಿರ್ಬಂಧಗಳಿಂದ ಬಹುತೇಕ ಪ್ರಯಾಣಿಕರು ಎರಡೆರಡು ಸ್ಮಾರ್ಟ್‌ಕಾರ್ಡ್‌ ಖರೀದಿಸಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ.

‘ಹಳೆಯ ಸ್ಮಾರ್ಟ್‌ಕಾರ್ಡ್‌ ಇದ್ದರೂ ರಿಚಾರ್ಜ್‌ ಮಾಡಿಸುವುದು ಮರೆತು ಹೋಗುತ್ತದೆ. ರಿಚಾರ್ಜ್‌ ಮಾಡಿಸಿದರೂ ಒಂದು ಗಂಟೆ ಕಾಯುವಷ್ಟು ಸಮಯ ಇರುವುದಿಲ್ಲ. ಕಾರ್ಡ್‌ ಇದ್ದರೂ, ಹೊಸ ಕಾರ್ಡ್‌ ಖರೀದಿಸಿ ಪ್ರಯಾಣಿಸಿದ್ದೇನೆ’ ಎಂದು ಎಂಜಿನಿಯರ್‌ ರಮೇಶ್‌ ಹೇಳಿದರು.

‘ಪ್ರಯಾಣಕ್ಕೆ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಸೋಂಕು ನಿಯಂತ್ರಣಕ್ಕೆ ಈ ಕ್ರಮಗಳು ಅನಿವಾರ್ಯ ಇರಬಹುದು. ಆದರೆ, ಸ್ಮಾರ್ಟ್‌ಕಾರ್ಡ್‌ ರಿಚಾರ್ಜ್‌ಗೆ ಬೇರೆ ಸರಳ ವ್ಯವಸ್ಥೆಯನ್ನಾದರೂ ಮಾಡಬೇಕು. ತಾಸುಗಟ್ಟಲೇ ಕಾಯಲು ಯಾರಿಗೆ ಸಮಯ ಇರುತ್ತದೆ? ಪ್ರಯಾಣದ ಮೊತ್ತಕ್ಕಿಂತ ಸ್ಮಾರ್ಟ್‌ಕಾರ್ಡ್‌ಗಳಿಗೇ ಹೆಚ್ಚು ಖರ್ಚು ಮಾಡಬೇಕಾಗಿದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಕನಿಷ್ಠ ₹200 ಬೇಕು: ‘ನಾನು ಮೆಜೆಸ್ಟಿಕ್‌ ನಿಲ್ದಾಣದಿಂದ ಜೆ.ಪಿ. ನಗರಕ್ಕೆ ಹೋಗಬೇಕಾಗಿತ್ತು. ಸ್ಮಾರ್ಟ್‌ಕಾರ್ಡ್‌ ಇದ್ದರೂ ರಿಜಾರ್ಜ್‌ ಮಾಡಿಸಲು ಆಗಿರಲಿಲ್ಲ. ₹50 ಕೊಟ್ಟು ಹೊಸ ಕಾರ್ಡ್ ಖರೀದಿಸಿದೆ. ಈ ಕಾರ್ಡ್‌ನಲ್ಲಿ ಕನಿಷ್ಠ ₹50 ಮೊತ್ತ ಇರಲೇಬೇಕಂತೆ. ಇದು ಸೇರಿ ಕನಿಷ್ಠ ₹100ಯನ್ನು ಮೊತ್ತವನ್ನು ರಿಚಾರ್ಜ್ ಮಾಡಿಸಬೇಕು. ಮೆಟ್ರೊ ರೈಲಿನಲ್ಲಿ ಒಮ್ಮೆ ಪ್ರಯಾಣಿಸಲು ಕನಿಷ್ಠ ₹200 ಖರ್ಚು ಮಾಡಬೇಕಾಯಿತು’ ಎಂದು ಪ್ರಯಾಣಿಕ ಓಂಕಾರ್‌ ಅಸಮಾಧಾನ ವ್ಯಕ್ತಪಡಿಸಿದರು.

‘ಮೆಟ್ರೊ ರೈಲಿನಲ್ಲಿ ಪ್ರಯಾಣಿಸುವುದಕ್ಕಿಂತ ಕ್ಯಾಬ್‌ನಲ್ಲಿ ಹೋಗುವುದೇ ಮಿತವ್ಯಯಕಾರಿ ಎನಿಸುತ್ತದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು