ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1971ರ ಸಮರ ವೀರರಿಗೆ ಗೌರವ

ಯುದ್ಧದ ಸಾಹಸಿ ಆರ್‌.ಆರ್‌.ಸೂದ್‌ಗೆ ಸನ್ಮಾನ l ದಿ. ಜೆಪಿಎ ನೊರೊನ್ಹಾ ಸ್ಮರಣೆ
Last Updated 21 ಫೆಬ್ರುವರಿ 2021, 22:23 IST
ಅಕ್ಷರ ಗಾತ್ರ

ಬೆಂಗಳೂರು: ಪಾಕಿಸ್ತಾನದ ವಿರುದ್ಧ 1971ರಲ್ಲಿ ನಡೆದಿದ್ದ ಯುದ್ಧದಲ್ಲಿ ಸಾಹಸ ಮೆರೆದಿದ್ದ ಯೋಧರಿಗೆ ಮದ್ರಾಸ್‌ ಎಂಜಿನಿಯರ್‌ ಗ್ರೂಪ್‌ ಆ್ಯಂಡ್‌ ಸೆಂಟರ್‌ನ (ಎಂಇಜಿ) ವತಿಯಿಂದ ನಗರದಲ್ಲಿ ಭಾನುವಾರ ಗೌರವ ಸಲ್ಲಿಸಲಾಯಿತು.

ಈ ಯುದ್ಧದಲ್ಲಿ ಭಾರತ ಗೆದ್ದಿತ್ತು. ಇದರ ಸ್ವರ್ಣಿಮ ವಿಜಯ ವರ್ಷಾಚರಣೆಯ (50ನೇ ವರ್ಷಾಚರಣೆ)ಅಂಗವಾಗಿ ನವದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗಿಸಿದ್ದ ‘ವಿಜಯ ಜ್ಯೋತಿ’ ಶನಿವಾರ ಉದ್ಯಾನ ನಗರಿ ತಲುಪಿತ್ತು.

ಈ ಯುದ್ಧದ ಕಣ್ಮಣಿಯಾಗಿದ್ದ ಹಾಗೂ ರಿಯರ್‌ ಅಡ್ಮಿರಲ್‌ ಆಗಿ ನಿವೃತ್ತರಾಗಿರುವ ಆರ್‌.ಆರ್‌.ಸೂದ್‌ ಅವರ ನಿವಾಸಕ್ಕೆ ಎಂಇಜಿ ಯೋಧರ ತಂಡವು ವಿಜಯ ಜ್ಯೋತಿಯನ್ನು ಭಾನುವಾರ ಕೊಂಡೊಯ್ಯಿತು. ಸೂದ್‌ ಅವರು ಈ ಯುದ್ಧದಲ್ಲಿ ಅರಬ್ಬೀಸಮುದ್ರದ ಆ್ಯಂಟಿ ಸಬ್‌ಮೆರೀನ್‌ ದಾಳಿ ಪಡೆಯ ನೇತೃತ್ವ ವಹಿಸಿದ್ದರು. ವಿರೋಧಿಗಳ ಸಬ್‌ಮೆರೀನ್ ಮೇಲೆ ಭೀಕರ ದಾಳಿ ನಡೆಸಿದ್ದರು. ಭಾರತದ ಹಡಗುಗಳ ಮೇಲೆ ದಾಳಿ ಮಾಡದಂತೆ ಎದುರಾಳಿಗಳ ಸದ್ದಡಗಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಯುದ್ಧವೀರ ಸೂದ್‌ ಅವರನ್ನು ಶಾಂತಿನಗರ ಕ್ಷೇತ್ರದ ಶಾಸಕ ಎನ್‌.ಎ.ಹ್ಯಾರಿಸ್‌ ಅವರು ಸನ್ಮಾನಿಸಿದರು.

ನಂತರ ಈ ಜ್ಯೋತಿ ಯಾತ್ರೆಯು ದಿವಂಗತ ಜೆಪಿಎ ನೊರೊನ್ಹಾ ಅವರ ನಿವಾಸದತ್ತ ತೆರಳಿತು. ನೊರೊನ್ಹಾ ಅವರು 1971ರ ಯುದ್ಧದಲ್ಲಿ ಭಾರತೀಯ ನೌಕಾ ಪಡೆಯ ‘ಐಎನ್‌ಎಸ್‌ ಪನ್ವೇಲ್‌’ ಯುದ್ಧ ನೌಕೆಯ ಕಮಾಂಡರ್‌ ಆಗಿ ಕಾರ್ಯನಿರ್ವಹಿಸಿದ್ದರು. ಅವರ ನೇತೃತ್ವದಲ್ಲಿ ಭಾರತೀಯ ಹಡಗು ಮೋಂಗ್ಲಾ ಮತ್ತು ಖುಲ್ನ ಪ್ರದೇಶಗಳಲ್ಲಿ 1971ರ ಡಿ.8ರಿಂದ 11ರವರೆಗೆ ಸತತವಾಗಿ ದಾಳಿ ನಡೆಸಿತ್ತು. ಸತತವಾಗಿ ನಡೆಯುತ್ತಿದ್ದ ವಾಯು ದಾಳಿಯನ್ನೂ ಲೆಕ್ಕಿಸದೆ ಹಡಗನ್ನು ಮುನ್ನಡೆಸಿದ್ದರಲ್ಲದೇ, ಎದುರಾಳಿಯ ಕರಾವಳಿ ರಕ್ಷಣಾ ಪಡೆಯ ದಾಳಿಯನ್ನು ಹಿಮ್ಮೆಟ್ಟಿಸಿದ್ದರು. ನಿರ್ಬಂಧಿತ ಪ್ರದೇಶಗಳಿಗೂ ಹಡಗನ್ನು ನುಗ್ಗಿಸಿ ವಿರೋಧಿಗಳಿಗೆ ಭಾರಿ ಹಾನಿಯನ್ನು ಉಂಟುಮಾಡುವಲ್ಲಿ ನೊರೊನ್ಹಾ ಯಶಸ್ವಿಯಾಗಿದ್ದರು. ರವಿ ವಿಕ್ಟರ್‌ ಅವರು ನೊರೊನ್ಹಾ ಅವರ ಪತ್ನಿ ಟಿಬಿಎಂ ನೊರೊನ್ಹಾ ಅವರಿಗೆ ವಿಜಯ ಜ್ಯೋತಿಯನ್ನು ಹಸ್ತಾಂತರಿಸುವ ಮೂಲಕ ಗೌರವಿಸಿದರು.

ಎಂಇಜಿ ಯೋಧರು ಈ ಇಬ್ಬರೂ ಯುದ್ಧ ಸಾಹಸಿಗಳ ಮನೆಗಳಿಂದ ಹಿಡಿ ಮಣ್ಣು ಸಂಗ್ರಹಿಸಿದರು. ಇದನ್ನು ನವದೆಹಲಿಯಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಗಿಡ ನೆಡಲು ಬಳಸಲಾಗುತ್ತದೆ.

‘ವಿಜಯ ಜ್ಯೋತಿ’ ಕಾರ್ಯಕ್ರಮದ ಅಂಗವಾಗಿ ಎಂಇಜಿ ಸಂಸ್ಥೆಯು ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆಯನ್ನೂ ಆಯೋಜಿಸಿತ್ತು. ಇದರಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT