ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎನ್‌ಎಎಲ್‌ನಿಂದ ‘ಹಂಸ–ಎನ್‌ಜಿ’ ಯಶಸ್ವಿ ವಿನ್ಯಾಸ: ವಿಮಾನಕ್ಕೆ ಚಾಲನೆ ನೀಡಿದ ಧನಕರ್

Published 27 ಮೇ 2024, 16:24 IST
Last Updated 27 ಮೇ 2024, 16:24 IST
ಅಕ್ಷರ ಗಾತ್ರ

ಬೆಂಗಳೂರು: ಮಳೆಗಾಲದಲ್ಲಿಯೂ ತಡೆಯಿಲ್ಲದೇ ಹಾರಬಲ್ಲ ಹಂಸ–ಎನ್‌ಜಿ (ನೆಕ್ಸ್ಟ್‌ ಜನರೇಶನ್‌) ಪುಟ್ಟ ವಿಮಾನವನ್ನು ಎನ್‌ಎಎಲ್‌ (ನ್ಯಾಷನಲ್‌ ಏರೋಸ್ಪೇಸ್‌ ಲ್ಯಾಬೊರೇಟರಿ) ವಿನ್ಯಾಸಗೊಳಿಸಿದೆ.

ಎರಡು ಆಸನಗಳನ್ನು ಹೊಂದಿರುವ ಗಾಜಿನ ಕಾಕ್‌ಪಿಟ್‌, ಬಬಲ್‌ ಮೇಲಾವರಣ ಮತ್ತು ಕಡಿಮೆ ಇಂಧನ ಬಳಕೆಯಾಗುವ ಎಂಜಿನ್‌ ಹೊಂದಿರುವ ‘ಹಂಸ–ಎನ್‌ಜಿ’ಯನ್ನು ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಸೋಮವಾರ ಅನಾವರಣಗೊಳಿಸಿದರು.

ಭಾರತದ ಹವಾಮಾನಕ್ಕೆ ಸೂಕ್ತವಾಗಿರುವ ಈ ವಿಮಾನವು ಭಾರತೀಯ ಫ್ಲಯಿಂಗ್ ಕ್ಲಬ್‌ಗಳ ಹಾರಾಟಕ್ಕೆ ಹೇಳಿ ಮಾಡಿಸಿದಂತಿದೆ. ಏರ್‌ಫೀಲ್ಡ್‌ನಿಂದ ಪಕ್ಷಿನೋಟ, ಕೆಡೆಟ್‌ ತರಬೇತಿ, ಕರಾವಳಿ ಕಣ್ಗಾವಲಿಗೂ ಬಳಕೆ ಮಾಡಬಹುದಾದ ‘ಹಂಸ–ಎನ್‌ಜಿ’ ಹವ್ಯಾಸಿ ಹಾರಾಟಗಾರರಿಗೂ ಉಪಯೋಗವಾಗಲಿದೆ.

ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಮತ್ತು ಅವರ ಪತ್ನಿ ಸುದೇಶ್‌ ಧನಕರ್‌ ಈ ವಿಮಾನದಲ್ಲಿ ಕುಳಿತು ಸಂಭ್ರಮಪಟ್ಟರು. ವಿಮಾನದ ಗುಣಲಕ್ಷಣಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಶಂಕುಸ್ಥಾಪನೆ: ವಾತಾವರಣದಲ್ಲಿನ ಉಷ್ಣತೆಯನ್ನು ತಡೆದುಕೊಳ್ಳುವ ಕಾರ್ಬನ್‌ ಫೈಬರ್‌ ಮತ್ತು ಪ್ರಿಪೆಗ್ಸ್‌ ತಯಾರಿಕಾ ಕೇಂದ್ರಕ್ಕೆ ಉಪರಾಷ್ಟ್ರಪತಿ ಅವರು ಶಂಕುಸ್ಥಾಪನೆ ನೆರವೇರಿಸಿದರು.

ಪೈಲೆಟ್‌ ಪ್ಲಾಂಟ್‌ ಸ್ಕೇಲ್‌ಗೆ ಗುಣಮಟ್ಟದ ಕಾರ್ಬನ್‌ ಫೈಬರ್‌ ಇಲ್ಲಿ ಉತ್ಪಾದನೆಯಾಗಲಿದೆ. ಎನ್‌ಎಎಲ್‌ ಪ್ರಯೋಗಾಲಯದ ಮತ್ತೊಂದು ಮೈಲುಗಲ್ಲು ಇದು ಎಂದು ಎನ್ಎಎಲ್‌ ಅಧಿಕಾರಿಗಳು ಮಾಹಿತಿ ನೀಡಿದರು.

ಮುಖ್ಯ ಕಾರ್ಯತಂತ್ರ ಮತ್ತು ಸುರಕ್ಷಿತ ಪ್ರಾಯೋಗಿಕ ವಾಯುಬಲ ವೈಜ್ಞಾನಿಕ ದತ್ತಾಂಶವನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿರುವ ಎನ್‌ಎಎಲ್‌ನ ‘1.2ಮೀ ಟ್ರೈಸಾನಿಕ್ ವಿಂಡ್ ಟನಲ್’ಗೂ ಇದೇ ಸಂದರ್ಭದಲ್ಲಿ ಚಾಲನೆ ನೀಡಲಾಯಿತು. ಸಿಎಸ್‌ಐಆರ್‌–ಎನ್‌ಎಎಲ್‌ ವಿಜ್ಞಾನಿಗಳು ತಯಾರಿಸಿದ 1.2 ಮೀ ಟ್ರೈಸಾನಿಕ್ ವಿಂಡ್ ಟನಲ್ ಸಿಎಸ್‌ಐಆರ್‌, ಡಿಆರ್‌ಡಿಒ, ಎಚ್‌ಎಎಲ್‌, ಇಸ್ರೊಗಳ ವೈಮಾನಿಕ ಕಾರ್ಯಕ್ರಮಕ್ಕೆ ಇದು ಪೂರಕವಾಗಲಿದೆ.

ರಾಜ್ಯಪಾಲ ಥಾವರಚಂದ್‌ ಗೆಹಲೋತ್, ಎನ್‌ಎಎಲ್‌ ನಿರ್ದೇಶಕಿ ಕಲೈಸೆಲ್ವಿ, ಎನ್‌ಎಎಲ್‌ ವಿಜ್ಞಾನಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

ಭಾರತದ ಅಭಿವೃದ್ಧಿಯಲ್ಲಿ ತಂತ್ರಜ್ಞಾನದ ಪಾತ್ರ ಮಹತ್ವದ್ದು

‘ಭಾರತದ ಅಭಿವೃದ್ಧಿ ಯಾತ್ರೆಯಲ್ಲಿ ತಂತ್ರಜ್ಞಾನದ ಪಾತ್ರ ಮಹತ್ವದ್ದಾಗಿದೆ. 2047ರಲ್ಲಿ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಲು ತಂತ್ರಜ್ಞಾನ ಕಾರಣವಾಗಲಿದೆ’ ಎಂದು ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ತಿಳಿಸಿದರು. ‘ತಂತ್ರಜ್ಞರು ನೋಡಲು ಸರಳವಾಗಿ ಕಾಣುತ್ತಾರೆ. ಜಗತ್ತಿನ ಕ್ಲಿಷ್ಟಕರ ಸಮಸ್ಯೆಯನ್ನು ತಂತ್ರಜ್ಞಾನಗಳ ಸಹಾಯದಿಂದ ಸರಳಗೊಳಿಸುವವರೂ ಇವರೇ. ತಂತ್ರಜ್ಞಾನ ಉಳಿದವರಿಗೆ ಒಂದು ಸವಾಲಾದರೆ ನಿಮಗೆ ಅದುವೇ ಅವಕಾಶ’ ಎಂದು ಬಣ್ಣಿಸಿದರು. ‘ಭಾರತವು ಎಲ್ಲ ಸಾಧ್ಯತೆಗಳಿಗೆ ತೆರೆದುಕೊಂಡಿರುವ ರಾಷ್ಟ್ರ. ಹಳ್ಳಿಯ ಕಟ್ಟಕಡೆಯ ವ್ಯಕ್ತಿಗೂ ತಂತ್ರಜ್ಞಾನ ತಲುಪಬೇಕು. ಈ ನಿಟ್ಟಿನಲ್ಲಿ ನಮ್ಮ ವಿಜ್ಞಾನಿಗಳು ಕೆಲಸ ಮಾಡುತ್ತಿದ್ದಾರೆ’ ಎಂದರು. ‘ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡುತ್ತಿದೆ. ‘ಚಂದ್ರಯಾನ–3’ಯಿಂದಾಗಿ ವಿಶ್ವವೇ ಭಾರತದತ್ತ ನೋಡುವಂತಾಗಿದೆ. ಸೇನೆಯಲ್ಲಿಯೂ ನಮ್ಮ ತಂತ್ರಜ್ಞಾನ ಅತ್ಯಾಧುನಿಕವಾಗಿ ಬಳಕೆಯಾಗುತ್ತಿದೆ’ ಎಂದು ಅವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT