ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೆಫ್ರೊ ಯುರಾಲಾಜಿ: ಶಸ್ತ್ರಚಿಕಿತ್ಸೆಗೆ ಬರಲಿದೆ ರೊಬೊಟ್

ಸುಲಭ, ನಿಖರ ಶಸ್ತ್ರಚಿಕಿತ್ಸೆಗೆ ಸಹಕಾರಿ: ₹ 20 ಕೋಟಿ ವೆಚ್ಚದಲ್ಲಿ ಅಳವಡಿಕೆಗೆ ಕ್ರಮ
Published 31 ಮೇ 2024, 23:45 IST
Last Updated 31 ಮೇ 2024, 23:45 IST
ಅಕ್ಷರ ಗಾತ್ರ

ಬೆಂಗಳೂರು: ಮೂತ್ರಪಿಂಡ ಹಾಗೂ ಮೂತ್ರಕೋಶ ಸಮಸ್ಯೆಗೆ ಒಳಗಾದವರಿಗೆ ಶಸ್ತ್ರಚಿಕಿತ್ಸೆ ನಡೆಸಲು ಇಲ್ಲಿನ ನೆಫ್ರೊ–ಯುರಾಲಾಜಿ ಸಂಸ್ಥೆಗೆ ಶೀಘ್ರದಲ್ಲಿಯೇ ಅತ್ಯಾಧುನಿಕ ರೊಬೊಟಿಕ್ ಯಂತ್ರ ಸೇರ್ಪಡೆಯಾಗಲಿದೆ. ಇದರಿಂದ ಸುಲಭ ಮತ್ತು ನಿಖರ ಶಸ್ತ್ರಚಿಕಿತ್ಸೆ ಸಾಧ್ಯವಾಗಲಿದೆ.  

ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿರುವ ಈ ಸ್ವಾಯತ್ತ ಸಂಸ್ಥೆಗೆ, ರಾಜ್ಯದ ವಿವಿಧೆಡೆಯ ಜತೆಗೆ ನೆರೆಯ ರಾಜ್ಯಗಳಿಂದಲೂ ರೋಗಿಗಳು ಬರುತ್ತಾರೆ. ಮೂತ್ರಪಿಂಡ ಮತ್ತು ಮೂತ್ರಕೋಶ ಸಮಸ್ಯೆಗಳಿಗೆ ಸಂಬಂಧಿಸಿದ ತೃತೀಯ ಹಂತದ ಚಿಕಿತ್ಸೆಗೆ ಶಿಫಾರಸು ಆಧಾರದಲ್ಲಿಯೂ ವಿವಿಧ ಆಸ್ಪತ್ರೆಗಳಿಂದ ಬಂದು ದಾಖಲಾಗುತ್ತಾರೆ. ಆದ್ದರಿಂದ ಶಸ್ತ್ರಚಿಕಿತ್ಸೆ ಸುಲಭವಾಗಿಸಲು ರೊಬೊಟ್ ಯಂತ್ರವನ್ನು ಸರ್ಕಾರವು ಸಂಸ್ಥೆಯಲ್ಲಿ ಅಳವಡಿಸುತ್ತಿದೆ. ಇದಕ್ಕೆ ₹ 20 ಕೋಟಿ ವೆಚ್ಚವಾಗಲಿದ್ದು, ಚುನಾವಣೆ ನೀತಿ ಸಂಹಿತೆ ಅಂತ್ಯವಾದ ಬಳಿಕ ಟೆಂಡರ್ ಪ್ರಕ್ರಿಯೆ ನಡೆಯಲಿದೆ. 

ಮಧುಮೇಹ, ಅಧಿಕ ರಕ್ತದೊತ್ತಡ, ನೋವು ನಿವಾರಕ ಮಾತ್ರೆಗಳ ಸೇವನೆ ಸೇರಿ ವಿವಿಧ ಕಾರಣಗಳಿಂದ ಮೂತ್ರಪಿಂಡ ವೈಫಲ್ಯ ಮತ್ತು ಮೂತ್ರಕೋಶ ಈ ಸಮಸ್ಯೆಗೆ ಒಳಗಾಗುವವರ ಸಂಖ್ಯೆ ಹೆಚ್ಚಳವಾಗಿದೆ. ಇದರಿಂದಾಗಿ ಸಂಸ್ಥೆ ಬರುವ ರೋಗಿಗಳ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಕಳೆದ ಐದು ವರ್ಷಗಳಲ್ಲಿ 4.21 ಲಕ್ಷ ಮಂದಿ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಅವಧಿಯಲ್ಲಿ 42 ಸಾವಿರಕ್ಕೂ ಅಧಿಕ ಮಂದಿಗೆ ಶಸ್ತ್ರಚಿಕಿತ್ಸೆ ಹಾಗೂ 125 ಮಂದಿಗೆ ಮೂತ್ರಪಿಂಡ ಕಸಿ ಮಾಡಲಾಗಿದೆ.

ಹಾಲಿ ಘಟಕದಲ್ಲೇ ಅಳವಡಿಕೆ: ಸಂಸ್ಥೆಯು 160 ಹಾಸಿಗೆಗಳನ್ನು ಹೊಂದಿದ್ದು, ಆಧುನಿಕ ಅರಿವಳಿಕೆ ಉಪಕರಣಗಳನ್ನು ಒಳಗೊಂಡ ನಾಲ್ಕು ದೊಡ್ಡ ಶಸ್ತ್ರಚಿಕಿತ್ಸೆ ಕೊಠಡಿ ಹಾಗೂ ಒಂದು ಚಿಕ್ಕ ಶಸ್ತ್ರಚಿಕಿತ್ಸೆ ಕೊಠಡಿಯನ್ನು ಹೊಂದಿದೆ. ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗಾಗಿ ‘ಎಂಡೊ ಯುರೊಲಜಿಕಲ್’ ಉಪಕರಣ ಹಾಗೂ ‘ಸಿ-ಆರ್ಮ್’ ಯಂತ್ರಗಳನ್ನು ಒಳಗೊಂಡಿದೆ. ಇದೇ ಘಟಕದಲ್ಲಿ ರೊಬೊಟಿಕ್ ಯಂತ್ರವನ್ನೂ ಅಳವಡಿಸಿ, ಕಾರ್ಯಾಚರಣೆ ಮಾಡಲಾಗುತ್ತದೆ. 

‘ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಗಿಂತ ರೊಬೊಟಿಕ್ ಶಸ್ತ್ರಚಿಕಿತ್ಸೆ ಹೆಚ್ಚು ನಿಖರ ಹಾಗೂ ಪರಿಣಾಮಕಾರಿ. ವ್ಯಕ್ತಿ ಕೂಡ ಬೇಗ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಆಸ್ಪತ್ರೆಯ ಅವಧಿಯೂ ಕಡಿತವಾಗಲಿದೆ’ ಎಂದು ಸಂಸ್ಥೆಯ ನಿರ್ದೇಶಕ ಡಾ. ಕೇಶವಮೂರ್ತಿ ಆರ್. ವಿವರಿಸಿದರು. ‌

‘ಕಾರ್ಯಾಚರಣೆ ಬಗ್ಗೆ ತರಬೇತಿ’

‘ರೊಬೊಟಿಕ್ ಯಂತ್ರದಿಂದಾಗಿ ಶಸ್ತ್ರಚಿಕಿತ್ಸೆ ಸುಲಭವಾಗಲಿದೆ. ಒಬ್ಬ ವೈದ್ಯರು ಯಂತ್ರದ ಕಾರ್ಯಾಚರಣೆ ಮಾಡಿದರೆ ಇನ್ನೊಬ್ಬ ಸಹಾಯಕರು ಇರುತ್ತಾರೆ. ಅಮೆರಿಕ ಇಂಗ್ಲೆಂಡ್ ಸೇರಿ ಬೇರೆ ದೇಶಗಳ ಕಂಪನಿಗಳು ಈ ಯಂತ್ರವನ್ನು ಪೂರೈಸುತ್ತಿವೆ. ಯಂತ್ರ ಖರೀದಿಗೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ ಬಳಿಕ ಪೂರೈಕೆದಾರರು ಯಂತ್ರದ ನಿರ್ವಹಣೆ ಹಾಗೂ ಕಾರ್ಯಾಚರಣೆ ಬಗ್ಗೆ ವೈದ್ಯರಿಗೆ ವಿಶೇಷ ತರಬೇತಿಯನ್ನು ಒದಗಿಸುತ್ತಾರೆ. ಬಳಿಕ ಈ ಯಂತ್ರದಿಂದ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ’ ಎಂದು ಡಾ. ಕೇಶವಮೂರ್ತಿ ಆರ್. ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT