ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗದಿನ ವಿಶೇಷ | ಕಿರಿಯ ಯೋಗ ಸಾಧಕನಿಗೆ ಸಮಾಜ ಸೇವೆಯ ಕನಸು

Last Updated 21 ಜೂನ್ 2020, 7:22 IST
ಅಕ್ಷರ ಗಾತ್ರ

ವಯಸ್ಸು 14. ದೇಶದಯಂಗೆಸ್ಟ್‌ ಯೋಗ ಚಾಂಪಿಯನ್‌ ಎಂಬ ಗಿನ್ನೆಸ್‌ ದಾಖಲೆ ಮಾಡಿರುವ ಈ ಬಾಲಕ ಅರ್ಜೆಂಟೀನಾ, ಇರಾಕ್, ಚೀನಾ, ಥಾಯ್ಲೆಂಡ್ ಸೇರಿ ಎಂಟು ರಾಷ್ಟ್ರಗಳಲ್ಲಿ ಯೋಗ ಪ್ರದರ್ಶಿಸಿದ್ದಾನೆ. 8 ಚಿನ್ನದ ಪದಕ, 134 ಪ್ರಮಾಣಪತ್ರ, 90 ಪದಕಗಳು ಹಾಗೂ 70ಕ್ಕೂ ಹೆಚ್ಚು ಟ್ರೋಫಿಗಳು ಈತನ ಯೋಗ ಕ್ಷೇತ್ರದ ಸಾಧನೆಗೆ ಸಾಕ್ಷಿಗಳು.

ಹೀಗೆ ಕಿರಿಯ ವಯಸ್ಸಿನಲ್ಲೇ ಯೋಗದಲ್ಲಿ ಇಷ್ಟೆಲ್ಲ ಸಾಧನೆ ಮಾಡಿರುವ ಯುವಕನ ಹೆಸರು ಯಶವಂತ್. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ನಿವಾಸಿ ಯಶವಂತ್‌, ಶಾಲೆ ಹಾಗೂ ಗೆಳೆಯರ ಬಳಗದಲ್ಲಿ ‘ಯೋಗಯಶವಂತ್‘‌ ಎಂದೇ ಪರಿಚಯ. ಈತ ಐದು ವರ್ಷದವನಿದ್ದಾಗಲೇ ಎಲೆಕ್ಟ್ರಾನಿಕ್‌ ಸಿಟಿಯಲ್ಲಿರುವ ಸರಸ್ವತಿ ಯೋಗ ಕೇಂದ್ರದಲ್ಲಿ ಯೋಗ ಕಲಿಯಲು ಆರಂಭಿಸಿ. ಗುರು ಪುರುಷೋತ್ತಮ ದೇರಾಜೆ. ಯಶವಂತನ ಯೋಗದ ಮೇಲಿನ ಅಪರಿಮಿತ ಆಸಕ್ತಿ, ಪ್ರೀತಿ ಆತನನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ತಲುಪುವಂತೆ ಮಾಡಿದೆ.

ಗಿನ್ನೆಸ್‌ ರೆಕಾರ್ಡ್‌ ಸೇರ್ಪಡೆ

ಯಶವಂತ್, ಬೇಸಿಕ್‌, ಅಡ್ವಾನ್ಸ್ಡ್‌ ಎಲ್ಲಾ ಕೋರ್ಸ್‌ಗಳನ್ನು ಕಲಿತಿದ್ದಾನೆ. ಕಷ್ಟಕರವಾಗಿರುವಗಂಡಭೇರುಂಡ, ಜಲನೇತಿ, ನವಲಿ ಕ್ರಿಯೆಯಂತಹ ಯೋಗಸನವನ್ನೂ ಯಶವಂತ ಸಲೀಸಾಗಿ ಮಾಡಬಲ್ಲ.

2018ರಲ್ಲಿ, ಭಾರತದ ಅತಿ ಕಿರಿಯ ಯೋಗ ಚಾಂಪಿಯನ್ ಎಂದುಯಶವಂತನ ಹೆಸರು ಗಿನ್ನೆಸ್‌ ಪುಸ್ತಕದಲ್ಲೂ ದಾಖಲಾಗಿದೆ.ಚೆನ್ನೈನಲ್ಲಿ ನಡೆದ ಯೋಗ ಪ್ರದರ್ಶನದಲ್ಲಿ ದೀರ್ಘಕಾಲ ಉಸಿರು ಬಿಗಿ ಹಿಡಿದು ಮಾಡುವ ಯೋಗಾಸನವನ್ನು ಮಾಡಿ ದಾಖಲೆ ಮಾಡಿದ್ದಾರೆ.

ಡಾ. ರಾಜ್‌ ಪ್ರೇರಣೆ

ಯಶವಂತ್‌ ಯೋಗ ಸಾಧನೆಗೆ ಡಾ. ರಾಜ್‌ಕುಮಾರ್‌ ಪ್ರೇರಣೆಯಂತೆ. ಅವರ ‘ಕಾಮನಬಿಲ್ಲು’ ಸಿನಿಮಾ ನೋಡಿ ನವೇಲಿ ಕ್ರಿಯೆ, ಜಲನೇತಿ ಯೋಗವನ್ನು ಸ್ವತಃ ಕಲಿತುಕೊಂಡಿದ್ದಾನೆ.

ತಾನು ಕಲಿತ ವಿದ್ಯೆಯನ್ನು ಇತರರಿಗೂ ಹೇಳಿಕೊಡಬೇಕು ಎಂಬುದು ಯಶವಂತ ಉದ್ದೇಶವಾಗಿದ್ದರಿಂದ ರಜಾದಿನಗಳಲ್ಲಿ ತಮ್ಮ ಮನೆ ಪರಿಸರದಲ್ಲಿರುವ 4 ರಿಂದ 5 ಸರ್ಕಾರಿ ಶಾಲೆಗಳಿಗೆ ತೆರಳಿ ಅಲ್ಲಿನ ಮಕ್ಕಳಿಗೆ ಯೋಗಾಸನ ಹೇಳಿಕೊಟ್ಟು ಯೋಗದ ಮಹತ್ವವನ್ನು ತಿಳಿಸುವ ಕೆಲಸ ಮಾಡುತ್ತಿದ್ದಾನೆ. ಅನಾಥಾಶ್ರಮ, ವೃದ್ಧಾಶ್ರಮಗಳಲ್ಲೂ ಯೋಗ ಪ್ರದರ್ಶನ ನೀಡಿದ್ದಾನೆ. ವರ್ಷಕ್ಕೆ ಮೂರು– ನಾಲ್ಕು ಬಾರಿ ಕಿದ್ವಾಯಿಯಂತಹ ಆಸ್ಪತ್ರೆಗಳಲ್ಲೂ ಯೋಗ ಪ್ರದರ್ಶನಗಳನ್ನು ನೀಡುತ್ತಾನೆ.

ಪ್ರಶಸ್ತಿ ಹಣ ಸಾಮಾಜಿಕ ಸೇವೆಗೆ

ಯಶವಂತನ ಯೋಗ ಸಾಧನೆಗೆ, ‘ಭಾರತ ರತ್ನ ಅಟಲ್‌ ಬಿಹಾರಿ ಸೇವಾರತ್ನ ಪ್ರಶಸ್ತಿ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ, ತ್ರಿವೇಣಿ ಸಂಗಮ ಸಂಸ್ಥೆಯಿಂದ ಅಭಿನಂದನ್‌ ವರ್ತಮಾನ್‌ ಪ್ರಶಸ್ತಿ ಪುರಸ್ಕಾರ’ ಸೇರಿದಂತೆ ಹಲವು ಪ್ರಶಸ್ತಿ– ಸಮ್ಮಾನಗಳು ದೊರೆತಿವೆ.

ಪ್ರಶಸ್ತಿಗಳಿಂದ ಬಂದ ಹಣವನ್ನು ತನ್ನ ಸ್ವಂತಕ್ಕಾಗಿ ಯಶವಂತ್‌ ಬಳಸಿಕೊಂಡಿಲ್ಲ. ‘ನಾಡಪ್ರಭು ಕೆಂಪೇಗೌಡ ಪ್ರಶಸ್ತಿಯಲ್ಲಿ ₹15 ಸಾವಿರ ಪ್ರಶಸ್ತಿ ಮೊತ್ತ ಇತ್ತು. ಅದನ್ನು ಪಿಎಂ ಕೇರ್‌ಗೆ ದೇಣಿಗೆ ನೀಡಿದ್ದಾನೆ. ಅದಕ್ಕಿಂತ ಮೊದಲು ಸಿಕ್ಕಿದ ಪ್ರಶಸ್ತಿ ಮೊತ್ತಗಳನ್ನು ನೆರೆ ಸಂತ್ರಸ್ತರಿಗೆ ನೀಡಿದ್ದಾನೆ’ ಎಂದರು ಯಶವಂತ್‌ ಅಮ್ಮ ಚೈತ್ರಾ ರೆಡ್ಡಿ.

ಲಾಕ್‌ಡೌನ್‌ ಅವಧಿಯಲ್ಲಿ ಆನ್‌ಲೈನ್ ಯೋಗ

ಲಾಕ್‌ಡೌನ್‌ ಅವಧಿಯನ್ನು ಸದುಪಯೋಗ ಮಾಡಿಕೊಂಡ ಯಶವಂತ್‌, ಫೇಸ್‌ಬುಕ್‌ ಲೈವ್‌ ಮೂಲಕ ಯೋಗ ಹೇಳಿಕೊಡುವ ಕೆಲಸ ಮಾಡುತ್ತಿದ್ದಾನೆ. ಮನೆಯಲ್ಲೇ ಕುಳಿತು ಮಾಡಬಹುದಾದ, ಸರಳ ಆಸನಗಳನ್ನು ಹೇಳಿಕೊಡುತ್ತಿದ್ದಾನೆ. ಕಳೆದ ಮೂರು ತಿಂಗಳಿನಿಂದ ಪ್ರತಿದಿನ ಸಂಜೆ 1 ಗಂಟೆ ಆನ್‌ಲೈನ್‌ ತರಗತಿ ನಡೆಸುತ್ತಿದ್ದಾನೆ.

ಮುಂದಿನ ಯೋಜನೆ ಏನು ಎಂದು ಯಶವಂತನನ್ನು ಕೇಳಿದರೆ,‘ನನಗೆ, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ, ಅವರ ಮುಂದೆ ಯೋಗ ಪ್ರದರ್ಶನ ಮಾಡಬೇಕೆಂಬ ಬಯಕೆ ಇದೆ‘ ಎನ್ನುತ್ತಾನೆ. ಅದು ಅವನ ದೊಡ್ಡ ಕನಸೂ ಹೌದಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT