ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ ನೋಂದಣಿ ಕಚೇರಿಗಳಲ್ಲಿ ಅಕ್ರಮ: ಆರಂಭವಾದ ವಿಚಾರಣೆ

Last Updated 19 ಜುಲೈ 2022, 18:40 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಉಪ ನೋಂದಣಿ ಕಚೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಮಧ್ಯವರ್ತಿಗಳ ಹಾವಳಿ, ಅಕ್ರಮವಾಗಿ ದಾಖಲೆಗಳ ನೋಂದಣಿ ಕುರಿತು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ, ವಿಚಾರಣೆ ಆರಂಭಿಸಿದ್ದಾರೆ.

ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿರುವ 43 ಉಪ ನೋಂದಣಿ ಕಚೇರಿಗಳಿಗೆ ದಿಢೀರ್‌ ಭೇಟಿನೀಡಿ ತಪಾಸಣೆ ನಡೆಸಿದ್ದ ಲೋಕಾಯುಕ್ತ ಪೊಲೀಸ್‌ ವಿಭಾಗದ ಅಧಿಕಾರಿಗಳು, ಅಲ್ಲಿ ಕಂಡುಬಂದ ಸಂಗತಿಗಳ ಕುರಿತು ಲೋಕಾಯುಕ್ತರಿಗೆ ವಿಸ್ತೃತವಾದ ವರದಿ ಸಲ್ಲಿಸಿದ್ದರು. ಈ ವರದಿಯನ್ನು ಆಧರಿಸಿ ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಅಡಿಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಾಗಿದೆ.

ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತರು, ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಐದು ಜಿಲ್ಲಾ ನೋಂದಣಾಧಿಕಾರಿಗಳು, 43 ಉಪ ನೋಂದಣಾಧಿಕಾರಿಗಳು ಮತ್ತು ಕೆಲವು ನೋಂದಣಿ ಕಚೇರಿಗಳ ಸಿಬ್ಬಂದಿ ಸೇರಿದಂತೆ 51 ಮಂದಿಯನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಆರೋಪಗಳ ಕುರಿತು ಸೆಪ್ಟೆಂಬರ್‌ 6ರೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಎಲ್ಲ ಪ್ರತಿವಾದಿಗಳಿಗೂ ನೋಟಿಸ್‌ ಜಾರಿಗೊಳಿಸಲಾಗಿದೆ.

‘ಬಹುತೇಕ ಉಪ ನೋಂದಣಿ ಕಚೇರಿಗಳಲ್ಲಿ ಮಧ್ಯವರ್ತಿಗಳು ಹಾಜರಿದ್ದರು. ಅವರು ಅಲ್ಲಿ ಏಕೆ ಇದ್ದರು ಎಂಬ ಪ್ರಶ್ನೆಗೆ ಅಧಿಕಾರಿಗಳಿಂದ ಸಮಂಜಸವಾದ ಉತ್ತರ ದೊರಕಿಲ್ಲ. ಹಲವು ಕಚೇರಿಗಳಲ್ಲಿ ಮಧ್ಯವರ್ತಿಗಳ ಬಳಿ ಹಲವು ದಸ್ತಾವೇಜುಗಳು ಪತ್ತೆಯಾಗಿವೆ. ಮಾದನಾಯಕನಹಳ್ಳಿ, ಶ್ರೀರಾಂಪುರ, ಲಗ್ಗೆರೆ ಸೇರಿದಂತೆ ಹಲವು ನೋಂದಣಿ ಕಚೇರಿಗಳಲ್ಲಿ ಸರಿಯಾದ ದಾಖಲೆಗಳಿಲ್ಲದೆ ಕಂದಾಯ ನಿವೇಶನಗಳನ್ನು ನೋಂದಣಿ ಮಾಡುತ್ತಿರುವುದು ಪತ್ತೆಯಾಗಿದೆ’ ಎಂದು ಲೋಕಾಯುಕ್ತ ಪೊಲೀಸರು ವರದಿಯಲ್ಲಿ ತಿಳಿಸಿದ್ದರು.

‘ಹೆಚ್ಚಿನ ಕಚೇರಿಗಳಲ್ಲಿ ಹಾಜರಾತಿ ವಹಿ ನಿರ್ವಹಿಸುತ್ತಿಲ್ಲ. ನಗದು ಘೋಷಣಾ ಕಡತದಲ್ಲಿ ಕಾಟಾಚಾರಕ್ಕೆ ದಾಖಲಿಸಲಾಗುತ್ತಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವ ಮತ್ತು ನಿರ್ಗಮಿಸುವ ಕುರಿತು ನಿಗಾ ಇಡುವ ವ್ಯವಸ್ಥೆಯೇ ಇಲ್ಲ. ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿಲ್ಲ. ದಲ್ಲಾಳಿಗಳು ಏಕಕಾಲಕ್ಕೆ ಹಲವು ಕಡತಗಳನ್ನು ತಂದು ನೋಂದಣಿ ಮಾಡಿಸುತ್ತಿರುವುದು ಕಂಡುಬಂದಿದೆ’ ಎಂದು ವರದಿಯಲ್ಲಿ
ಉಲ್ಲೇಖಿಸಲಾಗಿತ್ತು.

ಅರ್ಜಿದಾರರ ಬದಲಿಗೆ ದಲ್ಲಾಳಿಗಳೇ ದಸ್ತಾವೇಜುಗಳನ್ನು ನೋಂದಣಿ ಮಾಡುತ್ತಿರುವ ಹಲವು ಪ್ರಕರಣಗಳು ಪತ್ತೆಯಾಗಿವೆ. ನೋಂದಣಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆ ಯುವ ಕೆಲಸವನ್ನೂ ದಲ್ಲಾಳಿಗಳ ಮೂಲಕವೇ ನಿರ್ವಹಿಸುತ್ತಿರುವುದು ಕಂಡುಬಂದಿದೆ. ಸಾಮಾನ್ಯ ಜನರಿಗೆ ಈ ಕಚೇರಿಗಳಲ್ಲಿ ಸುಲಭವಾಗಿ ಸರ್ಕಾರಿ ಸೇವೆ ದೊರಕುತ್ತಿಲ್ಲ ಎಂದು ಪೊಲೀಸ್‌ ಅಧಿಕಾರಿಗಳು ವರದಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT