ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭೋವಿ ನಿಗಮದ ಅಕ್ರಮ: ಮಹತ್ವದ ದಾಖಲೆ ಜಪ್ತಿ ಮಾಡಿದ ಸಿಐಡಿ

20ಕ್ಕೂ ಹೆಚ್ಚು ಮಧ್ಯವರ್ತಿಗಳಿಗೆ ಹುಡುಕಾಟ
Published 14 ಆಗಸ್ಟ್ 2024, 15:23 IST
Last Updated 14 ಆಗಸ್ಟ್ 2024, 15:23 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅಕ್ರಮ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ, ಹಲವು ಕಚೇರಿಗಳು ಹಾಗೂ ಆರೋಪಿಗಳು ಅವ್ಯವಹಾರ ನಡೆಸಿದ್ದಾರೆ ಎನ್ನಲಾದ ಸ್ಥಳಗಳಲ್ಲಿ ಬುಧವಾರವೂ ಶೋಧ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದೆ.

ನಗರದ ವಿ.ವಿ. ಟವರ್‌ ಬಳಿಯಿರುವ ನಿಗಮದ ಪ್ರಧಾನ ಕಚೇರಿಯಲ್ಲಿ ಮಂಗಳವಾರ ಸಂಜೆ ಶೋಧ ನಡೆಸಿದ್ದ ತನಿಖಾಧಿಕಾರಿಗಳು, ಮೂರು ತಾಸು ಪರಿಶೀಲನೆ ನಡೆಸಿ ಕೆಲವು ದಾಖಲೆ ಪತ್ರಗಳನ್ನು ಜಪ್ತಿ ಮಾಡಿಕೊಂಡಿದ್ದರು. ಅಲ್ಲದೇ ದೇವನಹಳ್ಳಿಯಲ್ಲಿರುವ ಗ್ರಾಮಾಂತರ ಕಚೇರಿಯಲ್ಲೂ ತಪಾಸಣೆ ನಡೆಸಿ ಸಿಬ್ಬಂದಿಯ ಹೇಳಿಕೆ ದಾಖಲಿಸಿಕೊಂಡಿದ್ದರು.

ಪೆನ್‌ಡ್ರೈವ್‌, ಕಡತಗಳೇ ಪುರಾವೆ:

ಬುಧವಾರ ಬೆಳಿಗ್ಗೆಯೇ ರಾಜಾಜಿನಗರದಲ್ಲಿರುವ ಉಪ ಕಚೇರಿಯಲ್ಲಿಯೂ ಅಧಿಕಾರಿಗಳು ಶೋಧ ನಡೆಸಿ ಇಡೀ ದಿನ ದಾಖಲೆಗಳ ಪರಿಶೀಲನೆ ನಡೆಸಿದರು. ಪರಿಶೀಲನೆ ವೇಳೆ ಕೆಲವು ಪೆನ್‌ಡ್ರೈವ್‌ ಹಾಗೂ ಕಡತಗಳು ತನಿಖಾ ತಂಡಕ್ಕೆ ಲಭಿಸಿದ್ದು, ತನಿಖೆಗೆ ತಿರುವು ಸಿಕ್ಕಿದೆ ಎಂದು ಮೂಲಗಳು ಹೇಳಿವೆ.

‘ನಿಗಮದಲ್ಲಿ ಅಂದಾಜು ₹87 ಕೋಟಿ ಅವ್ಯವಹಾರ ನಡೆದಿದ್ದು, ಹಿಂದಿನ ಅಧಿಕಾರಿಗಳು ಸೇರಿದಂತೆ ಹಲವರು ಅಕ್ರಮ ನಡೆಸಿರುವುದಕ್ಕೆ ಹಲವು ಮಹತ್ವದ ಸಾಕ್ಷ್ಯಗಳು ಲಭಿಸಿವೆ. ಎಲ್ಲ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ’ ಎಂದು ತನಿಖಾಧಿಕಾರಿಯೊಬ್ಬರು ಮಾಹಿತಿ ನೀಡಿದರು.

20 ಮಂದಿಗೆ ಹುಡುಕಾಟ:

ಪ್ರಕರಣ ಸಂಬಂಧ ಮಹಾಲಕ್ಷ್ಮೀಪುರದ ಭೋವಿಪಾಳ್ಯದ ಕಚೇರಿ ಅಧೀಕ್ಷಕ ಸುಬ್ಬಪ್ಪ (2021–2022ರ ಅವಧಿ) ಎಂಬವರನ್ನು ಸಿಐಡಿ ಬಂಧಿಸಿದ್ದು, ಪ್ರಧಾನ ವ್ಯವಸ್ಥಾಪಕ ಡಾ.ಬಿ.ಕೆ.ನಾಗರಾಜಪ್ಪ ಹಾಗೂ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದ ಲೀಲಾವತಿ ಸೇರಿದಂತೆ 20 ಮಂದಿ ಮಧ್ಯರ್ತಿಗಳಿಗೆ ಹುಡುಕಾಟ ಆರಂಭಿಸಿದೆ. ನಾಲ್ಕು ಜಿಲ್ಲೆಗಳಲ್ಲಿ ಎಫ್‌ಐಆರ್ ದಾಖಲಾಗಿದ್ದು, ಬೇರೆ ಜಿಲ್ಲೆಗಳಲ್ಲೂ ತಪಾಸಣೆ ನಡೆಸಲಾಗುವುದು ಎಂದು ಸಿಐಡಿ ಮೂಲಗಳು ತಿಳಿಸಿವೆ.

ಉದ್ಯಮಶೀಲತಾ ಯೋಜನೆ ಹಾಗೂ ನೇರ ಸಾಲ ಯೋಜನೆಗಳ ಅಡಿ ಲಕ್ಷಾಂತರ ರೂಪಾಯಿ ಮೊತ್ತದ ಸಾಲ ಕೊಡಿಸುವುದಾಗಿ ಹೇಳಿ ಸಾರ್ವಜನಿಕರ ಆಧಾರ್‌ ಕಾರ್ಡ್‌ ಪಡೆದು ಪ್ರತ್ಯೇಕ ಖಾತೆ ತೆರೆದು ಅಕ್ರಮ ನಡೆಸಿರುವುದು ತನಿಖೆಯಿಂದ ಪತ್ತೆಯಾಗಿದೆ.

ಇದುವರೆಗೂ ಮುಡಾ ನಿವೇಶನ ಹಾಗೂ ವಾಲ್ಮೀಕಿ ನಿಗಮದ ಅಕ್ರಮ ಪ್ರಕರಣದಲ್ಲಿ ಸರ್ಕಾರವನ್ನು ವಿರೋಧ ಪಕ್ಷಗಳು ಇಕ್ಕಟ್ಟಿಗೆ ಸಿಲುಕಿಸಿವೆ. ಇದರ ಬೆನ್ನಲ್ಲೇ 2021–2022ರ ಬಿಜೆಪಿ ಆಡಳಿತಾವಧಿಯಲ್ಲಿ ನಡೆದಿರುವ ಅಕ್ರಮ ಪ್ರಕರಣದ ತನಿಖೆಗೆ ಕಾಂಗ್ರೆಸ್‌ ಸರ್ಕಾರ ವೇಗ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT