ಗುರುವಾರ , ನವೆಂಬರ್ 21, 2019
20 °C
ತೆರಿಗೆ ಕಡಿತ: ಜಂಟಿ ಆಯುಕ್ತ ರವೀಂದ್ರ ವಿರುದ್ಧ ಮುಗಿಬಿದ್ದ ಪಾಲಿಕೆ ಸದಸ್ಯರು

ಅಶೋಕ್‌ ತಾರಾ ಹೋಟೆಲ್‌ ಅಲ್ಲವೇ?

Published:
Updated:

ಬೆಂಗಳೂರು: ಕುಮಾರಕೃಪಾ ರಸ್ತೆ ಬಳಿಯ ಅಶೋಕ ಹೋಟೆಲ್‌ ತಾರಾ ಹೋಟೆಲ್‌ ಹೌದೋ ಅಲ್ಲವೋ?

ಈ ಹೋಟೆಲ್‌ನ ವೆಬ್‌ಸೈಟ್‌ ಪ್ರಕಾರ  ಇಂದು ಪಂಚತಾರಾ ಹೋಟೆಲ್‌. ಆದರೆ, ಪಾಲಿಕೆ ಪೂರ್ವ ವಲಯದ ಜಂಟಿ ಆಯುಕ್ತ ರವೀಂದ್ರ ಅವರ ಪ್ರಕಾರ ಅಲ್ಲ. ರವೀಂದ್ರ ಅವರು ಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ಗುರುವಾರ ನೀಡಿದ ಈ ಹೇಳಿಕೆ ಜಿಜ್ಞಾಸೆ ಹುಟ್ಟಿಸಿದೆ.

ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ಕಚೇರಿಗಳು, ಮಾಲ್‌ಗಳು ಹಾಗೂ ಇತರ ಪ್ರಮುಖ ವಾಣಿಜ್ಯ ಕಟ್ಟಡಗಳೂ ಸೇರಿದಂತೆ ಪಾಲಿಕೆಯು 100ಕ್ಕೂ ಹೆಚ್ಚು ಆಸ್ತಿಗಳ ಟೋಟಲ್‌ ಸ್ಟೇಷನ್‌ ಸರ್ವೇ ನಡೆಸಿದಾದ ಕೆಲವು ಕಟ್ಟಡಗಳು ನಿಗದಿತ ಪ್ರಮಾಣಕ್ಕಿಂತ ಕಡಿಮೆ ಆಸ್ತಿ ತೆರಿಗೆ ಕಟ್ಟುತ್ತಿರುವುದು ಕಂಡು ಬಂದಿತ್ತು. ಪೂರ್ವ ವಲಯದಲ್ಲಿರುವ ಇಂತಹ ಆಸ್ತಿಗಳಿಂದ ಬಾಕಿ ತೆರಿಗೆ ವಸೂಲಿಗೆ ಹಿಂದಿನ ಜಂಟಿ ಆಯುಕ್ತರು ನೋಟಿಸ್‌ ಜಾರಿ ಮಾಡಿದ್ದರು. ಆದರೆ, ಈ ಕಟ್ಟಡಗಳ ಮಾಲೀಕರು ಮಾಡಿಕೊಂಡ ಮನವಿ ಆಧಾರದಲ್ಲಿ ಈಗಿನ ಜಂಟಿ ಆಯುಕ್ತ ರವೀಂದ್ರ ಕೆಲವು ಕಟ್ಟಡಗಳ ಆಸ್ತಿ ತೆರಿಗೆಯನ್ನು ಕಡಿತ ಮಾಡಿದ್ದರು.

ಎಂಟು ವಾಣಿಜ್ಯ ಕಟ್ಟಡಗಳ ಆಸ್ತಿ ತೆರಿಗೆ ಕಡಿತ ಮಾಡಿದ ಬಗ್ಗೆ ಪಾಲಿಕೆ ಸಭೆಯಲ್ಲಿ ಗುರುವಾರ ಪ್ರಸ್ತಾಪಿಸಿದ ಬಿಜೆಪಿಯ ಕಾರ್ಪೊರೇಟರ್‌ ಪದ್ಮನಾಭ ರೆಡ್ಡಿ, ‘ಹಿಂದಿನ ಜಂಟಿ ಆಯುಕ್ತರು ನೋಟಿಸ್ ಜಾರಿ ಮಾಡಿದ ಕ್ರಮ ಸರಿಯೋ, ಈಗಿನ ಆಯುಕ್ತರು ತೆರಿಗೆ ಕಡಿತ ಮಾಡಿದ್ದು ಸರಿಯೋ. ಎಂಟು ಕಟ್ಟಡಗಳ ಆಸ್ತಿ ತೆರಿಗೆ ಕಡಿತದ ಆದೇಶ ಹೊರಡಿಸುವ ಮುನ್ನ ರವೀಂದ್ರ ಅವರು ಆಯುಕ್ತರ ಜೊತೆ, ಕಂದಾಯ ವಿಭಾಗದ ಜಂಟಿ ಆಯುಕ್ತರ ಜೊತೆ ಚರ್ಚಿಸಿದ್ದರೇ. ಕಾನೂನು ಕೋಶದ ಸಲಹೆ ಕೇಳಿದ್ದರೇ’ ಎಂದು ಪ್ರಶ್ನಿಸಿದರು.

ದನಿಗೂಡಿಸಿದ ಕಾಂಗ್ರೆಸ್‌ನ ಎಂ.ಕೆ.ಗುಣಶೇಖರ, ‘ತೆರಿಗೆಗೆ ಸಂಬಂಧಿಸಿದ ವ್ಯಾಜ್ಯಗಳು ನ್ಯಾಯಾಲಯದಲ್ಲೇ ತೀರ್ಮಾನವಾಗಬೇಕು. ಕೆಎಂಸಿ ಕಾಯ್ದೆ ಪ್ರಕಾರ ತೆರಿಗೆ ಕಡಿತ ಮಾಡುವ ಅಧಿಕಾರ ಜಂಟಿ ಆಯುಕ್ತರಿಗೆ ಇಲ್ಲ. ಟೋಟಲ್‌ ಸ್ಟೇಷನ್‌ ಸರ್ವೆ ನಡೆಸಿದ ಬಳಿಕ ಹಿಂದಿನ ಆಯುಕ್ತರ ಸಲಹೆ ಮೇರೆಗೆ ಈ ಬಗ್ಗೆ ನ್ಯಾಯಾಲಯಗಳಲ್ಲಿ ಕೇವಿಯಟ್‌ ಹಾಕಲಾಗಿದೆ. ಹಾಗಿದ್ದಾಗ ಜಂಟಿ ಆಯುಕ್ತರು ತೆರಿಗೆ ಕಡಿತ ಮಾಡಿದ್ದಾದರೂ ಹೇಗೆ’ ಎಂದು ಪ್ರಶ್ನಿಸಿದರು.

ಇದಕ್ಕೆ ಸಮಜಾಯಿಷಿ ನೀಡಿದ ರವೀಂದ್ರ, ‘ನಾನು ಕಾನೂನುಬದ್ಧವಾಗಿಯೇ ನಡೆದುಕೊಂಡಿದ್ದೇನೆ. ಆಸ್ತಿ ತೆರಿಗೆ ನನಿಗದಿ ವಿಚಾರದಲ್ಲಿ ತಪ್ಪಾಗಿದ್ದರೆ ಸರಿ ಪಡಿಸುವ ಅಧಿಕಾರ ಜಂಟಿ ಆಯುಕ್ತರಿಗೆ ಇದೆ. ಈ ಬಗ್ಗೆ ವಿಚಾರಣೆ ನಡೆಸಿದ ವೇಳೆ ಅಶೋಕ ಹೋಟೆಲ್‌ ಪರ ವಕೀಲರು, ತಮ್ಮದು ತಾರಾ ಹೋಟೆಲ್‌ ಅಲ್ಲದಿದ್ದರೂ ಪಂಚತಾರಾ ಹೋಟೆಲ್‌ಗೆ ವಿಧಿಸುವಷ್ಟು ತೆರಿಗೆ ನಿಗದಿಪಡಿಸಲಾಗಿದೆ. ತೆರಿಗೆ ವಿಧಿಸಲು ಅವಕಾಶ ಇಲ್ಲದ ಪ್ರದೇಶಕ್ಕೂ ತೆರಿಗೆ ವಿಧಿಸಲಾಗಿತ್ತು. ಹಾಗಾಗಿ ತೆರಿಗೆ ಪ್ರಮಾಣ ಕಡಿತಗೊಳಿಸಿ ಆದೇಶ ಮಾಡಿದ್ದೇನೆ’ ಎಂದರು.

ಇದರಿಂದ ಸಿಟ್ಟಿಗೆದ್ದ ಪಾಲಿಕೆ ಸದಸ್ಯರು ಪಕ್ಷಭೇದ ಮರೆತು ಅವರ ವಿರುದ್ಧ ಮುಗಿಬಿದ್ದರು. ‘ನಾವು ಅಭಿವೃದ್ಧಿ ಕಾಮಗಾರಿಗೆ ಹಣ ಹೊಂದಿಸಲು ಹೆಣಗಾಡುತ್ತಿದ್ದೇವೆ. ಇವರು ಈ ರೀತಿ ತೆರಿಗೆ ಕಡಿತ ಮಾಡಿದರೆ ಹೇಗೆ. 600 ಚದರ ಅಡಿ ನಿವೇಶನದಲ್ಲಿ ಮನೆ ಕಟ್ಟಿರುವವರಿಂದ ಪೈಸೆ ಲೆಕ್ಕದಲ್ಲಿ ತೆರಿಗೆ ವಸೂಲಿ ಮಾಡಲಾಗುತ್ತದೆ. ಅವರಿಗೇಕೆ ವಿನಾಯಿತಿ ನೀಡುವುದಿಲ್ಲ’ ಎಂದರು.

ತಕ್ಷಣವೇ ರವೀಂದ್ರ ಅವರನ್ನು ಅಮಾನತು ಮಾಡುವಂತೆ ಪಕ್ಷಭೇದ ಮರೆತು ಸದಸ್ಯರು ಒತ್ತಾಯಿಸಿದರು.

ಅಧಿಕಾರಿಗಳು ಕಡತಗಳನ್ನು ಸುಡುವ ಅಪಾಯವೂ ಇದೆ ಎಂದು ಕೆಲವು ಸದಸ್ಯರು ಆತಂಕ ವ್ಯಕ್ತಪಡಿಸಿದರು.

ವಿಶೇಷ ಆಯುಕ್ತರಿಂದ ತನಿಖೆ

‘ಟೋಟಲ್‌ ಸ್ಟೇಷನ್‌ ಸರ್ವೆ ಬಳಿಕ ಎಂಟು ಆಸ್ತಿಗಳ ತೆರಿಗೆ ಕಡಿತ ಮಾಡಿದ ಎಲ್ಲ ಕಡತಗಳನ್ನು ವಶಕ್ಕೆ ಪಡೆದಿದ್ದೇವೆ. ಈ ಬಗ್ಗೆ ವಿಶೇಷ ಆಯುಕ್ತ ಲೋಕೇಶ್‌ ಅವರು ಸಮಗ್ರ ತನಿಖೆ ನಡೆಸಿ ಎರಡು ದಿನಗಳಲ್ಲಿ ವರದಿ ನೀಡಲಿದ್ದಾರೆ. ಆ ವರದಿ ಆಧರಿಸಿ ರವೀಂದ್ರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ’ ಎಂದು ಪಾಲಿಕೆ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ತಿಳಿಸಿದರು.

‘ಟೋಟಲ್‌ ಸ್ಟೇಷನ್‌ ಸರ್ವೆ ಕುರಿತು ಬಂದ ಮೇಲ್ಮನವಿಗಳನ್ನು ತಿಮಗಳ ಒಳಗೆ ವಿಲೇ ಮಾಡುವಂತೆ ನಾನೇ ನಿರ್ದೇಶನ ನೀಡಿದ್ದೆ. ಹೊರವಲಯದ ಕಟ್ಟಡಗಳಿಂದ ಈ ಕುರಿತು ಅನೇಕ ದೂರುಗಳಿವೆ. ಮೇಲ್ಮನವಿ ಅರ್ಜಿಗಳ ವಿಲೇವಾರಿ ಬಗ್ಗೆ ತಂಡ ರಚಿಸಿ ಸಮಗ್ರ ತನಿಖೆ ನಡೆಸಲಾಗುತ್ತದೆ’ ಎಂದರು.

ಯಾವ ಕಟ್ಟಡಗಳ ತೆರಿಗೆ ಕಡಿತ

ಕಟ್ಟಡ; ತೆರಿಗೆ ಕಡಿತ ಪ್ರಮಾಣ (₹ ಕೋಟಿ)

ಸಸ್ ಕೆನ್ ಟೆಕ್ನಾಲಜೀಸ್ ಲಿಮಿಟೆಡ್‌; 16.82
ಹೋಟೆಲ್‌ ಅಶೋಕ, ಕುಮಾರಕೃಪಾ ರಸ್ತೆ; 9.94
ಎ.ಎಸ್.ಕೆ ಬ್ರದರ್ಸ್ ಲಿಮಿಟೆಡ್, ಪ್ಯಾಲೇಸ್ ರಸ್ತೆ; 8.39
ರಾಯಲ್ ಆರ್ಕಿಡ್ ಹೋಟೆಲ್ ಲಿಮಿಟೆಡ್, ಗಾಲ್ಫ್ ಅವೆನ್ಯೂ ರಸ್ತೆ; 6.57
ದಿ ಒಬೆರಾಯ್, ಎಂ.ಜಿ ರಸ್ತೆ; 5.04
ಶ್ರೀರಾಮ್ ಲೀಲಾ ಡೆವಲಪರ್ಸ್, ಅರಮನೆ ರೋಡ್; 2.37 .
ಈಸ್ಟ್ ವೆಸ್ಟ್ ಹೋಟೇಲ್, ರೆಸಿಡೆನ್ಸಿ ರಸ್ತೆ; 2.96
ಎಲಿಕ್ಸೈರ್ ಎಂಟರ್ ಪ್ರೈಸಸ್ ಆ್ಯಂಡ್ ಹೋಟೆಲ್; 11.18

 

ಪ್ರತಿಕ್ರಿಯಿಸಿ (+)