ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೂ ಸಾಧಿಸುತ್ತೇವೆ: ವಿಜ್ಞಾನಿಗಳ ಹರ್ಷ- ಮುಗಿಲು ಮುಟ್ಟಿದ ಸಂಭ್ರಮ

Published 23 ಆಗಸ್ಟ್ 2023, 21:41 IST
Last Updated 23 ಆಗಸ್ಟ್ 2023, 21:41 IST
ಅಕ್ಷರ ಗಾತ್ರ

ಬೆಂಗಳೂರು: ‘ನಾವು ಶ್ರೇಷ್ಠತೆ ಮೆರೆದಿದ್ದೇವೆ...’

ಚಂದ್ರನ ಅಂಗಳದಲ್ಲಿ ‘ವಿಕ್ರಮ್‌ ಲ್ಯಾಂಡರ್‌’ ಸ್ಪರ್ಶಿಸುತ್ತಿದ್ದಂತೆಯೇ ವಿಜ್ಞಾನಿಗಳು ಉದ್ಘರಿಸಿದ್ದು ಹೀಗೆ...

ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದ್ದ ಆ ಕ್ಷಣಗಣನೆ ಯಶಸ್ಸು ಸಾಧಿಸುತ್ತಿದ್ದಂತೆ ಎಲ್ಲೆಡೆ ಸಂತಸದ ಹೊನಲು ಹರಿಯಿತು.

ಭಾರತೀಯರ ಶುಭ ಹಾರೈಕೆ ಹಾಗೂ ಪ್ರಾರ್ಥನೆಯೊಂದಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಬುಧವಾರ ಸಂಜೆ 6 ಗಂಟೆ 4 ನಿಮಿಷಕ್ಕೆ ವಿಕ್ರಮನ ಪಾದಸ್ಪರ್ಶವಾಗುತ್ತಿದ್ದಂತೆ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಚಂದ್ರನ ದಕ್ಷಿಣ ಧ್ರುವ ಪ್ರವೇಶಿಸಿದ ಮೊದಲ ದೇಶವಾಗಿ ಭಾರತ ಗುರುತಿಸಿಕೊಂಡಿದ್ದಕ್ಕೆ ವಿಜ್ಞಾನಿಗಳು ಹೆಮ್ಮೆಯಿಂದ ಬೀಗಿದರು.

ನಿಗದಿತ ಕಕ್ಷೆಗೆ ಸೇರಿಸುವ ಕಾರ್ಯವನ್ನು ಪೀಣ್ಯದಲ್ಲಿರುವ ಇಸ್ರೊ ಟೆಲೆಮೆಟ್ರಿ ಟ್ರ್ಯಾಕಿಂಗ್ ಅಂಡ್‌ ಕಮಾಂಡ್ ನೆಟ್‌ವರ್ಕ್‌ (ಐಎಸ್‌ಟಿಆರ್‌ಎಸಿ) ಕೇಂದ್ರದಿಂದ ಯಶಸ್ವಿಯಾಗಿ ನಿರ್ವಹಿಸಲಾಯಿತು.

ಲ್ಯಾಂಡರ್‌ ವೇಗವನ್ನು ಕಡಿಮೆಗೊಳಿಸಿ ದಕ್ಷಿಣ ಧ್ರುವದಲ್ಲಿ ಒಂದೊಂದೇ ಹೆಜ್ಜೆ ಹಾಕಿ ಮುಂದಡಿ ಇರಿಸುತ್ತಿದ್ದಂತೆ ಕೇಂದ್ರದಲ್ಲಿ ಸೇರಿದ್ದ ವಿಜ್ಞಾನಿಗಳ ಮೊಗದಲ್ಲೂ ಮಂದಹಾಸ ಮೂಡತೊಡಗಿತ್ತು. ಅಲ್ಲಿಯವರೆಗೂ ಕಾತರ, ಕುತೂಹಲದಿಂದ ಕಾಯುತ್ತಿದ್ದ ಕಣ್ಣುಗಳಲ್ಲಿ ನಿಧಾನವಾಗಿ ನಿರಾಳಭಾವ ಕಾಣಿಸತೊಡಗಿತ್ತು. ಪ್ರತಿ ಹಂತದಲ್ಲೂ ಚಪ್ಪಾಳೆ ತಟ್ಟಿ ವಿಜ್ಞಾನಿಗಳು ಸಂಭ್ರಮಿಸಿದರು. ಲ್ಯಾಂಡರ್ ದಕ್ಷಿಣ ಧ್ರುವದಲ್ಲಿ ತನ್ನ ಪುಟ್ಟ ಹೆಜ್ಜೆ ಇರಿಸುತ್ತಿದ್ದಂತೆ ಐಎಸ್‌ಟಿಆರ್‌ಸಿ ಕೇಂದ್ರದಲ್ಲಿ ವಿಜ್ಞಾನಿಗಳು ಮತ್ತು ಸಿಬ್ಬಂದಿ ಹರ್ಷ ವ್ಯಕ್ತಪಡಿಸಿ ಜಯ ಘೋಷಗಳನ್ನು ಮೊಳಗಿಸಿದರು. 

ಇಸ್ರೊ ಅಧ್ಯಕ್ಷ ಎಸ್‌. ಸೋಮನಾಥ, ‘ನಾವು ಚಂದ್ರನ ಅಂಗಳದಲ್ಲಿ ಸಾಫ್ಟ್‌ ಲ್ಯಾಂಡಿಂಗ್‌ ಮಾಡಿದ್ದೇವೆ’ ಎಂದು ಘೋಷಿಸಿ ಸಂತಸ ವ್ಯಕ್ತಪಡಿಸಿದರು.

ವಿಜ್ಞಾನಿಗಳು ‘ಭಾರತ ಮಾತಾ ಕೀ ಜೈ, ವಂದೇ ಮಾತರಂ’ ಎಂದು ಘೋಷಣೆಗಳನ್ನು ಹಾಕಿ ಸಂಭ್ರಮಿಸಿದರು. ಸತತ ನಾಲ್ಕು ವರ್ಷಗಳಿಗೂ ಹೆಚ್ಚು ಕಾಲದ ಪರಿಶ್ರಮ ಮತ್ತು ಛಲದಿಂದ ಮುನ್ನುಗ್ಗಿ ಯಶಸ್ಸು ಸಾಧಿಸಿದ ಸಾರ್ಥಕ ಭಾವ ವಿಜ್ಞಾನಿಗಳ ಮೊಗದಲ್ಲಿ ಕಾಣಿಸುತ್ತಿತ್ತು.

ಯೋಜನೆಯ ಪ್ರಮುಖ ರೂವಾರಿಗಳಾದ ಚಂದ್ರಯಾನ ಯೋಜನಾ ನಿರ್ದೇಶಕ ಪಿ. ವೀರಮುತ್ತುವೇಲ್‌, ಸಹಾಯಕ ಯೋಜನಾ ನಿರ್ದೇಶಕಿ ಕಲ್ಪನಾ  ಹಾಗೂ ಯು.ಆರ್‌. ರಾವ್‌ ಉಪಗ್ರಹ ಕೇಂದ್ರದ ಎಂ. ಶಂಕರನ್‌ ಅವರು, ಚಂದ್ರಯಾನ–3 ಯೋಜನೆಯಲ್ಲಿ ಯಶಸ್ಸಿಗೆ ಅಹೋರಾತ್ರಿ ಶ್ರಮಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT