ದಂಡ ಕಟ್ತೀವಿ; ಮಳೆ ನೀರು ಸಂಗ್ರಹಿಸಲ್ಲ!

7
ಮಳೆ ನೀರು ಸಂಗ್ರಹ ಕಡ್ಡಾಯ ನಿಯಮಕ್ಕೆ ಕಿಮ್ಮತ್ತು ನೀಡದ ಸಾರ್ವಜನಿಕರು

ದಂಡ ಕಟ್ತೀವಿ; ಮಳೆ ನೀರು ಸಂಗ್ರಹಿಸಲ್ಲ!

Published:
Updated:

ಬೆಂಗಳೂರು: ನಗರದಲ್ಲಿ 2,400 ಚದರ ಅಡಿ ನಿವೇಶನದಲ್ಲಿ ನಿರ್ಮಿಸಲಾದ ಹಳೆಯ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಮಾಡುವುದನ್ನು ಕಡ್ಡಾಯಗೊಳಿಸಿ ಜಲಮಂಡಳಿ 2009ರಲ್ಲೇ ಆದೇಶ ಹೊರಡಿಸಿದ್ದರೂ 80 ಸಾವಿರ ಕಟ್ಟಡಗಳು ಇನ್ನೂ ಈ ವ್ಯವಸ್ಥೆಯಿಂದ ದೂರವೇ ಉಳಿದಿವೆ!

ಜಲಮಂಡಳಿ ನಡೆಸಿದ ಸಮೀಕ್ಷೆ ಪ್ರಕಾರ, ನಗರದಲ್ಲಿ 1.76 ಲಕ್ಷ ಕಟ್ಟಡಗಳು ಮಳೆ ನೀರು ಸಂಗ್ರಹದ ವ್ಯವಸ್ಥೆ ಮಾಡಿಕೊಳ್ಳಬೇಕಿತ್ತು. ಅದರಲ್ಲಿ ಇದುವರೆಗೆ 96 ಸಾವಿರ ಕಟ್ಟಡಗಳು ಮಾತ್ರ ಈ ವ್ಯವಸ್ಥೆ ಮಾಡಿಕೊಂಡಿವೆ.

ದಂಡ ಪಾವತಿ ಮಾಡುತ್ತಿದ್ದರೂ ಮಳೆ ನೀರು ಸಂಗ್ರಹಿಸುವ ವ್ಯವಸ್ಥೆಯನ್ನು ಅಳವಡಿಸಲು ಕಟ್ಟಡಗಳ ಮಾಲೀಕರು ತಯಾರಿಲ್ಲ ಎನ್ನುವುದು ಜಲಮಂಡಳಿ ಅಧಿಕಾರಿಗಳ ದೂರು. ನಗರದ ಜನರಲ್ಲಿ ಈ ಕುರಿತು ಜಾಗೃತಿ ಇಲ್ಲದ ಕಾರಣ ಪ್ರತಿವರ್ಷ 23 ಟಿಎಂಸಿ ಅಡಿಯಷ್ಟು ಶುದ್ಧವಾದ ಮಳೆ ನೀರು ವ್ಯರ್ಥವಾಗಿ ಹೋಗುತ್ತಿದೆ. ಮಳೆಗಾಲದಲ್ಲಿ ನೀರನ್ನು ಉಳಿಸಿದರೆ ಬೇಸಿಗೆಯಲ್ಲಿ ಬೆಂಗಳೂರಿನಲ್ಲಿ ದಾಹ ಕಡಿಮೆಯಾಗಲಿದೆ ಎಂಬ ಉದ್ದೇಶದಿಂದ ಮಳೆ ನೀರು ಸಂಗ್ರಹವನ್ನು ಕಡ್ಡಾಯಗೊಳಿಸಲಾಗಿದೆ. 

ನಗರದಲ್ಲಿ ವರ್ಷದ 60 ಮಳೆ ದಿನಗಳಲ್ಲಿ ಸರಾಸರಿ 800 ಮಿಲಿ ಮೀಟರ್ ಮಳೆ ಆಗುತ್ತದೆ. 2,400 ಚದರ ಅಡಿ ಜಾಗದಲ್ಲಿ 2.06 ಲಕ್ಷ ಲೀಟರ್ ಮಳೆ ನೀರನ್ನು ಸಂಗ್ರಹಿಸಲು ಸಾಧ್ಯವಿದೆ ಎನ್ನುತ್ತಾರೆ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆಎಸ್‌ಸಿಎಸ್‌ಟಿ) ಜಲತಜ್ಞ ಪ್ರೊ.ಎ.ಆರ್.ಶಿವಕುಮಾರ್‌. 

ವ್ಯಕ್ತಿಯೊಬ್ಬ ದಿನಕ್ಕೆ 135 ಲೀಟರ್‌ ನೀರು ಉಪಯೋಗಿಸುತ್ತಾನೆ ಎಂದು ಪರಿಭಾವಿಸಿದರೆ, ನಾಲ್ಕು ಜನರ ಕುಟುಂಬಕ್ಕೆ ಪ್ರತಿವರ್ಷ ಸರಾಸರಿ ಎರಡು ಲಕ್ಷ ಲೀಟರ್‌ನಷ್ಟು ನೀರು ಬೇಕು. ‘2,400 ಚದರ ಅಡಿ ಅಳತೆಯ ನಿವೇಶನದ ಮನೆಯಲ್ಲಿ ವಾಸಿಸುವ 4 ಜನರ ಸಾಧಾರಣ ಕುಟುಂಬವೊಂದಕ್ಕೆ ಬೇಕಾದಷ್ಟು ನೀರನ್ನು ಪ್ರಕೃತಿಯೇ ಧಾರಾಳವಾಗಿ ಕೊಡುತ್ತದೆ. ಸಂಗ್ರಹಿಸಿ, ಬಳಸುವ ಮನಸ್ಸು ನಮಗೆ ಬೇಕು ಅಷ್ಟೆ’ ಎಂದು ಹೇಳುತ್ತಾರೆ. 

ಥೀಮ್‌ ಪಾರ್ಕ್‌: ಜಯನಗರದ 5ನೇ ಬ್ಲಾಕ್‌ನಲ್ಲಿ ಮಳೆ ನೀರು ಸಂಗ್ರಹದ ಥೀಮ್‌ ಪಾರ್ಕ್‌ ಆರಂಭಿಸಲಾಗಿದೆ. ಕಟ್ಟಡದ ನಕ್ಷೆ ತೆಗೆದುಕೊಂಡು ಹೋದರೆ, ಎಲ್ಲ ಮಾಹಿತಿ ನೀಡಲಾಗುತ್ತದೆ. ಇಲ್ಲಿ ಅನೇಕ ಮಾದರಿಗಳನ್ನು ನಿರ್ಮಿಸಲಾಗಿದೆ. ಪೈಪ್‌ಲೈನ್‌, ಇಂಗುಗುಂಡಿ, ಶೋಧಕಗಳ ಅಳವಡಿಕೆ ಕುರಿತು ಪರಿಪೂರ್ಣ ವಿವರಣೆ ಕೊಡಲಾಗುತ್ತದೆ.ಮಕ್ಕಳಿಗಾಗಿ ಇಲ್ಲಿ ‘ವರುಣ ದಾಹ’ ಸಿನಿಮಾ ತೋರಿಸಲಾಗುತ್ತದೆ. ಇದರಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆ ಕುರಿತು ಸಾಕಷ್ಟು ಮಾಹಿತಿ ಸಿಗಲಿದೆ.

 

ಬರಹ ಇಷ್ಟವಾಯಿತೆ?

 • 13

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !