ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ಗದ ಔಷಧ ಪೂರೈಕೆ: ಸರ್ಕಾರಕ್ಕಿಲ್ಲ ಆಸಕ್ತಿ

ಬೇಡಿಕೆ–ಪೂರೈಕೆ ನಡುವೆ ಭಾರಿ ಅಂತರ, ಬಾಗಿಲು ಮುಚ್ಚುವ ಸ್ಥಿತಿಯಲ್ಲಿ ಜನೌಷಧ ಕೇಂದ್ರಗಳು
Last Updated 7 ಸೆಪ್ಟೆಂಬರ್ 2019, 19:59 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರ ಆರಂಭಿಸಿದ ಜನೌಷಧ ಕೇಂದ್ರಗಳಿಗೆ ರಾಜ್ಯದಲ್ಲಿ ಸಮರ್ಪಕವಾಗಿ ಔಷಧಗಳು ಪೂರೈಕೆಯಾಗದ ಕಾರಣ ಅಗ್ಗದ ದರದ ಔಷಧಗಳ ಖರೀದಿಗೆ ಜನತೆ ನಿರಾಸಕ್ತಿ ತೋರುತ್ತಿದ್ದು, ಬೇಡಿಕೆ ಹಾಗೂ ಪೂರೈಕೆ ನಡುವೆ ಶೇ 40ರಷ್ಟು ಅಂತರ ಉಂಟಾಗಿದೆ.

ಕ್ಯಾನ್ಸರ್‌ಗೆ ಸಂಬಂಧಪಟ್ಟ 51 ಔಷಧಗಳು ಸೇರಿದಂತೆ ಒಟ್ಟು 852 ಔಷಧಗಳನ್ನು‘ಜನೌಷಧ ಯೋಜನೆ’ಯಡಿ ಕೇಂದ್ರಗಳಲ್ಲಿ ಒದಗಿಸುತ್ತಿರುವುದಾಗಿ ಕೇಂದ್ರ ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ,ರಾಜಧಾನಿ ಬೆಂಗಳೂರಿನ ಕೇಂದ್ರಗಳಲ್ಲಿಯೇ ಲಭ್ಯವಿರುವ ಔಷಧಗಳ ಸಂಖ್ಯೆ 600 ದಾಟುತ್ತಿಲ್ಲ. ಜಿಲ್ಲೆಗಳಲ್ಲಿರುವ ಕೇಂದ್ರಗಳ ಸ್ಥಿತಿ ಇನ್ನಷ್ಟು ಶೋಚನೀಯವಾಗಿದ್ದು, ಔಷಧ ಚೀಟಿ ಹಿಡಿದು ಬಂದವರು ಖಾಲಿ ಕೈಯಲ್ಲಿಯೇ ತೆರಳುತ್ತಿದ್ದಾರೆ. ಔಷಧ ಯಾವಾಗ ಬರಬಹುದು ಎಂಬ ಪ್ರಶ್ನೆಗೆ ಮಾರಾಟಗಾರರಲ್ಲಿಯೂ ಉತ್ತರವಿಲ್ಲ.

ಮಧುಮೇಹ, ಅಧಿಕ ರಕ್ತದೊತ್ತಡ, ಕ್ಷಯ ಸೇರಿದಂತೆ ವಿವಿಧ ರೋಗಗಳ ಔಷಧಗಳಿಗೆ ಬೇಡಿಕೆ ಹೆಚ್ಚಿದ್ದು,ಪೂರೈಕೆದಾರರಿಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ.ಡಯಾಬಿಟ್‌ ಒನ್, ಮೆಟ್ಫಾರ್ಮಿನ್,ಇಂಡಪಮೈಡ್,ಅಮ್ಲೋಡಿಪೈನ್ ಸೇರಿದಂತೆ ವಿವಿಧ ಔಷಧಗಳ ದಾಸ್ತಾನು ಇರುವುದಿಲ್ಲ. ಇದರಿಂದಾಗಿ ಗ್ರಾಹಕರನ್ನು ವಾಪಸ್‌ ಕಳುಹಿಸಬೇಕಾಗಿದೆ. ಯಾವಾಗ ಪೂರೈಕೆಯಾಗುತ್ತದೆ ಎನ್ನುವುದರ ಮಾಹಿತಿ ಕೂಡಾ ನಮಗೆ ದೊರೆಯದಾಗಿದೆ ಎನ್ನುವುದು ಮಾರಾಟಗಾರರ ಅಳಲಾಗಿದೆ.

ಸದ್ಯಜನೌಷಧ ಕೇಂದ್ರಗಳ ಆರಂಭಕ್ಕೆ ಸರ್ಕಾರ ₹ 2.5 ಲಕ್ಷದವರೆಗೆ ಧನಸಹಾಯ ನೀಡುತ್ತಿದೆ. ಆದರೆ, ಮಾರಾಟಗಾರರಿಗೆ ಔಷಧಗಳ ಮೇಲೆ ಶೇ 20ರವರೆಗೆ ಮಾತ್ರ ಕಮಿಷನ್‌ ದೊರೆಯುತ್ತಿದೆ. ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವವರು ಬಿ ಫಾರ್ಮಾ ಅಥವಾ ಡಿ ಫಾರ್ಮಾ ಪದವಿ ಮಾಡಿರಬೇಕೆಂಬ ನಿಯಮವಿದೆ. ಕೇಂದ್ರಗಳಿಗೆ ನೇಮಕ ಮಾಡಿಕೊಳ್ಳುತ್ತಿರುವ ಫಾರ್ಮಾಸಿಸ್ಟ್‌ ಗಳಿಗೆ ₹9 ಸಾವಿರದಿಂದ ₹15 ಸಾವಿರ ವೇತನ ನೀಡಲಾಗುತ್ತಿದೆ.ಇದು ಕೂಡ ಕೇಂದ್ರಗಳು ದಿನದ ಬಹುತೇಕ ಅವಧಿ ಬಾಗಿಲು ಮುಚ್ಚಿರಲು ಕಾರಣವಾಗಿದೆ.

ಕೇಂದ್ರ ಮುಚ್ಚುವುದೊಂದೇ ದಾರಿ: ‘ಜನೌಷಧ ಕೇಂದ್ರಗಳು ಆರಂಭದಲ್ಲಿ ಚೆನ್ನಾಗಿ ನಡೆಯುತ್ತಿದ್ದವು. ಕೇಂದ್ರಗಳನ್ನು ಹುಡುಕಿಕೊಂಡು ಜನ ಬರುತ್ತಿದ್ದರು. ಒಮ್ಮೆಲೇ ಸಾವಿರಾರು ರೂಪಾಯಿಗಳ ಔಷಧಗಳನ್ನು ಕೊಂಡೊಯ್ಯುತ್ತಿದ್ದರು. ಇದರಿಂದ ಉತ್ತಮ ವಹಿವಾಟು ನಡೆಯುತ್ತಿತ್ತು.ಆದರೆ, ಇತ್ತೀಚಿನ ದಿನಗಳಲ್ಲಿ ಅಗತ್ಯ ಔಷಧಗಳ ಪೂರೈಕೆಯಾಗುತ್ತಿಲ್ಲ. ಖಾಲಿಯಾದ ಔಷಧದ ಪಟ್ಟಿ ನೀಡಿದರೆ 15 ದಿನ ಪೂರೈಕೆಗೆ ಸಮಯ ತೆಗೆದುಕೊಳ್ಳುತ್ತಾರೆ’ ಎಂದು ಔಷಧ ಕೇಂದ್ರದ ಹರೀಶ್ ತಿಳಿಸಿದರು.

ಭಾರತೀಯ ರೆಡ್‌ ಕ್ರಾಸ್‌ನ ಕರ್ನಾಟಕ ಶಾಖೆಯು 6 ಜನೌಷಧ ಕೇಂದ್ರಗಳನ್ನು ನಿರ್ವಹಿಸುತ್ತಿದೆ. ‘ಜನರಿಗೆ ಸಹಾಯವಾಗಬೇಕೆಂಬ ಉದ್ದೇಶದಿಂದ ಕೇಂದ್ರಗಳನ್ನು ಆರಂಭಿಸಿದೆವು. ಇದೀಗ ಸಿಬ್ಬಂದಿ‌ಗೆ ವೇತನ ನೀಡುವುದು ಕಷ್ಟವಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಬಾಗಿಲು ಮುಚ್ಚುವುದು ಅನಿವಾರ್ಯ’ ಎಂದು ರೆಡ್‌ ಕ್ರಾಸ್‌ನ ಕರ್ನಾಟಕ ಶಾಖೆಯ ಪ್ರಧಾನ ಕಾರ್ಯದರ್ಶಿ ಪ್ರಶಾಂತಿ ಚಂದ್ರಶೇಖರ್ ಮಾಹಿತಿ ನೀಡಿದರು.‌

‘ರಾಜ್ಯದಲ್ಲಿ ಹೊಸದಾಗಿ ಜನೌಷಧ ಕೇಂದ್ರಗಳನ್ನು ಆರಂಭಿಸುವ ಪ್ರಸ್ತಾಪವಿಲ್ಲ. ಜನೌಷಧ ಹಾಗೂ ಜನ ಸಂಜೀವಿನಿ ಎರಡೂ ಬೇರೆಯಾಗಿದ್ದು, ರಿಯಾಯಿತಿಯಲ್ಲಿ ವ್ಯತ್ಯಾಸ ಇರಲಿದೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉಪನಿರ್ದೇಶಕ ವಿವೇಕ್ ದೊರೈ ತಿಳಿಸಿದರು.

ಕೇಂದ್ರಗಳಿಗೆ ಪೂರೈಕೆಯಾಗದ ನ್ಯಾಪ್‌ಕಿನ್

ಮಹಿಳೆಯರಿಗಾಗಿ ಕೇಂದ್ರ ಸರ್ಕಾರ ₹1ಕ್ಕೆ ಸ್ಯಾನಿಟರಿ ನ್ಯಾಪ್‌ಕಿನ್‌ ‘ಸುವಿಧಾ’ ಪರಿಚಯಿಸಿದೆ.ಒಂದು ಪ್ಯಾಕೆಟ್‌ನಲ್ಲಿ 4 ಪ್ಯಾಡ್‌ಗಳು ಇರಲಿವೆ. ಆದರೆ, ಬಹುತೇಕ ಕೇಂದ್ರಗಳಲ್ಲಿ ಈವರೆಗೂ ಸ್ಯಾನಿಟರಿ ಪ್ಯಾಡ್‌ಗಳು ಪೂರೈಕೆಯಾಗಿಲ್ಲ. ಅದೇ ರೀತಿ, ಸೋಪುಗಳು ಸಹ ಕೇಂದ್ರಗಳಲ್ಲಿ ಕಾಣಸಿಗುವುದಿಲ್ಲ.

‘ಗ್ರಾಹಕರು ಸ್ಯಾನಿಟರಿ ನ್ಯಾಪ್‌ಕಿನ್‌ ಬಗ್ಗೆ ಕೆಲ ದಿನಗಳಿಂದ ವಿಚಾರಿಸುತ್ತಿದ್ದಾರೆ. ಆದರೆ, ಈವರೆಗೂ ಪೂರೈಕೆ ಮಾಡಿಲ್ಲ’ ಎಂದು ಔಷಧ ಮಾರಾಟಗಾರ ರವೀಂದ್ರ ತಿಳಿಸಿದರು.

***

ದುಬಾರಿ ಔಷಧಗಳು ಇಲ್ಲಿ ರಿಯಾಯಿತಿ ದರದಲ್ಲಿ ಸಿಗುತ್ತಿವೆ. ಆದರೆ, ದಾಸ್ತಾನು ಇರುವುದಿಲ್ಲ. ಆಗಾಗ ವಿಚಾರಿಸುತ್ತಿರುತ್ತೇವೆ. ಸರ್ಕಾರ ಈ ಕುರಿತು ಗಮನ ಹರಿಸಬೇಕು

–ರಾಮಕೃಷ್ಣ, ಚಾಮರಾಜಪೇಟೆ ನಿವಾಸಿ

***

ವಿತರಕರು ಸಹ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ರಾಜ್ಯದಲ್ಲಿಯೇ ವೇರ್‌ಹೌಸ್ ನಿರ್ಮಿಸಿ, ಬೇಡಿಕೆ ಇರುವ ಔಷಧಗಳನ್ನು ಪೂರೈಸಬೇಕು. ಆಗ ಕೇಂದ್ರಗಳು ಉಳಿಯುತ್ತವೆ.

–ಮೋಹನ್, ಔಷಧ ಮಾರಾಟಗಾರ ನಾಗಸಂದ್ರ ಮುಖ್ಯರಸ್ತೆ

***

ಅಂಕಿ–ಅಂಶಗಳು

531:ರಾಜ್ಯದಲ್ಲಿರುವ ಪ್ರಧಾನಮಂತ್ರಿ ಜನೌಷಧ ಕೇಂದ್ರಗಳ ಸಂಖ್ಯೆ

852:ಜನೌಷಧ ಕೇಂದ್ರಗಳಲ್ಲಿ ಇರಬೇಕಾದ ಔಷಧಗಳ ಸಂಖ್ಯೆ

500ರಿಂದ 600:ಸದ್ಯಕೇಂದ್ರಗಳಲ್ಲಿ ಇರುತ್ತಿರುವಔಷಧಗಳ ಸಂಖ್ಯೆ

ಶೇ 20ರಿಂದ ಶೇ 80ರಷ್ಟು ಜನೌಷಧ ಕೇಂದ್ರಗಳಲ್ಲಿ ಔಷಧಗಳ ಮೇಲೆ ನೀಡುವ ರಿಯಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT