ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲುಸಾಗಿ ಬೆಳೆದ ಬಿದಿರು ಗಿಡಗಳನ್ನು ಕಿತ್ತೆಸೆದರು

ಜಯನಗರ: ರಸ್ತೆ ಬದಿ ಸಸಿಗಳನ್ನು ನೆಟ್ಟು ಪೋಷಿಸುತ್ತಿದ್ದ ಸ್ಥಳೀಯರು
Last Updated 22 ಸೆಪ್ಟೆಂಬರ್ 2018, 20:18 IST
ಅಕ್ಷರ ಗಾತ್ರ

ಬೆಂಗಳೂರು: ಜಯನಗರ 1ನೇ ಬ್ಲಾಕ್‌ನ ಮೌಂಟೇನ್‌ ರಸ್ತೆಯ ಬದಿಯಲ್ಲಿ ಸ್ಥಳೀಯರು ಬೆಳೆಸಿದ್ದ ಗಿಡಗಳನ್ನು ವ್ಯಕ್ತಿಯೊಬ್ಬರು ಕಿತ್ತೆಸೆದಿದ್ದಾರೆ.

‘ಮೌಂಟೇನ್‌ ರಸ್ತೆಯ ಪಕ್ಕದಲ್ಲಿ ಕೆಲವರು ಕಸ ಬಿಸಾಡುತ್ತಿದ್ದರು. ಇದನ್ನು ತಪ್ಪಿಸುವ ಸಲುವಾಗಿ ಹಾಗೂ ಈ ಪರಿಸರ ನೆರಳಿನಿಂದ ಕೂಡಿರಲಿ ಎಂಬ ಉದ್ದೇಶದಿಂದ ಸುಮಾರು ಮೂರು ಅಡಿಗಳಷ್ಟು ಜಾಗದಲ್ಲಿ ಮಣ್ಣು ತುಂಬಿ, ಅಲ್ಲಿ ಉದ್ದಕ್ಕೂ ಬಿದಿರು ಸೇರಿದಂತೆ ವಿವಿಧ ಜಾತಿಯ ಗಿಡಗಳನ್ನು ನೆಟ್ಟಿದ್ದೆವು. ಬಿಬಿಎಂಪಿ ಗಮನಕ್ಕೆ ತಂದೇ ನಾವು ಗಿಡ ಬೆಳೆಸಿದ್ದೆವು. ಚೆನ್ನಾಗಿ ಬೆಳೆದಿದ್ದ ಈ ಗಿಡಗಳನ್ನು ಸ್ಥಳೀಯ ವ್ಯಕ್ತಿಯೊಬ್ಬರು ಕಿತ್ತು ಹಾಕಿದ್ದಾರೆ’ ಎಂದು ಸ್ಥಳೀಯ ನಿವಾಸಿ ಸುಮಾ ರಾಧೇಶ್ಯಾಂ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆರು ತಿಂಗಳ ಹಿಂದೆಯೂ ಇದೇ ರೀತಿ ಆಗಿತ್ತು. ಆಗ ಗಿಡಗಳನ್ನು ಯಾರು ಕಿತ್ತಿದ್ದರು ಎಂಬುದು ಗೊತ್ತಿರಲಿಲ್ಲ. ನಾವು ಮತ್ತೆ ಗಿಡಗಳನ್ನು ನೆಟ್ಟು ಬೆಳೆಸಿದ್ದೆವು. ಮೂರು ದಿನಗಳ ಹಿಂದೆ ಮತ್ತೆ ಅವುಗಳನ್ನು ಕಿತ್ತರು. ಈ ರಸ್ತೆಯ ಆಚೆ ಕಡೆಯ ಮನೆಯವರೇ ಈ ಕೃತ್ಯ ನಡೆಸಿದ್ದಾರೆ. ಅವರಿಗೆ ಈ ಗಿಡಗಳಿಂದ ಯಾವ ರೀತಿಯ ತೊಂದರೆಯೂ ಇಲ್ಲ. ಈ ಬಗ್ಗೆ ಬಿಬಿಎಂಪಿ ಅರಣ್ಯ ಘಟಕದ ಗಮನಕ್ಕೆ ತಂದಿದ್ದೇವೆ’ ಎಂದರು.

ಈ ಬಗ್ಗೆ ಪ್ರತಿ ಕ್ರಿಯಿಸಿದ ಬಿಬಿಎಂಪಿ ಅರಣ್ಯ ಘಟಕದ ಅಧಿಕಾರಿ ಉಮೇಶ್‌, ‘ನಾನು ಸ್ಥಳಕ್ಕೆ ಭೇಟಿ ನೀಡಿ ವಿಚಾರಿಸಿದ್ದೇನೆ. ಬಿದಿರಿನ ಗಿಡ ಬೆಳೆಸಿದರೆ ಅದರಲ್ಲಿ ಹಾವುಗಳು ಸೇರಿಕೊಳ್ಳುತ್ತವೆ ಎಂಬ ಆತಂಕದಿಂದ ಸ್ಥಳೀಯ ನಿವಾಸಿ ಅನ್ಬಾಲಗನ್‌ ಅವರು ಈ ಕೃತ್ಯ ನಡೆಸಿದ್ದರು. ಈಗ ಅಲ್ಲಿ ಬೇರೆ ಜಾತಿಯ ಗಿಡಗಳನ್ನು ಎರಡು ದಿನಗಳ ಒಳಗೆ ನೆಡುತ್ತೇನೆ ಎಂದು ಅವರು ಒಪ್ಪಿಕೊಂಡಿದ್ದಾರೆ’ ಎಂದರು.

ಈ ಕುರಿತು ಪ್ರತಿಕ್ರಿಯಿಸಿದ ಅನ್ಬಾಲಗನ್‌, ‘ಗಿಡಗಳನ್ನು ಬೆಳೆಸುವುದಕ್ಕೆ ನನ್ನ ವಿರೋಧವಿಲ್ಲ. ನಮ್ಮ ಮನೆಯ ಸುತ್ತಮುತ್ತಲೂ ಸುಮಾರು 30ಕ್ಕೂ ಅಧಿಕ ಜಾತಿಯ ಗಿಡಗಳನ್ನು ಬೆಳೆಸಿದ್ದೇನೆ. ಬಿದಿರಿನ ಗಿಡಗಳನ್ನು ಬೆಳೆಸುವುದಕ್ಕೆ ಮಾತ್ರ ನನ್ನ ಆಕ್ಷೇಪ. ಹಾಗಾಗಿ ನಾನು ಬಿದಿರಿನ ಗಿಡಗಳನ್ನು ಕಿತ್ತು ಹಾಕಿದ್ದು ಹೌದು’ ಎಂದು ಒಪ್ಪಿಕೊಂಡರು.

‘ನಮ್ಮ ಮನೆಯ ಸಮೀಪವೂ ಕೆಲ ವರ್ಷಗಳ ಹಿಂದೆ ಬಿದಿರಿನ ಗಿಡಗಳನ್ನು ಬೆಳೆಸಿದ್ದೆ. ಅಲ್ಲಿಗೆ ಹಾವುಗಳು ಬಂದು ಸೇರಿಕೊಂಡಿದ್ದವು. ಬಳಿಕ ಬಿದಿರನ್ನು ಕಡಿಸಿದ್ದೆ. ರಸ್ತೆ ಪಕ್ಕದಲ್ಲಿ ಗಿಡ ಬೆಳೆಸಿದ ಜಾಗದಲ್ಲಿ ಸುಮಾರು ನಾಲ್ಕೈದು ಅಡಿಗಳಷ್ಟು ಆಳದಲ್ಲಿ ಜಲಮಂಡಳಿ ಕುಡಿಯುವ ನೀರಿನ ಕೊಳವೆಮಾರ್ಗವನ್ನು ಅಳವಡಿಸಿದೆ. ಹಾಗಾಗಿ ಅಲ್ಲಿ ಆಳಕ್ಕೆ ಬೇರು ಬಿಡುವ ಜಾತಿಯ ಗಿಡಗಳನ್ನು ಬೆಳೆಸುವುದಕ್ಕೆ ಆಗುವುದಿಲ್ಲ. ನೆರಳು ನೀಡುವ ಜಾತಿಯ ಗಿಡಗಳನ್ನು ನಾನೇ ನೆಡುತ್ತೇನೆ’ ಎಂದರು.

***

ಗಿಡ ಬೆಳೆಸಿದ ಬಗ್ಗೆ ಅಸಮಾಧಾನವಿದ್ದರೆ ಬಿಬಿಎಂಪಿಗೆ ದೂರು ನೀಡಬಹುದು. ಅದುಬಿಟ್ಟು ಹುಲುಸಾಗಿ ಬೆಳೆದ ಗಿಡಗಳನ್ನು ಕಿತ್ತು ಹಾಕಿರುವುದು ನೋವು ತಂದಿದೆ

–ಸುಮಾ ರಾಧೇಶ್ಯಾಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT