ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಜಯನಗರ ವಾಣಿಜ್ಯ ಸಂಕೀರ್ಣ: 250 ತಾತ್ಕಾಲಿಕ ಮಳಿಗೆ ತೆರವು

Last Updated 8 ಫೆಬ್ರುವರಿ 2023, 19:06 IST
ಅಕ್ಷರ ಗಾತ್ರ

ಬೆಂಗಳೂರು: ದಕ್ಷಿಣ ವಲಯದ ಜಯನಗರ ವಾಣಿಜ್ಯ ಸಂಕೀರ್ಣದ ಬಳಿ ಪಾದಚಾರಿ ಮಾರ್ಗ, ಪಾರ್ಕಿಂಗ್ ಪ್ರದೇಶ, ಮಾರುಕಟ್ಟೆ ಕಾರಿಡಾರ್ ಮೇಲೆ ಮತ್ತು ಅಕ್ಕಪಕ್ಕದಲ್ಲಿದ್ದ ಸುಮಾರು 250 ತಾತ್ಕಾಲಿಕ ಮಳಿಗೆಗಳನ್ನು ಬಿಬಿಎಂಪಿ ಸಿಬ್ಬಂದಿ ಬುಧವಾರ ತೆರವುಗೊಳಿಸಿದರು.

ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರು, ಬಿಬಿಎಂಪಿ ಮುಖ್ಯ ಆಯುಕ್ತ, ದಕ್ಷಿಣ ವಲಯ ಆಯುಕ್ತರು ಜ.27ರಂದು ತಪಾಸಣೆ ನಡೆಸಿದ್ದರು. ಅಲ್ಲಿ ಕೈಗೊಂಡ ತೀರ್ಮಾನದಂತೆ ದಕ್ಷಿಣ ವಲಯ ಜಂಟಿ ಆಯುಕ್ತರ ನೇತೃತ್ವದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗಿದೆ ಎಂದು ಮುಖ್ಯ ಎಂಜಿನಿಯರ್‌ ತಿಳಿಸಿದರು.

ಜಯನಗರ ವಾಣಿಜ್ಯ ಸಂಕೀರ್ಣದ ಸೆಟ್ ಬ್ಯಾಕ್ ಪ್ರದೇಶಗಳು ಮತ್ತು ಕಾರಿಡಾರ್‌ಗಳಲ್ಲಿ ಹಾಗೂ ಸುತ್ತಮುತ್ತ ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿಕೊಂಡು ವ್ಯಾಪಾರ-ವಹಿವಾಟು ನಡೆಸಲಾಗುತ್ತಿತ್ತು. ಇದರಿಂದ ಸಾರ್ವಜನಿಕರಿಗೆ ಅನನುಕೂಲ ಉಂಟಾಗುತ್ತಿತ್ತು. ಪೊಲೀಸರ ನೆರವಿನೊಂದಿಗೆ ತೆರವು ಮಾಡಲಾಗಿದ್ದು, ಮುಂದೆ ಒತ್ತುವರಿ ಮಾಡಿಕೊಳ್ಳದಂತೆ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಮತ್ತೆ ಒತ್ತುವರಿಯಾಗದಂತೆ ತಡೆಯಲು ಮಾರ್ಷಲ್‌ಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.

ಕಾನೂನುಬಾಹಿರ: ‘ಇಲ್ಲಿ ನಮಗೆ ವ್ಯಾಪಾರ ಮಾಡಲು ಬಿಬಿಎಂಪಿಯಿಂದಲೇ ವೆಂಡಿಂಗ್‌ ಮತ್ತು ಗುರುತಿನ ಚೀಟಿ ನೀಡಲಾಗಿದೆ. ಇದೀಗ ಏಕಾಏಕಿ ತೆರವು ಮಾಡಲಾಗಿದೆ. ಈ ಬಗ್ಗೆ ನಾವು ಪ್ರತಿಭಟನೆ ಮಾಡಿದ್ದೇವೆ. ಜಂಟಿ ಆಯುಕ್ತರು ನಮ್ಮೊಂದಿಗೆ ಚರ್ಚೆ ನಡೆಸಿ, ಒಂದು ವಾರದಲ್ಲಿ ವ್ಯಾಪಾರ ನಡೆಸುವ ಪ್ರದೇಶವನ್ನು ಗುರುತಿಸಿ, ಅನುಮತಿ ನೀಡಲಾಗುತ್ತದೆ ಎಂದಿದ್ದಾರೆ. ಒಂದು ವಾರದವರೆಗೆ ನಾವೆಲ್ಲಿ ಹೋಗುವುದು? ಗುರುವಾರ ನಾವೆಲ್ಲ ಸಭೆ ಸೇರಿ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಿದ್ದೇವೆ’ ಎಂದು ಬೆಂಗಳೂರು ಬೀದಿವ್ಯಾಪಾರಿಗಳ ಸಂಘದ ಅಧ್ಯಕ್ಷ ಬಾಬು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT