ಸೋಮವಾರ, ಸೆಪ್ಟೆಂಬರ್ 16, 2019
26 °C

ಪತ್ರಕರ್ತ ಹೇಮಂತ್ ಕುಮಾರ್‌ಗೆ ಷರತ್ತು ಬದ್ಧ ಜಾಮೀನು

Published:
Updated:

ಬೆಂಗಳೂರು: ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದಲ್ಲಿ ಗೃಹ ಸಚಿವ ಎಂ.ಬಿ.ಪಾಟೀಲರ ಹೆಸರಿನಲ್ಲಿ ನಕಲಿ ಪತ್ರ ಸೃಷ್ಟಿಸಿದ ಆರೋಪದಡಿ ನ್ಯಾಯಾಂಗ ಬಂಧನದಲ್ಲಿರುವ ಪತ್ರಕರ್ತ ಹೇಮಂತ್‌ ಕುಮಾರ್‌ ಅವರಿಗೆ ಜನಪ್ರತಿನಿಧಿಗಳ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.

₹ 50 ಸಾವಿರ ಮೊತ್ತಕ್ಕೆ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತಕ್ಕೆ ಮತ್ತೊಬ್ಬರ ಶ್ಯೂರಿಟಿ ಸೇರಿದಂತೆ ಷರತ್ತುಗಳನ್ನು ವಿಧಿಸಿದ ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ’ ಗುರುವಾರ ಈ ಕುರಿತು ಆದೇಶ ನೀಡಿದೆ.

ನ್ಯಾಯಾಧೀಶ ರಾಮಚಂದ್ರ ಡಿ.ಹುದ್ದಾರ ಅವರು ಪ್ರಕರಣದ ವಿಚಾರಣೆ ನಡೆಸಿದರು. ಹೇಮಂತ ಕುಮಾರ್ ಪರ ಹೈಕೋರ್ಟ್ ಹಿರಿಯ ವಕೀಲ ವಿವೇಕ ರೆಡ್ಡಿ ವಾದ ಮಂಡಿಸಿದರು. 

ಪ್ರಕರಣವೇನು?: ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸಂಬಂಧಿಸಿದಂತೆ ಎಂ.ಬಿ.ಪಾಟೀಲ ಅವರು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬಿ ಎಲ್ ಡಿ ಇ ಸಂಸ್ಥೆಯ ಲೆಟರ್ ಹೆಡ್ ನಲ್ಲಿ ಬರೆದಿದ್ದರು ಎನ್ನಲಾದ ನಕಲಿ ಪತ್ರವನ್ನು ಸಾಮಾಜಿಕ ಜಾಲತಾಣ ಹಾಗೂ ಪತ್ರಿಕೆಯೊಂದರಲ್ಲಿ (ಪ್ರಜಾವಾಣಿ ಅಲ್ಲ) ಪ್ರಕಟ ಮಾಡಲಾಗಿತ್ತು.

ಈ ಕುರಿತು ಎಂ.ಬಿ.ಪಾಟೀಲರು ವಿಜಯಪುರದ ಆದರ್ಶನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ತನಿಖೆಯನ್ನು ಸಿಐಡಿ ಪೊಲೀಸರು ನಡೆಸುತ್ತಿದ್ದು ಪೊಲೀಸರು 'ಪೋಸ್ಟ್‌ ಕಾರ್ಡ್‌ ವೆಬ್‌ಪೋರ್ಟಲ್‌' ಸಂಪಾದಕ ಮಹೇಶ್‌ ವಿಕ್ರಂ ಹೆಗ್ಡೆಯನ್ನು ವಿಷಾರಣೆಗೆ ಒಳಪಡಿಸಿದ್ದರು.

ವಿಚಾರಣೆ ವೇಳೆ ಹೆಗ್ಡೆ ನೀಡಿದ ಮಾಹಿತಿಯ ಆಧಾರದಲ್ಲಿ ಸಿಐಡಿ ಪೊಲೀಸರು ಎಸ್‌.ಎ.ಹೇಮಂತ್‌ ಕುಮಾರ್‌ ಅವರನ್ನು  ಏ.27ರಂದು ವಶಕ್ಕೆ ಪಡೆದಿದ್ದರು.

ಹೇಮಂತ್ ಕುಮಾರ್ ಅವರನ್ನು ನ್ಯಾಯಾಲಯದ ಮುಂದೆ ಶನಿವಾರ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗೆ ಆರೋಪಿಯನ್ನು ವಶಕ್ಕೆ ಒಪ್ಪಿಸವಂತೆ ಮನವಿ ಮಾಡಿದ್ದರು. 

ಇದನ್ನು ಮಾನ್ಯ ಮಾಡಿದ್ದ ನ್ಯಾಯಾಧೀಶ ಹುದ್ದಾರ ಅವರು ಆರೋಪಿ ಹೇಮಂತ್ ಕುಮಾರ್ ಅವರನ್ನು ಏ.30ರವರೆಗೆ ಪೊಲೀಸ್‌ ವಶಕ್ಕೆ ನೀಡಿ ಆದೇಶಿಸಿದ್ದರು. ಏ.30ರಂದು ಮೇ 9 ರವರೆಗೆ ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

Post Comments (+)