ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾದಚಾರಿಗಳಿಗೆ ಕಂಟಕವಾದ ಕೆ.ಆರ್‌.ಪುರ

ಹೆಚ್ಚುತ್ತಲೇ ಸಾಗಿದೆ ರಸ್ತೆ ಅಪಘಾತ, ಒಂದೇ ಸ್ಥಳದಲ್ಲಿ 25 ಬಲಿ
Last Updated 25 ಡಿಸೆಂಬರ್ 2018, 20:12 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಪಾದಚಾರಿಗಳ ಪಾಲಿಗೆ ಕೆ.ಆರ್‌.ಪುರವು ಅತ್ಯಂತ ಅಪಾಯಕಾರಿ ಪ್ರದೇಶಗಳಲ್ಲಿ ಒಂದೆನಿಸಿದೆ. ಪ್ರಾಣಾಪಾಯ ತಂದೊಡ್ಡುವಂತಹ ಅಪಘಾತಗಳು ಇಲ್ಲಿ ಪದೇ ಪದೇ ಸಂಭವಿಸುತ್ತಲೇ ಇವೆ.

‘ದಿ ಫುಟ್‌ಪಾತ್‌ ಇನಿಷಿಯೇಟಿವ್‌’ ಸಂಸ್ಥೆಯ ಸಹ ಸಂಸ್ಥಾಪಕರಾದ ಅನುಷಾ ಚಿತ್ತೂರಿ ಮತ್ತು ವರುಣ್ ಶ್ರೀಧರ್ ಅವರು ಸಿದ್ಧಪಡಿಸಿದ ವರದಿಯಲ್ಲಿ ಇಲ್ಲಿನ ಅಪಾಯಕಾರಿ ಪರಿಸ್ಥಿತಿಗಳ ಬಗ್ಗೆ ವಿಶ್ಲೇಷಿಸಲಾಗಿದೆ.

2017ರಲ್ಲಿ ಪಾದಚಾರಿಗಳು ಹಾನಿಗೊಳಗಾದ 1,574 ಅಪಘಾತ ಪ್ರಕರಣಗಳು ನಗರದಲ್ಲಿ ಸಂಭವಿಸಿದ್ದವು. ಇವುಗಳಲ್ಲಿ ಒಟ್ಟು 282 ಮಂದಿ ಸಾವನ್ನಪ್ಪಿದ್ದರು. ಸಾವಿನ ಪ್ರಮಾಣ ಹೆಚ್ಚು ಕಂಡು ಬಂದಿರುವುದು ಕೆ.ಆರ್‌.ಪುರದಲ್ಲಿ. ಇಲ್ಲಿ 87 ಪಾದಚಾರಿಗಳು ಅಪಘಾತಕ್ಕೆ ಒಳಗಾಗಿದ್ದು, 25 ಮಂದಿ ಮೃತಪಟ್ಟಿದ್ದರು. 69 ಮಂದಿ ಗಾಯಗೊಂಡಿದ್ದರು.

‘ಪಾದಚಾರಿಗಳ ಸಾವಿನ ಹೆಚ್ಚಳಕ್ಕೆ ಕೆ.ಆರ್‌.ಪುರ ಪ್ರದೇಶದಲ್ಲಿ ಸಂಭವಿಸಿದ್ದ ಅಪಘಾತಗಳು ಹೆಚ್ಚಿನ ‘ಕೊಡುಗೆ’ ನೀಡಿವೆ. ಅಪಘಾತಗಳು ಹೆಚ್ಚು ಸಂಭವಿಸುವ ಪ್ರದೇಶಗಳನ್ನು ಪರಿಗಣಿಸುವುದಾದರೆ, ಪುಲಕೇಶಿನಗರ ಮತ್ತು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚು’ ಎಂದು ವರದಿ ಹೇಳಿದೆ.

ಕೆ.ಆರ್‌.ಪುರದ ನಂತರ ಬಾಣಸವಾಡಿ, ಬ್ಯಾಟರಾಯನಪುರ, ಯಶವಂತಪುರ, ಮಡಿವಾಳ, ಎಲೆಕ್ಟ್ರಾನಿಕ್‌ ಸಿಟಿ, ಯಲಹಂಕದಲ್ಲಿಯೂ ಪಾದಚಾರಿಗಳು ಅಪಘಾತಕ್ಕೊಳಗಾದ ಘಟನೆಗಳು ನಡೆದಿವೆ. ಬಾಣಸವಾಡಿಯಲ್ಲಿ 15 ಮಂದಿಸಾವನ್ನಪ್ಪಿದ್ದರು, 40 ಜನ ಗಾಯಗೊಂಡಿ
ದ್ದರು. ಯಶವಂತಪುರ ಮತ್ತು ಬ್ಯಾಟರಾಯನಪುರದಲ್ಲಿ 13 ಸಾವು ಸಂಭವಿಸಿತ್ತು. 50 ಮಂದಿ ಗಾಯಗೊಂಡಿದ್ದರು.

‘ಹೆಚ್ಚಿನ ಅಪಘಾತಗಳು ಪಾದಚಾರಿಗಳು ರಸ್ತೆ ದಾಟುವಾಗಲೇ ಸಂಭವಿಸಿವೆ. ವಾಹನಗಳು ರಸ್ತೆಬದಿ ಸಾಲಾಗಿ ನಿಂತು ಫುಟ್‌ಪಾತ್‌ ಆವರಿಸಿಕೊಂಡುಬಿಟ್ಟಿರುತ್ತವೆ. ಹೀಗಾದಾಗ ಜನರು ರಸ್ತೆಯ ಒಂದು ಬದಿಯಲ್ಲೇ ನಡೆದುಕೊಂಡು ಹೋಗುತ್ತಾರೆ. ಇಂಥ ಸಂದರ್ಭದಲ್ಲಿ ಅಪಘಾತ ಸಂಭವಿಸಿದ್ದುಂಟು. ಅಪಘಾತಕ್ಕೊಳಗಾದವರ ಪೈಕಿ ಕಾರ್ಮಿಕರು, ಮನೆಗೆಲಸದವರು, ಗೃಹಿಣಿಯರು ಸೇರಿದ್ದಾರೆ’ ಎಂದು ಅನುಷಾ ಅವರು ವರದಿಯಲ್ಲಿ ವಿವರಿಸಿದ್ದಾರೆ.

249 ಪ್ರಕರಣಗಳ ಬಗ್ಗೆ ತಂಡವು ಅಧ್ಯಯನ ನಡೆಸಿತ್ತು. ಈ ಪೈಕಿ ಶೇ 90ರಷ್ಟು ಅಪಘಾತಗಳು ವಾಹನಗಳ ಅತಿವೇಗದ ಚಾಲನೆ ಹಾಗೂ ಚಾಲಕರ ಅಜಾಗರೂಕತೆಯಿಂದಲೇ ಸಂಭವಿಸಿವೆ. ಅಪಘಾತದಲ್ಲಿ ಮುಖ್ಯವಾಗಿ ಪಾದಚಾರಿಯ ತಲೆ ಮತ್ತು ಮೊಣಕಾಲಿಗೆ ಗಾಯ
ಗಳಾದ ಪ್ರಕರಣಗಳೇ ಹೆಚ್ಚು ಇವೆ.

ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಪಿ.ಹರಿಶೇಖರನ್‌ ಅವರು ಇತ್ತೀಚೆಗೆ ಈ ವಿಷಯಕ್ಕೆ ಸಂಬಂಧಿಸಿ ವಿವಿಧ ಸಂಚಾರ ಪೊಲೀಸ್‌ ಠಾಣೆ ಸಬ್‌ ಇನ್ಸ್‌ಪೆಕ್ಟರ್‌ಗಳ ಸಭೆ ನಡೆಸಿದ್ದರು.

ವೈಟ್‌ಫೀಲ್ಡ್‌ನ ಹೂಡಿ ವೃತ್ತದ ಸುತ್ತಮುತ್ತಲಿನ ಅವ್ಯವಸ್ಥೆ, ಜನರ ಸಾವಿಗೆ ಕಾರಣವಾಗುತ್ತಿರುವ ನಿಯಮ ಉಲ್ಲಂಘನೆ ಕುರಿತು ಏನು ಕ್ರಮ ಕೈಗೊಂಡಿದ್ದೀರಿ ಎಂದು ವೈಟ್‌ಫೀಲ್ಡ್‌ ರೈಸಿಂಗ್‌ ಸಂಘಟನೆಯ ಸದಸ್ಯರು ಟ್ವಿಟರ್‌ ಮೂಲಕ ಪ್ರಶ್ನಿಸಿದ್ದರು.

ಪಾದಚಾರಿಗಳು ಅಪಘಾತಕ್ಕೆ ತುತ್ತಾದ ಘಟನೆಗಳ ಕುರಿತು ಇಡೀ ದೇಶದಲ್ಲಿ ಏಕೀಕೃತ ಮಾಹಿತಿ ಇಲ್ಲ. ಬೆಂಗಳೂರು ಸಂಚಾರ ಪೊಲೀಸರ ಬಳಿಯೂ ಸಮಗ್ರ ಮಾಹಿತಿ ಇಲ್ಲ. ಅದಕ್ಕಾಗಿ ಅನುಷಾ ಮತ್ತು ವರುಣ್‌ ಮಾಹಿತಿ ಹಕ್ಕಿನ ಮೂಲಕ ಈ ದಾಖಲೆಗಳನ್ನು ಪಡೆಯಲು ಮುಂದಾಗಿದ್ದಾರೆ.

ಈ ಯೋಜನೆಯ ಅಡಿ ದೇಶದ 30 ನಗರಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗುವುದು. ಮುಂಬೈ, ದೆಹಲಿ, ಜೈಪುರ, ಜೋಧಪುರ, ಮೈಸೂರು, ಹುಬ್ಬಳ್ಳಿ ಸೇರಿದಂತೆ ಹಲವು ನಗರಗಳಲ್ಲಿ ಪಾದಚಾರಿ ಮಾರ್ಗ ಎಷ್ಟು ಸುರಕ್ಷಿತ ಎಂಬ ಬಗ್ಗೆ ಅಧ್ಯಯನ ಸಾಗಿದೆ ಎಂದು ಅವರು ತಿಳಿಸಿದರು.

ಅಂಕಿ ಅಂಶ

* ಪಾದಚಾರಿಗಳು ರಸ್ತೆ ದಾಟುವ ವೇಳೆ ಸಂಭವಿಸಿದ ಅಪಘಾತಗಳ ಪ್ರಮಾಣ –60%

* ಪಾದಚಾರಿಗಳು ರಸ್ತೆ ಬದಿ ನಡೆದು ಹೋಗುವಾಗ ಸಂಭವಿಸಿದ ಅಪಘಾತಗಳು –19%

* ಪೊಲೀಸ್‌ ಠಾಣೆಯಿಂದ 2.5 ಕಿ.ಮೀ ವ್ಯಾಪ್ತಿಯಲ್ಲಿ ಸಂಭವಿಸಿದ ಅಪಘಾತಗಳು –58%

* ಅಪಘಾತದ ವೇಳೆ ರಸ್ತೆ ಮೇಲೆ ಬಿದ್ದು ತೀವ್ರ ಗಾಯಗೊಂಡವರು –81%

* ಪ್ರಕರಣಗಳಲ್ಲಿ ವಾಹನಗಳು ಪಾದಚಾರಿಯ ಮೇಲೆ ಹರಿದಿವೆ –15%

ಅಪಘಾತಕ್ಕೆ ಕಾರಣ

* ವಾಹನಗಳನ್ನು ಅತಿವೇಗ, ಅಜಾಗರೂಕತೆಯಿಂದ ಚಲಾಯಿಸುವುದು

* ರಸ್ತೆಗಳ ಇಕ್ಕೆಲಗಳಲ್ಲಿ ಸೂಕ್ತ ಪಾದಚಾರಿ ಮಾರ್ಗಗಳು ಇಲ್ಲದಿರುವುದು

* ರಸ್ತೆಬದಿ ಫುಟ್‌ಪಾತ್‌ ಆಕ್ರಮಿಸುವಂತೆ ವಾಹನಗಳನ್ನು ಸಾಲಾಗಿ ನಿಲ್ಲಿಸುವುದು

*ಹೊರ ವರ್ತುಲ ರಸ್ತೆಗಳಲ್ಲಿ ಮೂಲಸೌಕರ್ಯ ಇಲ್ಲದಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT