ಬೆಂಗಳೂರು: ಮನೆಯೊಂದಕ್ಕೆ ನುಗ್ಗಿ ಮೊಬೈಲ್ ಜೊತೆ ಮಗು ಕದ್ದೊಯ್ದಿದ್ದ ಆರೋಪಿ ನಂದಿನಿ ಅಲಿಯಾಸ್ ಆಯೇಷಾ ಎಂಬುವವರನ್ನು ಕಲಾಸಿಪಾಳ್ಯ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.
‘ಮುಳಬಾಗಿಲಿನ ಆಯೇಷಾ, ಶಿವಾಜಿನಗರದಲ್ಲಿ ವಾಸವಿದ್ದರು. ತಮ್ಮ ಹೆಸರು ನಂದಿನಿ ಎಂಬುದಾಗಿ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದರು. ಮಗು ಕದ್ದೊಯ್ದಿದ್ದ ಆರೋಪದಡಿ ಇವರನ್ನು ಬಂಧಿಸಲಾಗಿದೆ. ಇವರ ಬಳಿ 5 ಮೊಬೈಲ್ ಜಪ್ತಿ ಮಾಡಲಾಗಿದೆ. ಮಗುವನ್ನು ಸುರಕ್ಷಿತವಾಗಿ ಪೋಷಕರ ಸುಪರ್ದಿಗೆ ಒಪ್ಪಿಸಲಾಗಿದೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ ತಿಳಿಸಿದರು.
ನಿದ್ರೆಗೆ ಜಾರಿದ್ದ ತಾಯಿ: ‘ಕಲಾಸಿಪಾಳ್ಯ ದುರ್ಗಮ್ಮ ದೇವಸ್ಥಾನ ರಸ್ತೆಯ ನಿವಾಸಿ ಫಾರ್ಹೀನಾ ಬೇಗಂ ಅವರನ್ನು ಬನಶಂಕರಿಯ ಸರಬಂಡೆಪಾಳ್ಯದ ನದೀಮ್ ಎಂಬುವವರ ಜೊತೆ ಮದುವೆ ಮಾಡಿಕೊಡಲಾಗಿದೆ. 42 ದಿನಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಫಾರ್ಹೀನಾ, ತವರು ಮನೆಯಲ್ಲಿ ಉಳಿದುಕೊಂಡಿದ್ದರು. ಮಗುವಿಗೆ ಶೇಕ್ ಆಯತ್ ಎಂಬುದಾಗಿ ಹೆಸರಿಡಲಾಗಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಶನಿವಾರ ಬೆಳಿಗ್ಗೆ 7.30 ಗಂಟೆ ಸುಮಾರಿಗೆ ಮಗುವಿಗೆ ಎದೆ ಹಾಲು ಕುಡಿಸಿದ್ದ ತಾಯಿ ಫಾರ್ಹೀನಾ, ಕೆಲ ನಿಮಿಷಗಳ ನಂತರ ನಿದ್ರೆಗೆ ಜಾರಿದ್ದರು. ಮಗು ಮಾತ್ರ ಎಚ್ಚರವಿತ್ತು. ಬಾಗಿಲು ತೆರೆದಿರುವುದನ್ನು ಗಮನಿಸಿದ್ದ ಆರೋಪಿ ಆಯೇಷಾ, ಒಳಗೆ ನುಗ್ಗಿದ್ದರು. ಫಾರ್ಹೀನಾ ಮೊಬೈಲ್ ತೆಗೆದುಕೊಂಡಿದ್ದರು. ಮಗುವನ್ನೂ ಎತ್ತಿಕೊಂಡಿದ್ದ ಆರೋಪಿ, ಯಾರಿಗಾದರೂ ಮಾರಿದರೆ ಹಣ ಬರುವುದಾಗಿ ತಿಳಿದು ಅದರ ಸಮೇತ ಸ್ಥಳದಿಂದ ಪರಾರಿಯಾಗಿದ್ದರು. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು’ ಎಂದು ಮೂಲಗಳು ತಿಳಿಸಿವೆ.
‘ಎಚ್ಚರಗೊಂಡಿದ್ದ ತಾಯಿ, ಮಗು ಕಾಣಿಸದಿದ್ದರಿಂದ ಗಾಬರಿಗೊಂಡಿದ್ದರು. ಸಂಬಂಧಿಕರೆಲ್ಲರೂ ಮಗುವಿಗಾಗಿ ಹುಡುಕಾಟ ಆರಂಭಿಸಿದ್ದರು. ಠಾಣೆಗೂ ಮಾಹಿತಿ ನೀಡಿದ್ದರು’ ಎಂದು ಹೇಳಿವೆ.
ಮಗು ತನ್ನದೆಂದು ನಾಟಕ: ‘ಮಾಗಡಿ ರಸ್ತೆಯ ರೈಲ್ವೆ ಕ್ವಾರ್ಟರ್ಸ್ ಬಳಿ ಆಯೆಷಾ ಮಗುವನ್ನು ಎತ್ತಿಕೊಂಡು ಹೊರಟಿದ್ದರು. ಬಾಟಲಿಯೊಂದರಲ್ಲಿ ಹಾಲು ಹಾಕಿಕೊಂಡು ಮಗುವಿಗೆ ಕುಡಿಸಲು ಯತ್ನಿಸುತ್ತಿದ್ದರು. ಆದರೆ, ಮಗು ಹಾಲು ಕುಡಿದಿರಲಿಲ್ಲ. ಹಸಿವಿನಿಂದ ಹೆಚ್ಚು ಅಳುತ್ತಿತ್ತು’ ಎಂದು ಸ್ಥಳೀಯ ನಿವಾಸಿ ಹೇಮಾವತಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕೆಲ ಜನರ ಬಳಿ ಹೋಗಿದ್ದ ಆಯೇಷಾ, ತನ್ನ ಹೆಸರು ನಂದಿನಿ ಎಂದಿದ್ದರು. ‘ಮಗು ಅಳುತ್ತಿದೆ. ನನ್ನ ಬಳಿ ಹಣವಿಲ್ಲ. ಹೊಟ್ಟೆಗೆ ಏನು ಕೊಟ್ಟಿಲ್ಲ. ಬಟ್ಟೆ ಸಹ ಇಲ್ಲ. ದಯವಿಟ್ಟು ಸಹಾಯ ಮಾಡಿ’ ಎಂದು ಅತ್ತಿದ್ದಳು. ಸ್ಥಳೀಯರೊಬ್ಬರು, ತಿನ್ನಲು ಆಹಾರ ಕೊಟ್ಟಿದ್ದರು. ಅಲ್ಲಿಯವರೆಗೂ ಮಗು ತನ್ನದೆಂದು ಆರೋಪಿ ನಾಟಕವಾಡಿದ್ದರು.’
‘ಆರೋಪಿ ಮುಖದ ಬಣ್ಣ ಕಪ್ಪಾಗಿತ್ತು. ಮಗು ನೋಡಲು ಚೆನ್ನಾಗಿತ್ತು. ಮಗು ಕೈಯಲ್ಲಿ ಚಿನ್ನದ ಕೈಗಡಗ ಇತ್ತು. ಅಷ್ಟಾದರೂ ಮಹಿಳೆ ತಿನ್ನಲು ಕೇಳುತ್ತಿದ್ದರು. ಹೀಗಾಗಿ, ಅವರ ಮೇಲೆ ಅನುಮಾನ ಬಂತು. ಹೆಚ್ಚು ವಿಚಾರಿಸುತ್ತಿದ್ದಂತೆ ಉತ್ತರಿಸಲು ತಡವರಿಸಿದ್ದ ಆರೋಪಿ, ಸ್ಥಳದಿಂದ ಓಡಲಾರಂಭಿಸಿದ್ದರು. ಮಗು ಪಡೆಯಲು ಹೋಗಿದ್ದವರ ಕೈ ಪರಚಿದ್ದರು’ ಎಂದರು.
‘ಆರೋಪಿಯನ್ನು ಹಿಡಿದು ಠಾಣೆಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಬಂದು ಪೊಲೀಸರು, ಮಹಿಳೆಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡರು. ಬಳಿಕ, ಪೊಲೀಸರು ಮಗುವನ್ನು ಸುರಕ್ಷಿತವಾಗಿ ಪೋಷಕರಿಗೆ ಒಪ್ಪಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
ಮೊಬೈಲ್ ಕಳ್ಳತನ ವೃತ್ತಿ: ‘ಆರೋಪಿ ಆಯೇಷಾ, ಮೊಬೈಲ್ ಕಳ್ಳತನ ಮಾಡುವುದನ್ನೇ ವೃತ್ತಿ ಮಾಡಿಕೊಂಡಿದ್ದರು. ಹಲವು ಠಾಣೆ ವ್ಯಾಪ್ತಿಯಲ್ಲಿ ಮೊಬೈಲ್ ಕದ್ದಿರುವ ಅವರು, ಅವುಗಳನ್ನು ಮಾರಿ ಬಂದ ಹಣದಲ್ಲಿ ಜೀವನ ನಡೆಸುತ್ತಿದ್ದರು. ಮಗುವನ್ನೂ ಮೊಬೈಲ್ ರೀತಿಯಲ್ಲಿ ಯಾರಿಗಾದರೂ ಮಾರಬಹುದೆಂದು ತಿಳಿದಿದ್ದರು. ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ಮಗು ಹೆತ್ತವರ ಮಡಿಲು ಸೇರಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಎದೆಹಾಲು ಉಣಿಸಿದ ತಾಯಿ ಹೃದಯ’
‘ಆರೋಪಿತ ಮಹಿಳೆ ಕೈಯಲ್ಲಿದ್ದ ಮಗುವನ್ನು ಸಿಬ್ಬಂದಿ ಸುಪರ್ದಿಗೆ ಪಡೆದಿದ್ದರು. ಹಸಿವಿನಿಂದಾಗಿ ಮಗು ಅಳು ನಿಲ್ಲಿಸಿರಲಿಲ್ಲ. ಮಗುವಿನ ಯಾತನೆ ಕಂಡ ಸ್ಥಳೀಯ ನಿವಾಸಿ ಕವಿತಾ, ಅದನ್ನು ಎತ್ತಿಕೊಂಡು ಎರಡು ಬಾರಿ ಎದೆಹಾಲು ಉಣಿಸಿದರು. ಮಗುವನ್ನು ಠಾಣೆಗೆ ಕರೆದೊಯ್ದು ಪೋಷಕರಿಗೆ ಒಪ್ಪಿಸುವವರೆಗೂ ಅದರ ಜೊತೆಗಿದ್ದರು’ ಎಂದು ಪೊಲೀಸರು ಹೇಳಿದರು.
‘ಕವಿತಾ ಕೆಲಸಕ್ಕೆ ಕೃತಜ್ಞತೆ ಸಲ್ಲಿಸಿದ ತಾಯಿ ಫಾರ್ಹೀನಾ, ‘ಧರ್ಮದ ಹಂಗು ಮೀರಿದ ತಾಯಿ ಹೃದಯ ನಿಮ್ಮದು. ಮಗುವನ್ನು ಹುಡುಕಿಕೊಟ್ಟ ನಿಮ್ಮೆಲ್ಲರ ಸಹಾಯವನ್ನು ಜೀವನಪರ್ಯಂತ ಮರೆಯುವುದಿಲ್ಲ’ ಎಂದು ಹೊಗಳಿದರು. ಮಗು ಹಸ್ತಾಂತರ ವೇಳೆ ಹಿಂದೂ–ಮುಸ್ಲಿಂ ಮುಖಂಡರೂ ಠಾಣೆಯಲ್ಲಿದ್ದರು’ ಎಂದು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.