ಮಂಗಳವಾರ, ಅಕ್ಟೋಬರ್ 26, 2021
20 °C

ಕುಡಿದ ಅಮಲಿನಲ್ಲಿ ಗಲಾಟೆ; ಮಗನ ಕೊಂದ ತಂದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ಸಂತೋಷ್ (29) ಎಂಬುವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದ್ದು, ಈ ಸಂಬಂಧ ಅವರ ತಂದೆ ಗುರುರಾಜ್ (58) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

‘ಸ್ಥಳೀಯ ಕೆಎಚ್‌ಬಿ ಕಾಲೊನಿಯಲ್ಲಿ ಸೋಮವಾರ ಮಧ್ಯಾಹ್ನ ಕೊಲೆ ನಡೆದಿದೆ. ಸಂಬಂಧಿಕರು ನೀಡಿದ್ದ ಮಾಹಿತಿ ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸಂತೋಷ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಆರೋಪಿ ಗುರುರಾಜ್, ವಾಹನ ಚಾಲನಾ ತರಬೇತಿ ಶಾಲೆ ನಡೆಸುತ್ತಿದ್ದ. ಮಗ ಸಂತೋಷ್ ಸಹ ಅದಕ್ಕೆ ಸಹಕಾರ ನೀಡುತ್ತಿದ್ದರು. ಮದ್ಯ ವ್ಯಸನಿಯಾಗಿದ್ದ ಗುರುರಾಜ್, ನಿತ್ಯವೂ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದರು. ಇದೇ ವಿಚಾರವಾಗಿ ನಿತ್ಯವೂ ತಂದೆ– ಮಗನ ನಡುವೆ ಜಗಳವಾಗುತ್ತಿತ್ತು’ ಎಂದೂ ತಿಳಿಸಿದರು.

ಚಾಕುವಿನಿಂದ ಎದೆಗೆ ಚುಚ್ಚಿದ: ‘ಸೋಮವಾರ ಮಧ್ಯಾಹ್ನವೇ ಮದ್ಯ ಕುಡಿದಿದ್ದ ಗುರುರಾಜ್, ಮನೆಗೆ ಬಂದು ಜಗಳ ತೆಗೆದಿದ್ದ. ಊಟ ಮಾಡುತ್ತಿದ್ದ ಸಂತೋಷ್, ತಂದೆಯ ವರ್ತನೆಯನ್ನು ಪ್ರಶ್ನಿಸಿದ್ದ. ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಪರಸ್ಪರ ಕೈ ಕೈ ಮಿಲಾಯಿಸಿದ್ದರು’ ಎಂದೂ ಪೊಲೀಸರು ವಿವರಿಸಿದರು.

‘ಸಿಟ್ಟಾಗಿದ್ದ ಗುರುರಾಜ್, ಮನೆಯಲ್ಲಿದ್ದ ಚಾಕುವಿನಿಂದ ಮಗನ ಎದೆಗೆ ಚುಚ್ಚಿದ್ದ. ಸ್ಥಳದಲ್ಲೇ ಕುಸಿದು ಬಿದ್ದಿದ್ದ ಸಂತೋಷ್‌ ಅವರನ್ನು ಸಂಬಂಧಿಕರು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದಾರೆ’ ಎಂದೂ ಅವರು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು