ಸೋಮವಾರ, ಜನವರಿ 25, 2021
16 °C
800ಕ್ಕೂ ಅಧಿಕ ಮಂದಿ ಹೆಸರು ನೋಂದಣಿ; ಕನ್ನಡ ಪರ ಕೆಲಸಗಳಿಗೆ ರೂಪರೇಷೆ ಸಿದ್ಧ

ಸಜ್ಜುಗೊಳ್ಳುತ್ತಿದೆ ಕನ್ನಡ ಕಾಯಕ ಪಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವರ್ಷಪೂರ್ತಿ ಕನ್ನಡ ಪರ ಕೆಲಸಗಳನ್ನು ಕೈಗೆತ್ತಿಕೊಳ್ಳಲು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ‘ಕನ್ನಡ ಕಾಯಕ ಪಡೆ’ ಸಜ್ಜುಗೊಳಿಸುತ್ತಿದೆ. ಒಂದು ವಾರದಲ್ಲಿಯೇ ಈ ಕಾರ್ಯಕ್ಕೆ 800 ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ.

ರಾಜ್ಯ ಸರ್ಕಾರವು ಮುಂದಿನ ಒಂದು ವರ್ಷವನ್ನು ‘ಕನ್ನಡ ಕಾಯಕ ವರ್ಷ’ ಎಂದು ಘೋಷಿಸಿದೆ. ಇದರ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಪ್ರಾಧಿಕಾರವು ಆಡಳಿತ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪರಿಣಾಮಕಾರಿಯಾಗಿ ಕನ್ನಡ ಅನುಷ್ಠಾನ ಮಾಡಲು ಮುಂದಾಗಿದೆ. ಕನ್ನಡೇತರರಿಗೆ ಕನ್ನಡ ಕಲಿಸುವ ಯೋಜನೆ ಹಮ್ಮಿಕೊಂಡಿದ್ದು, ಸದ್ಯ ಆನ್‌ಲೈನ್ ವೇದಿಕೆ ಬಳಸಿಕೊಳ್ಳಲಾಗುತ್ತಿದೆ. ಮುಂದುವರಿದ ಭಾಗವಾಗಿ ಅ‍ಪಾರ್ಟ್‌ಮೆಂಟ್ ಸಮುಚ್ಚಯ ಸೇರಿದಂತೆ ವಿವಿಧೆಡೆ ಕನ್ನಡ ಕಲಿಕೆ ಹಾಗೂ ಸಮುದಾಯದ ವಿವಿಧ ಹಂತಗಳಲ್ಲಿ ಭಾಷೆಯ ಬೆಳವಣಿಗೆಗೆ ಪೂರಕವಾದ 100ಕ್ಕೂ ಅಧಿಕ ಚಟುವಟಿಕೆಗಳನ್ನು ಕಾರ್ಯಗತಗೊಳಿಸಲು ರೂಪರೇಷೆ ಸಿದ್ಧಪಡಿಸಿದೆ.

‘ಸರ್ಕಾರವು ಘೋಷಿಸಿರುವ ಕನ್ನಡ ಕಾಯಕ ವರ್ಷದ ಭಾಗವಾಗಿ ಕನ್ನಡ ಕಾಯಕ ಪಡೆಯ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಈ ತಿಂಗಳ 30ರವರೆಗೂ ನೋಂದಣಿ ಪ್ರಕ್ರಿಯೆ ನಡೆಯಲಿದೆ. ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದು, 5 ಸಾವಿರ ಮಂದಿ ಇದರ ಭಾಗವಾಗುವ ಸಾಧ್ಯತೆಯಿದೆ. ಎಲ್ಲೆಡೆ ಕನ್ನಡಕ್ಕೆ ಆದ್ಯತೆ ದೊರೆಯುವಂತಾಗಬೇಕೆನ್ನುವುದು ನಮ್ಮ ಆಶಯವಾಗಿದ್ದು, ಕಾಯಕ ಪಡೆಯು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ’ ಎಂದು ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ತಿಳಿಸಿದರು.

‘ಹೆಸರು ನೋಂದಾಯಿಸಿಕೊಂಡವರನ್ನು ಚಿಕ್ಕ ಚಿಕ್ಕ ಗುಂಪುಗಳಾಗಿ ವಿಂಗಡಿಸಿ, ಅವರಿಗೆ ಕೆಲಸವನ್ನ ಹಂಚಿಕೆ ಮಾಡಲಾಗುವುದು. ಬಿಡುವಿನ ವೇಳೆಯಲ್ಲಿ ಕನ್ನಡ ಪರ ಕೆಲಸ ಮಾಡಲು ಇದು ಉತ್ತಮವಾದ ಅವಕಾಶ. ಅಂಗಡಿಗಳಲ್ಲಿ ಕನ್ನಡ ಬಳಸುವಂತೆ ಅರಿವು ಮೂಡಿಸುವುದು, ವಿದ್ಯಾರ್ಥಿಗಳಿಗೆ ಪ್ರಬಂಧ ಸೇರಿದಂತೆ ವಿವಿಧ ಸ್ಪರ್ಧೆಗಳ ಆಯೋಜನೆ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ನಡೆಸಬೇಕಾಗುತ್ತದೆ’ ಎಂದು ವಿವರಿಸಿದರು.

ಪ್ರಾಧಿಕಾರದ ಜಾಲತಾಣವಾದ kannadapraadhikaara.karnataka.gov.inನಲ್ಲಿ ಕನ್ನಡ ಕಾಯಕ ಪಡೆಯ ನೋಂದಣಿಯ ಕೊಂಡಿ ಲಭ್ಯವಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು