ಗುರುವಾರ , ಮೇ 26, 2022
25 °C
ಪರಿಷ್ಕೃತ ನಗರ ಮಹಾ ಯೋಜನೆಯ ಕರಡು ಕನ್ನಡಕ್ಕಿಲ್ಲ ಅವಕಾಶ ಷರತ್ತು ವಿಧಿಸಿದ್ದ ಬಿಡಿಎ

‌ಇಂಗ್ಲಿಷ್‌ನಲ್ಲಿ ಕರಡು: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪರಿಷ್ಕೃತ ನಗರ ಮಹಾ ಯೋಜನೆಯ (ಆರ್‌ಎಂಪಿ) ಕರಡನ್ನು ಇಂಗ್ಲಿಷ್‌ನಲ್ಲಿಯೇ ತಯಾರಿಸಬೇಕು ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಷರತ್ತು ವಿಧಿಸಿರುವುದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಖಂಡಿಸಿದೆ. ‘ಆಡಳಿತದಲ್ಲಿ ಕನ್ನಡ ಜಾರಿಗೊಳಿಸುವ ನೀತಿಗೆ ಇದು ವಿರುದ್ಧವಾದ ನಡೆ’ ಎಂದು ಟೀಕಿಸಿದೆ. 

ಈ ನಡೆಯನ್ನು ಖಂಡಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅವರು ಬಿಡಿಎ ಆಯುಕ್ತ ಎಂ.ಬಿ. ರಾಜೇಶ್ ಗೌಡ ಅವರಿಗೆ ಪತ್ರ ಬರೆದಿದ್ದಾರೆ. ‘ರಾಜಧಾನಿಯ ಭವಿಷ್ಯ ನಿರ್ಧರಿಸುವ ಯೋಜನೆಯೇ ಕನ್ನಡದಲ್ಲಿ ಇರುವುದಿಲ್ಲ!’ ಎಂಬ ಶೀರ್ಷಿಕೆಯಡಿ ಇದೇ 21ರಂದು ‘ಪ್ರಜಾವಾಣಿ’ಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ವರದಿಯ ಪ್ರತಿಯನ್ನೂ ಪತ್ರದೊಂದಿಗೆ ಅವರು ಲಗತ್ತಿಸಿದ್ದಾರೆ. 

‘2021ರವರೆಗೆ ನಗರದ ಬೆಳವಣಿಗೆ ಯಾವ ದಿಸೆಯಲ್ಲಿ ಸಾಗಬೇಕು ಎಂಬ ರೂಪುರೇಷೆಗಳನ್ನು ನಿರ್ಧರಿಸಲು ಆರ್‌ಎಂ‍ಪಿ ಕರಡು ಸಿದ್ಧಪಡಿಸುವ ಸಂಸ್ಥೆಗಳಿಂದ ಬಿಡಿಎ ಟೆಂಡರ್‌ ಆಹ್ವಾನಿಸಿದೆ. ಬೆಂಗಳೂರು ಸ್ಥಳೀಯ ಯೋಜನಾ ಪ್ರದೇಶಕ್ಕೆ ಅನ್ವಯವಾಗುವ ಈ ಆರ್‌ಎಂಪಿ ಕರಡು ಪ್ರಸ್ತಾವವು ಇಂಗ್ಲಿಷ್‌ನಲ್ಲಿಯೇ ಇರಬೇಕು ಎಂಬ ಷರತ್ತನ್ನು ಪ್ರಾಧಿಕಾರ ವಿಧಿಸಿದೆ. ಈ ಕ್ರಮ ಸರಿಯಲ್ಲ’ ಎಂದು ನಾಗಾಭರಣ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

‘ರಾಜಧಾನಿಯಲ್ಲಿಯೇ ರಾಜ್ಯದ ಆಡಳಿತ ಭಾಷೆ ಕನ್ನಡವನ್ನು ಕಡೆಗಣಿಸಿರುವುದು ಖಂಡನೀಯ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಬೆಂಗಳೂರು ನಗರದ ಅಭಿವೃದ್ಧಿಗೆ ಸಂಬಂಧಪಟ್ಟ ವಿಚಾರಗಳನ್ನು ಆಡಳಿತ ಭಾಷೆಯಲ್ಲಿ ತಿಳಿದುಕೊಳ್ಳುವುದು ಪ್ರತಿಯೊಬ್ಬ ಕನ್ನಡಿಗನ ಹಕ್ಕು.  ಈ ಬಗ್ಗೆ ಪರಿಶೀಲಿಸಿ, ಕ್ರಮ ಕೈಗೊಳ್ಳಬೇಕು. ಪತ್ರ ತಲುಪಿದ ಮೂರು ದಿನಗಳ ಒಳಗೆ ಈ ಕುರಿತು ವರದಿ ಕಳುಹಿಸಬೇಕು’ ಎಂದು ಅವರು ಸೂಚಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು