ಮಂಗಳವಾರ, ಸೆಪ್ಟೆಂಬರ್ 21, 2021
25 °C
ಶಾಸಕರ ಮನವೊಲಿಸುವ ಕಾರ್ಯವೂ ಆಗಿಲ್ಲ l ಸರ್ಕಾರಕ್ಕೆ ಇಚ್ಛಾಶಕ್ತಿ ಕೊರತೆ ---

‘ಕನ್ನಡ ಮಾಧ್ಯಮ: ಪಕ್ಷಗಳಿಗೆ ಆಸಕ್ತಿ ಇಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಜಾರಿ ಮಾಡಲು ಯಾವ ರಾಜಕೀಯ ಪಕ್ಷಗಳಿಗೂ ಆಸಕ್ತಿ ಇಲ್ಲ. ಈ ನಿಟ್ಟಿನಲ್ಲಿ ಎಲ್ಲ ಶಾಸಕರ ಮನವೊಲಿಸುವ ಕಾರ್ಯವೂ ಆಗಿಲ್ಲ. ಅಲ್ಲದೆ, ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ರಾಜಕಾರಣಿಗಳಿಗೇ ಸೇರಿರುವುದರಿಂದ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕುರಿತಂತೆ ಇಚ್ಛಾಶಕ್ತಿಯ ಕೊರತೆಯೂ ಎದ್ದು ಕಾಣುತ್ತದೆ. 

‘ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಜಾರಿ’ ವಿಷಯ ಕುರಿತು ಶುಕ್ರವಾರ ನಡೆದ ಚಿಂತನಾ ಸಭೆಯಲ್ಲಿ ತಜ್ಞರು ವ್ಯಕ್ತಪಡಿಸಿದ ಅಭಿಪ್ರಾಯವಿದು. ಕನ್ನಡ ಕ್ರಿಯಾ ಸಮಿತಿ ಹಾಗೂ ಕರ್ನಾಟಕ ವಿಕಾಸ ರಂಗ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಯೋಜಿಸಿದ್ದ ಈ ಸಭೆಯ ಅಧ್ಯಕ್ಷತೆಯನ್ನು ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ವಹಿಸಿದ್ದರು.

ಸಭೆಯಲ್ಲಿ ಕೈಗೊಂಡ ನಿರ್ಣಯಗಳು

* ರಾಜ್ಯದ ಒಂದು ಸಾವಿರ ಸರ್ಕಾರಿ ಶಾಲೆಗಳಲ್ಲಿ ಜಾರಿಗೊಳಿಸಿರುವ ಇಂಗ್ಲಿಷ್‌ ಮಾಧ್ಯಮ ತರಗತಿ ರದ್ದುಗೊಳಿಸಬೇಕು 

* ಖಾಸಗಿ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಶಿಕ್ಷಣ ಜಾರಿಗೊಳಿಸಬೇಕು 

* ದೇಶದಲ್ಲಿ ಏಕರೂಪದ ಶಿಕ್ಷಣ ವ್ಯವಸ್ಥೆ ಜಾರಿಗೆ ತಾರತಮ್ಯ ನಿವಾರಿಸಬೇಕು 

‘ಪೋಷಕರಿಗೆ ಇಂಗ್ಲಿಷ್‌ ವ್ಯಾಮೋಹ ಎಂಬುದು ಸರಿಯಲ್ಲ’ 

‘ಪೋಷಕರಿಗೆ ಇಂಗ್ಲಿಷ್‌ ವ್ಯಾಮೋಹ ಎನ್ನುವುದು ಸರಿಯಲ್ಲ. ಅಧಿಕಾರಿಗಳು ತಮಗೆ ಬೇಕಾದಂತೆ ಹೇಳಿ ದಾರಿ ತಪ್ಪಿಸುತ್ತಾರೆ. ಒಂದು ಸಾವಿರ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಜಾರಿ ವಿಚಾರದಲ್ಲಿ ಅಧಿಕಾರಿಗಳೇ ಪ್ರಮುಖ ಪಾತ್ರ ವಹಿಸಿದಂತಿದೆ’ ಎಂದು ಕಾಂಗ್ರೆಸ್‌ ಮುಖಂಡ ಬಿ.ಕೆ. ಚಂದ್ರಶೇಖರ್‌ ಹೇಳಿದರು. 

‘ಒಂದನೆಯ ತರಗತಿಯಿಂದ ಮಕ್ಕಳು ಇಂಗ್ಲಿಷ್‌ನಲ್ಲಿ ಮಾತನಾಡುವಂತೆ ಮಾಡಬೇಕು. ಆದರೆ, ಇದಕ್ಕಾಗಿ ಪಠ್ಯಕ್ರಮ, ಉತ್ತೀರ್ಣ–ಅನುತ್ತೀರ್ಣ, ವ್ಯಾಕರಣ ಯಾವುದು ಇರಬಾರದು. ಸುಮ್ಮನೆ ಮಾತನಾಡಲು ಕಲಿಸಬೇಕು ಎಂಬ ನಿರ್ಧಾರವನ್ನು ನಾನು ಶಿಕ್ಷಣ ಸಚಿವನಾಗಿದ್ದಾಗ ತೆಗೆದುಕೊಂಡಿದ್ದೆ. ಆದರೆ, ಅದನ್ನ ಕಾರ್ಯರೂಪಕ್ಕೆ ತರಲು ಆಗಲಿಲ್ಲ’ ಎಂದರು. 

 ‘ಏಕರೂಪ ಶಿಕ್ಷಣ ವ್ಯವಸ್ಥೆ ಪರಿಹಾರ’

‘ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಗಳಿಗೆ ಏಕರೂಪ ಶಿಕ್ಷಣ ವ್ಯವಸ್ಥೆಯೇ ಪರಿಹಾರವಾಗಿದೆ. ದಕ್ಷಿಣ ಭಾರತದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗ
ಳನ್ನು ಕರೆದು ನಿರ್ಣಯ ಕೈಗೊಂಡು ಕೇಂದ್ರಕ್ಕೆ ಒತ್ತಾಯಿಸಬೇಕು ಎಂದು ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದೆ. ಆದರೆ, ಈ ನಿಟ್ಟಿನಲ್ಲಿ ಯಾವುದೇ ಪ್ರಗತಿ ಆಗಲಿಲ್ಲ’ ಎಂದು ಜೆಡಿಎಸ್‌ ಮುಖಂಡ ವೈ.ಎಸ್.ವಿ. ದತ್ತ ಹೇಳಿದರು.

‘ಮಾತೃಭಾಷೆ ಬದಲು ರಾಜ್ಯಭಾಷೆಯಾಗಿ ಪರಿಗಣಿಸಲಿ’ 

ಸಭೆಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗೈರು ಹಾಜರಾಗಿದ್ದರು. ಆದರೆ, ಅವರು ಕಳುಹಿಸಿದ್ದ ಸಂದೇಶ ಪತ್ರವನ್ನು ಸಭೆಯಲ್ಲಿ ಓದಲಾಯಿತು. 

‘ಭಾಷಾ ಮಾಧ್ಯಮವನ್ನು ಕಡ್ಡಾಯ ಮಾಡುವಂತಿಲ್ಲ. ಅದು ಮಕ್ಕಳ ಹೆತ್ತವರ ಆಯ್ಕೆ ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಇದಕ್ಕೆ ಧೃತಿಗಡದೆ ಎಲ್ಲರೂ ಪರ್ಯಾಯ ಮಾರ್ಗದ ಬಗ್ಗೆ ಯೋಚಿಸಬೇಕು. ನ್ಯಾಯಾಲಯವು ಕನ್ನಡವನ್ನು ಮಾತೃಭಾಷೆಯಾಗಿ ನೋಡದೆ, ರಾಜ್ಯಭಾಷೆಯಾಗಿ ಪರಿಗಣಿಸಬೇಕು’ ಎಂದು ಅವರು ತಿಳಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು