ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಸಾಹಿತ್ಯ ಪರಿಷತ್ತು: ದಶಕದ ಬಳಿಕ ನವೀಕರಣ

ಸಿಎಸ್‌ಆರ್ ನಿಧಿಯಡಿ ಸ್ಥಿರ ಆಸನ ಸೇರಿ ವಿವಿಧ ಸೌಲಭ್ಯ ಒದಗಿಸಲು ಯೋಜನೆ
Last Updated 7 ಅಕ್ಟೋಬರ್ 2021, 20:40 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಹೃದಯ ಭಾಗದಲ್ಲಿರುವ ಶ್ರೀ ಕೃಷ್ಣರಾಜ ಪರಿಷನ್ಮಂದಿರವನ್ನು ದಶಕದ ಬಳಿಕ ನವೀಕರಣಗೊಳಿಸಲು ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಮುಂದಾಗಿದೆ.

ಪರಿಷತ್ತಿನಲ್ಲಿ ಮೂರು ಸಭಾಂಗಣಗಳಿದ್ದು, ಶ್ರೀ ಕೃಷ್ಣರಾಜ ಪರಿಷನ್ಮಂದಿರವು ನಗರದ ಅತ್ಯಂತ ಹಳೆಯ ಸಭಾಂಗಣಗಳಲ್ಲಿ ಒಂದಾಗಿದೆ. ಇದು 1938ರಿಂದ ಕಾರ್ಯನಿರ್ವಹಿಸುತ್ತಿದೆ. ಕಾಲ ಕಾಲಕ್ಕೆ ಈ ಸಭಾಂಗಣವನ್ನು ನವೀಕರಣ ಮಾಡುತ್ತಾ ಬರಲಾಗಿದೆ.ಹತ್ತು ವರ್ಷಗಳ ಹಿಂದೆ ಪ್ಲೈವುಡ್‌ನಿಂದ ಸಭಾಂಗಣದ ಗೋಡೆಗಳನ್ನು ಅಂದಗೊಳಿಸಲಾಗಿತ್ತು. ಸೀಲಿಂಗ್‌ ಅನ್ನು ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಬಳಸಿ ಅಂದಗೊಳಿಸಲಾಗಿತ್ತು. ಆದರೆ, ಈಗ ಸಭಾಂಗಣದ ಪ್ಲೈವುಡ್‌ಗಳು ಹಾಳಾಗಿದ್ದು, ಕೆಲವೆಡೆ ಕಿತ್ತು ಹೋಗಿವೆ.

ವೇದಿಕೆಯ ನೆಲ ಹಾಸು ಕೂಡ ಹಾಳಾಗಿದೆ.ಸಭಾಂಗಣದಲ್ಲಿ ಜೋಡಿಸಿದ ಸ್ಥಿರ ಆಸನಗಳು ಇಲ್ಲದಿರುವುದರಿಂದ ಪ್ರೇಕ್ಷಕರ ಸಂಖ್ಯೆಗೆ ಅನುಗುಣವಾಗಿ160ರಿಂದ 180 ಆಸನಗಳನ್ನು ಅಳವಡಿಸಲಾಗುತ್ತಿತ್ತು. ಈಗಕಾರ್ಪೊರೇಟ್‌ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್‌) ಅಡಿಯಲ್ಲಿ ಸಭಾಂಗಣ ನವೀಕರಣ ಮಾಡಿ, ಸ್ಥಿರ ಆಸನಗಳ ಅಳವಡಿಕೆಗೆ ಪರಿಷತ್ತು ಯೋಜನೆ ರೂಪಿಸಿದೆ. ಸಿಎಸ್‌ಆರ್ ನಿಧಿ ಅಡಿಯಲ್ಲಿ ಸಭಾಂಗಣಕ್ಕೆ ಅಗತ್ಯ ಸೌಲಭ್ಯ ಒದಗಿಸಲು ಕೆಲವೊಂದು ಬ್ಯಾಂಕ್‌ಗಳು ಮುಂದೆ ಬಂದಿವೆ.

ಧ್ವನಿ ಸಮಸ್ಯೆ: ಪರಿಷತ್ತು 100 ವರ್ಷಗಳು ಪೂರೈಸಿದ ಸವಿನೆನಪಿಗಾಗಿ ನಿರ್ಮಿಸಲಾಗಿದ್ದ ಶತಮಾನೋತ್ಸವ ಸ್ಮಾರಕ ಭವನವು 2018ರಲ್ಲಿ ಉದ್ಘಾಟನೆಗೊಂಡಿತ್ತು. ₹ 5 ಕೋಟಿ ವೆಚ್ಚದ ಭವನದ ಮೂರನೇ ಮಹಡಿಯಲ್ಲಿ ಸಭಾಂಗಣ ನಿರ್ಮಿಸಿ, ಅಕ್ಕಮಹಾದೇವಿ ಹೆಸರನ್ನು ಇಡಲಾಗಿತ್ತು. ಈ ಸಭಾಂಗಣದಲ್ಲಿಯೂ ಸ್ಥಿರ ಆಸನಗಳಿಲ್ಲ. ಅಲ್ಲಿ 180 ಆಸನಗಳನ್ನು ಹಾಕಬಹುದಾಗಿದೆ.ಈಗ ಸ್ಥಿರ ಆಸನ ಅಳವಡಿಕೆ ಮಾಡಲು ಪರಿಷತ್ತು ಮುಂದಾಗಿದೆ.

ಪ್ರಾರಂಭದಿಂದಲೂ ಈ ಸಭಾಂಗಣದ ಧ್ವನಿ ವ್ಯವಸ್ಥೆಯಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ವೇದಿಕೆಯಲ್ಲಿ ಮಾತನಾಡಿದವರ ಧ್ವನಿಯು ಪ್ರತಿಧ್ವನಿಸುವುದರಿಂದ ಪ್ರೇಕ್ಷಕರಿಗೆ ಕಿರಿಕಿರಿ ಆಗಲಿದೆ.ಈ ಸಮಸ್ಯೆಯನ್ನು ಪರಿಹರಿಸಬೇಕೆಂಬ ಒತ್ತಾಯ ಸಾಹಿತ್ಯಾಸಕ್ತರಿಂದ ವ್ಯಕ್ತವಾಗಿತ್ತು. ಈಗ ಆ ಸಮಸ್ಯೆಯನ್ನೂ ಸಿಎಸ್‌ಆರ್ ನಿಧಿಯಿಂದ ಪರಿಹರಿಸಲು ಯೋಜನೆ ರೂಪಿಸಲಾಗಿದೆ.

ಶ್ರೀ ಕೃಷ್ಣರಾಜ ಪರಿಷನ್ಮಂದಿರ ಹಾಗೂ ಅಕ್ಕಮಹಾದೇವಿ ಸಭಾಂಗಣಕ್ಕೆದಿನವೊಂದಕ್ಕೆ ₹ 5 ಸಾವಿರ, ಅರ್ಧ ದಿನಕ್ಕೆ ₹ 3 ಸಾವಿರ ಬಾಡಿಗೆಯನ್ನು ಪರಿಷತ್ತು ನಿಗದಿ ಮಾಡಿದೆ. ₹ 2 ಸಾವಿರ ಠೇವಣಿ ಕಟ್ಟಬೇಕಿದೆ.

₹ 1 ಕೋಟಿ ವೆಚ್ಚದಲ್ಲಿ ಯೋಜನೆ

ಕನ್ನಡ ಸಾಹಿತ್ಯ ಪರಿಷತ್ತಿನ ಕಟ್ಟಡದ ಕೆಲ ಕೊಠಡಿಗಳು ಹಾಗೂ ಸಭಾಂಗಣದ ನವೀಕರಣಕ್ಕೆ ₹ 1 ಕೋಟಿ ವೆಚ್ಚವಾಗಲಿದೆ ಎಂದು ಪರಿಷತ್ತು ಅಂದಾಜಿಸಿದೆ. ಅಧ್ಯಕ್ಷರ ಕೊಠಡಿಯನ್ನೂ ನವೀಕರಣ ಮಾಡಲು ಯೋಜನೆ ರೂಪಿಸಲಾಗಿದೆ. ಪರಿಷತ್ತಿನ ವಜ್ರಮಹೋತ್ಸವ ಕಟ್ಟಡದ ಮೂರನೇ ಮಹಡಿಯಲ್ಲಿರುವ ಕುವೆಂಪು ಸಭಾಂಗಣದಲ್ಲಿ ಚುನಾವಣೆ ಚಟುವಟಿಕೆಗಳು ನಡೆಯುತ್ತಿವೆ. ಹಾಗಾಗಿ, ಕಿರಿದಾದ ಈ ಸಭಾಂಗಣವನ್ನು ನವೀಕರಣ ಮಾಡುತ್ತಿಲ್ಲ. ಇದಕ್ಕೆ
₹2 ಸಾವಿರ ಬಾಡಿಗೆಯನ್ನು ನಿಗದಿ ಮಾಡಲಾಗಿದೆ.

***

ಪರಿಷತ್ತಿನ ಕಟ್ಟಡವು ತುಂಬಾ ಹಳೆಯದಾಗಿದ್ದು, ಸೋರುತ್ತಿದೆ. ಸಭಾಂಗಣಗಳಲ್ಲಿ ಸ್ಥಿರ ಆಸನಗಳು ಇಲ್ಲ. ಸಿಎಸ್‌ಆರ್ ನಿಧಿಯಡಿ ಕಟ್ಟಡ, ಸಭಾಂಗಣವನ್ನು ನವೀಕರಣ ಮಾಡಲು ಮುಂದಾಗಿದ್ದೇವೆ

-ಎಸ್. ರಂಗಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತಾಧಿಕಾರಿ

***

ಸಿಎಸ್‌ಆರ್ ನಿಧಿಯ ಮೂಲಕ ಸಭಾಂಗಣಗಳ ನವೀಕರಣಕ್ಕೆ ಈ ಹಿಂದೆ ಪ್ರಯತ್ನ ನಡೆಸಿದ್ದೆ. ಆಗ ಕಂಪನಿಗಳು ಮುಂದೆ ಬಂದಿರಲಿಲ್ಲ. ಈಗ ಕಂಪನಿಗಳು ಆಸಕ್ತಿ ತೋರಿರುವುದು ಸಂತಸದ ಸಂಗತಿ

-ಮನು ಬಳಿಗಾರ್, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT