ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಲನಚಿತ್ರ ಕಲಾವಿದ ಉಮೇಶ್ ಸೇರಿ ಐವರಿಗೆ ಕಸಾಪ ದತ್ತಿ ಪ್ರಶಸ್ತಿ ಪ್ರದಾನ

Published 20 ಏಪ್ರಿಲ್ 2024, 16:57 IST
Last Updated 20 ಏಪ್ರಿಲ್ 2024, 16:57 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಬೆಂಗಳೂರು: ‘ದಿವಂಗತ ನಟ ರಾಜಕುಮಾರ್ ಅವರು ಕನ್ನಡ ಸಂಸ್ಕೃತಿಯ ಪ್ರತೀಕದಂತಿದ್ದರು. ಅವರು ತಮ್ಮ ಅಭಿನಯ ಮತ್ತು ಬದುಕಿನ ರೀತಿಯಿಂದ ಮಾದರಿ ಎನಿಸಿಕೊಂಡಿದ್ದರು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದರು.

ಕಸಾಪ ನಗರದಲ್ಲಿ ಶನಿವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಚಲನಚಿತ್ರ ಕಲಾವಿದ ಎಂ.ಎಸ್. ಉಮೇಶ್ ಅವರಿಗೆ ‘ಡಾ.ರಾಜಕುಮಾರ್ ಸಂಸ್ಕೃತಿ ದತ್ತಿ ಪ್ರಶಸ್ತಿ’, ಬಿ.ನಂಜುಂಡಸ್ವಾಮಿ, ಕವಿತಾ ಮಿಶ್ರಾ, ಮಲ್ಲಿಕಾರ್ಜುನ ಕೆಂಕೆರೆ ಹಾಗೂ ನಿಸರ್ಗ ಸಂಗೀತ ವಿದ್ಯಾಲಯದ ಪರವಾಗಿ ಮಲ್ಲಯ್ಯ ಕೊಮಾರಿ ಅವರಿಗೆ ‘ಪ್ರೊ.ಸಿ.ಎಚ್. ಮರಿದೇವರು ಪ್ರತಿಷ್ಠಾನ ದತ್ತಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹೇಶ ಜೋಶಿ, ‘ರಾಜಕುಮಾರ್ ಅವರು ಸಂತ ಶ್ರೇಷ್ಠರಾದ ಕನಕದಾಸ, ಪುರಂದರದಾಸ, ಸರ್ವಜ್ಞ, ತುಕಾರಂ, ಕಬೀರ ಮೊದಲಾದವರ ಪಾತ್ರಗಳಿಗೆ ಜೀವ ತುಂಬಿದರು. ಇಮ್ಮಡಿ ಪುಲಕೇಶಿ, ಮಯೂರ, ಶ್ರೀಕೃಷ್ಣದೇವರಾಯ ಮೊದಲಾದ ಕನ್ನಡ ನಾಡಿನ ವೀರರನ್ನು ಬೆಳ್ಳಿತೆರೆಯ ಮೂಲಕ ಜೀವಂತವಾಗಿಸಿದರು. ಬಾಂಡ್‌ನಿಂದ ಭಕ್ತನವರೆಗೆ, ಚಮ್ಮಾರನಿಂದ ಚಕ್ರವರ್ತಿಯವರೆಗೆ ಎಲ್ಲ ಮಾದರಿಯ ಪಾತ್ರಗಳನ್ನು ಮಾಡಿ, ಕನ್ನಡ ಸಾಂಸ್ಕೃತಿಕ ಲೋಕವನ್ನು ಶ್ರೀಮಂತಗೊಳಿಸಿದರು’ ಎಂದು ಹೇಳಿದರು. 

ಪ್ರಶಸ್ತಿ ಪ್ರದಾನ ಮಾಡಿದ ಚಲನಚಿತ್ರ ನಟ ರಮೇಶ್ ಭಟ್, ‘ಇತ್ತೀಚೆಗೆ ಪ್ರಶಸ್ತಿ ಕೂಡ ಮಾರಾಟದ ವಸ್ತುವಾಗಿದೆ. ಇಂತಹ ಸಂದರ್ಭದಲ್ಲಿ ನೈಜ ಸಾಧಕರನ್ನು ಗುರುತಿಸಿ, ಗೌರವಿಸುವುದು ಶ್ಲಾಘನೀಯ’ ಎಂದು ತಿಳಿಸಿದರು. 

ರಂಗಭೂಮಿ ದಿನಗಳಿಂದಲೂ ತಮಗೆ ದೊರೆತ ರಾಜಕುಮಾರ್ ಅವರ ಒಡನಾಟವನ್ನು ಸ್ಮರಿಸಿಕೊಂಡ ಎಂ.ಎಸ್.ಉಮೇಶ್, ‘ಅವರ ಹೆಸರಿನ ಪ್ರಶಸ್ತಿ ದೊರೆತಿರುವುದು ಧನ್ಯತೆಯ ಭಾವವನ್ನು ತಂದಿದೆ’ ಎಂದರು.

ಪ್ರೊ.ಎಂ.ಎಚ್.ಮರಿದೇವರು ಪ್ರಶಸ್ತಿ ದಾನಿಗಳ ಪರವಾಗಿ ಮಾತನಾಡಿದ ಎಸ್.ರಾಜಶೇಖರ್, ಪುರಸ್ಕಾರದ ಮಹತ್ವ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT