ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾನೂನು ಅನುಷ್ಠಾನ ಮಾಡದಿದ್ದರಿಂದ ಹೋರಾಟ: ಬಸವರಾಜ ಬೊಮ್ಮಾಯಿ

ಕಸಾಪ ನವೀಕೃತ ಸಭಾಂಗಣ ಉದ್ಘಾಟನೆ
Published : 29 ಡಿಸೆಂಬರ್ 2023, 15:49 IST
Last Updated : 29 ಡಿಸೆಂಬರ್ 2023, 15:49 IST
ಫಾಲೋ ಮಾಡಿ
Comments

ಬೆಂಗಳೂರು: ‘ಕನ್ನಡ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸರ್ಕಾರವು ಕಾನೂನನ್ನು ಸಮರ್ಪಕವಾಗಿ ಜಾರಿ ಮಾಡದಿದ್ದರಿಂದ ಕನ್ನಡ ಪರ ಸಂಘಟನೆಗಳು ಹೋರಾಟದ ಹಾದಿ ಹಿಡಿಯಬೇಕಾಗಿದೆ’ ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ತಿಳಿಸಿದರು. 

ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ನಗರದಲ್ಲಿ ಶುಕ್ರವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ನವೀಕೃತ ಕುವೆಂಪು ಸಭಾಂಗಣ ಹಾಗೂ ಕುವೆಂಪು ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. 

‘ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಸೇರಿ ಕನ್ನಡ ಪರ ಹೋರಾಟಗಾರರನ್ನು ಸರ್ಕಾರ ಜೈಲಿಗೆ ಹಾಕಿರುವುದು ದುಃಖವನ್ನುಂಟುಮಾಡಿದೆ. ಕನ್ನಡಪರ ಹೋರಾಟಗಾರರನ್ನು ನಾವು ಬೆಂಬಲಿಸಬೇಕು. ನಾನು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಕನ್ನಡಪರ ಹೋರಾಟಗಾರರ ಮೇಲಿನ ಸುಮಾರು ಎರಡು ಸಾವಿರ ಪ್ರಕರಣಗಳನ್ನು ವಾಪಸ್ ಪಡೆಯಲಾಗಿತ್ತು. ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸಬೇಕೆಂಬ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡದಿರುವುದರಿಂದ ಈ ಪರಿಸ್ಥಿತಿ ಬಂದಿದೆ. ಆಡಳಿತಗಾರರಿಗೆ ಸೂಕ್ಷ್ಮತೆ ಇರಬೇಕು’ ಎಂದು ಹೇಳಿದರು.

‘ನಮ್ಮ ಸರ್ಕಾರದ ಅವಧಿಯಲ್ಲಿ ಕನ್ನಡ ಸಮಗ್ರ ಭಾಷಾ ಅಭಿವೃದ್ಧಿ ಮಸೂದೆ-2022 ಜಾರಿಗೊಳಿಸಿದ್ದೇವು. ಇದನ್ನು ಹಾಲಿ ಸರ್ಕಾರ ಅನುಷ್ಠಾನ ಮಾಡದಿದ್ದರಿಂದ ಕನ್ನಡಪರ ಹೋರಾಟಗಾರರು ಪ್ರತಿಭಟನೆಗೆ ಇಳಿದಿದ್ದಾರೆ. ಕನ್ನಡ ನಿತ್ಯ ನಿರಂತರ ಆಗಬೇಕಾದರೆ ಕನ್ನಡಡಿಗರು ಜಾಗೃತರಾಗಿರಬೇಕು’ ಎಂದು ತಿಳಿಸಿದರು. 

ಕಸಾಪ ಅಧ್ಯಕ್ಷ ಮಹೇಶ ಜೋಶಿ, ‘ಕುವೆಂಪು ಅವರು ತಮ್ಮ ಸಾಹಿತ್ಯದ ಮೂಲಕ ವೈಚಾರಿಕತೆಯ ವಾಣಿಯಾಗಿದ್ದರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ವಿಮರ್ಶಕ ಎಚ್‌.ಎಸ್. ಸತ್ಯನಾರಾಯಣ, ‘ಕನ್ನಡದಲ್ಲಿ ಇಡೀ ಆಧುನಿಕ ಸಾಹಿತ್ಯಗಳ ಪ್ರಕಾರಗಳು ಆರಂಭವಾದದ್ದು ಕುವೆಂಪು ಅವರಿಂದ. ಅವರನ್ನು ಅಪ್ರಸ್ತುತಗೊಳಿಸುವ ಪ್ರಯತ್ನಗಳನ್ನು ನೋಡಿದ್ದೇವೆ. ಅವರನ್ನು ಹೊಸ ತಲೆಮಾರಿನವರಿಗೆ ತಲುಪಿಸುವ ಕೆಲಸವಾಗಬೇಕು’ ಎಂದು ಹೇಳಿದರು. 

ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ ಅವರು ಕುವೆಂಪು ರಚನೆಯ ‘ಹೃದಯ ಪ್ರಪಾತಕ್ಕೆ ಧುಮುಕುತಿದೆ ರಸದಧ್ವನಿ..’ ಗೀತೆಯನ್ನು ಪ್ರಸ್ತುತಪಡಿಸಿದರು. ಬಳಿಕ ಕುವೆಂಪು ಅವರ ಬಗ್ಗೆ ವಿಶೇಷ ಉಪನ್ಯಾಸ, ಕವಿತೆ ವಾಚನ ಹಾಗೂ ಗೀತ ಗಾಯನ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT