ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಅನುದಾನ ಬಾಕಿ: 5 ತಿಂಗಳು ಕಳೆದರೂ ಹಣ ಇಲ್ಲ

ಐದು ತಿಂಗಳು ಕಳೆದರೂ ಪೂರ್ಣ ಹಣ ಬಿಡುಗಡೆ ಮಾಡದ ಕಸಾಪ ರಾಜ್ಯ ಘಟಕ
Published 28 ಆಗಸ್ಟ್ 2023, 20:20 IST
Last Updated 28 ಆಗಸ್ಟ್ 2023, 20:20 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು 16ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಿ ಐದು ತಿಂಗಳು ಕಳೆದರೂ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ರಾಜ್ಯ ಘಟಕ ಪೂರ್ಣ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಇದರಿಂದಾಗಿ ಸಮ್ಮೇಳನದ ಖರ್ಚು ವೆಚ್ಚ ಭರಿಸುವುದು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಸವಾಲಾಗಿ ಪರಿಣಮಿಸಿದೆ. 

ಈಶಾನ್ಯ ಬೆಂಗಳೂರಿನಲ್ಲಿ ಕಳೆದ ಮಾರ್ಚ್‌ 11, 12ರಂದು ಸಮ್ಮೇಳನ ನಡೆಸಲಾಗಿತ್ತು. 15ನೇ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು 2021ರ ಮಾರ್ಚ್‌ ತಿಂಗಳು ಹೆಬ್ಬಾಳದಲ್ಲಿ ನಡೆಸಲಾಗಿತ್ತು. ಕೋವಿಡ್ ಕಾರಣ 2022ರಲ್ಲಿ ಸಮ್ಮೇಳನ ನಡೆದಿರಲಿಲ್ಲ. 16ನೇ ಸಾಹಿತ್ಯ ಸಮ್ಮೇಳನವನ್ನು ವಸಂತನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ನಡೆಸಲಾಗಿತ್ತು. ಲೇಖಕಿ ಎಚ್.ಎಸ್. ಶ್ರೀಮತಿ ಅವರು ಸಮ್ಮೇಳನಾಧ್ಯಕರಾಗಿದ್ದರು. ಈ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಕಸಾಪ ರಾಜ್ಯ ಘಟಕವು ₹ 4 ಲಕ್ಷ ಅನುದಾನವನ್ನು ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಬಿಡುಗಡೆ ಮಾಡಿದ್ದು, ₹ 1 ಲಕ್ಷ ಬಾಕಿ ಉಳಿಸಿಕೊಂಡಿದೆ. ಇದು ಪದಾಧಿಕಾರಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಪರಿಷತ್ತಿನ ಜಿಲ್ಲಾ ಘಟಕಗಳಿಗೆ ಮೊದಲಿನಿಂದಲೂ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ತಲಾ ₹ 5 ಲಕ್ಷ ಅನುದಾನವನ್ನು ಸರ್ಕಾರಗಳು ಕಸಾಪ ರಾಜ್ಯ ಘಟಕದ ಮೂಲಕ ಒದಗಿಸುತ್ತಿವೆ. ಸಭಾಂಗಣಗಳ ಬಾಡಿಗೆ ಸೇರಿ ವಿವಿಧ ವೆಚ್ಚಗಳು ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿರುವುದರಿಂದ ಹೆಚ್ಚುವರಿ ಅನುದಾನವನ್ನು ಜಿಲ್ಲಾ ಘಟಕಗಳು ದಾನಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಸಂಗ್ರಹಿಸುತ್ತಿವೆ.

₹ 10 ಲಕ್ಷ ವೆಚ್ಚ: ಹೊಸ ಕಾರ್ಯಕಾರಿ ಸಮಿತಿಯ ಮೊದಲ ಸಮ್ಮೇಳನ ಇದಾಗಿತ್ತು. ವಿಧಾನಸೌಧದ ಮುಂಭಾಗದಲ್ಲಿರುವ ಶಾಂತವೇರಿ ಗೋಪಾಲಗೌಡ ವೃತ್ತದಿಂದ ವಸಂತನಗರದಲ್ಲಿರುವ ಅಂಬೇಡ್ಕರ್ ಭವನದವರೆಗೆ ಸಾರೋಟ್‌ನಲ್ಲಿ ಕನ್ನಡ ಮಾತೆಯ ಪ್ರತಿಮೆ ಇರಿಸಿ, ಕನ್ನಡ ಜಾಗೃತಿ ಮೆರವಣಿಗೆ ನಡೆಸಲಾಗಿತ್ತು. ಬೆಂಗಳೂರಿನಲ್ಲಿ ಕನ್ನಡದ ವಾತಾವರಣ ಸೇರಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿತ್ತು. ಎರಡು ದಿನಗಳ ಈ ಸಮ್ಮೇಳನಕ್ಕೆ ಸುಮಾರು ₹ 10 ಲಕ್ಷ ವೆಚ್ಚವಾಗಿದೆ. ಸುಮಾರು ₹ 2.5 ಲಕ್ಷವನ್ನು ದಾನಿಗಳಿಂದ ನಗರ ಜಿಲ್ಲಾ ಘಟಕ ಸಂಗ್ರಹಿಸಿದೆ. ಇನ್ನೂ ₹ 3.5 ಲಕ್ಷ ಹೊಂದಿಸುವುದು ಕಷ್ಟಸಾಧ್ಯವಾಗಿದೆ. 

ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ರಾಜ್ಯ ಘಟಕವು ಪೂರ್ಣ ಅನುದಾನವನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಸಮ್ಮೇಳನದ ವೆಚ್ಚ ಭರಿಸಲು ದಾನಿಗಳಿಂದಲೂ ಹಣ ಸಂಗ್ರಹಿಸಿದ್ದೇವೆ.
-ಎಂ. ಪ್ರಕಾಶಮೂರ್ತಿ, ಬೆಂಗಳೂರು ನಗರ ಜಿಲ್ಲಾ ಕಸಾಪ ಅಧ್ಯಕ್ಷ

‘ಬೆಂಗಳೂರಿನಲ್ಲಿ ಕನ್ನಡ ಉಳಿಸಿ, ಬೆಳೆಸಬೇಕಾದ ಜವಾಬ್ದಾರಿ ಜಿಲ್ಲಾ ಘಟಕಕ್ಕಿಂತ ಹೆಚ್ಚು ರಾಜ್ಯ ಘಟಕದ ಮೇಲಿದೆ. ಯಾರೇ ಕನ್ನಡ ನಾಡು–ನುಡಿಗೆ ಪೂರಕವಾದ ಕಾರ್ಯಕ್ರಮಗಳು ನಡೆಸಿದಾಗ ಅದನ್ನು ಪ್ರೋತ್ಸಾಹಿಸುವ ಕೆಲಸವನ್ನು ಕಸಾಪ ರಾಜ್ಯ ಘಟಕ ಮಾಡಬೇಕು. ಆದರೆ, ಅದರದೇ ಜಿಲ್ಲಾ ಘಟಕ ನಡೆಸಿದ ಸಮ್ಮೇಳನದ ಅನುದಾನ ಬಾಕಿ ಇರಿಸಿಕೊಳ್ಳುವುದು ಸರಿಯಲ್ಲ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸಾಹಿತಿಯೊಬ್ಬರು ತಿಳಿಸಿದರು. 

ಸಲ್ಲಿಕೆಯಾದ ಬಿಲ್ಲುಗಳಿಗೆ ಅನುಗುಣವಾಗಿ ಹಣಕಾಸು ವಿಭಾಗದವರು ಅನುದಾನವನ್ನು ಬಿಡುಗಡೆ ಮಾಡುತ್ತಾರೆ. ನಿಗದಿತ ಅನುದಾನವನ್ನು ನಿರಂತರ ನೀಡಲಾಗುತ್ತದೆ.
- ಮಹೇಶ ಜೋಶಿ, ಕಸಾಪ ರಾಜ್ಯ ಘಟಕದ ಅಧ್ಯಕ್ಷ
ತಾಲ್ಲೂಕು ಸಮ್ಮೇಳನಕ್ಕೂ ಖಚಿತತೆ ಇಲ್ಲ
  ಕಸಾಪ ಜಿಲ್ಲಾ ಘಟಕಗಳು ತಾಲ್ಲೂಕು ಮಟ್ಟದಲ್ಲಿಯೂ ಸಾಹಿತ್ಯ ಸಮ್ಮೇಳನಗಳನ್ನು ನಡೆಸುತ್ತಿವೆ. ಪ್ರತಿ ತಾಲ್ಲೂಕಿನಲ್ಲಿ ನಡೆಸಲಾಗುವ ಸಮ್ಮೇಳನಕ್ಕೆ ರಾಜ್ಯ ಘಟಕವು ತಲಾ ₹ 1 ಲಕ್ಷ ಅನುದಾನ ಒದಗಿಸುತ್ತದೆ. ಬೆಂಗಳೂರು ನಗರ ಜಿಲ್ಲೆಗೆ ಸಂಬಂಧಿಸಿದಂತೆ ವಿಧಾನಸಭೆ ಕ್ಷೇತ್ರವಾರು ಘಟಕಗಳನ್ನು ನಿರ್ಮಿಸಲಾಗಿದ್ದು ರಾಜ್ಯ ಘಟಕ ತಲಾ ₹ 1 ಲಕ್ಷ ಅನುದಾನ ನೀಡಬೇಕಿದೆ. ಮಾರ್ಚ್‌ ತಿಂಗಳಲ್ಲಿಯೇ ರಾಜರಾಜೇಶ್ವರಿ ನಗರ ಆನೇಕಲ್ ಬ್ಯಾಟರಾಯನಪುರ ಹಾಗೂ ಯಶವಂತಪುರದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಗಿದೆ. ಈ ಸಮ್ಮೇಳನಗಳ ಅನುದಾನವೂ ಬಿಡುಗಡೆಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT